ADVERTISEMENT

ಧರ್ಮದ ಹೆಸರಲ್ಲಿ ಹತ್ಯೆ: ಅಮ್ಜದ್‌ ಆತಂಕ

ಮೂಡುಬಿದಿರೆ: 21ನೇ ಆಳ್ವಾಸ್ ವಿರಾಸತ್‌ಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2015, 19:30 IST
Last Updated 8 ಜನವರಿ 2015, 19:30 IST

ಮೂಡುಬಿದಿರೆ: ‘ಸಂಗೀತದಿಂದ ದೇವರು, ಕಲೆ, ಸಂಸ್ಕೃತಿಯ ಸಾಕ್ಷಾತ್ಕಾರ ವಾಗುತ್ತದೆ. ಜನರನ್ನು ಬೆಸೆಯುವ ಮಹತ್ವದ ಕೆಲಸವೂ ಇದರಿಂದ ಸಾಧ್ಯವಾಗಿದೆ. ಆದರೂ ಧರ್ಮದ ಹೆಸರಲ್ಲಿ ಹತ್ಯೆಗಳು ನಡೆಯುತ್ತಿ ರುವುದು ಆತಂಕಕಾರಿ ವಿದ್ಯಮಾನ’ ಎಂದು ಖ್ಯಾತ ಸರೋದ್ ವಾದಕ ಉಸ್ತಾದ್ ಅಮ್ಜದ್ ಅಲಿ ಖಾನ್ ಹೇಳಿದರು.

ಇಲ್ಲಿನ ವಿದ್ಯಾಗಿರಿಯ ಆಳ್ವಾಸ್ ಪ್ಯಾಲೇಸ್ ಗ್ರೌಂಡ್‌ನಲ್ಲಿ ಗುರುವಾರ ಸಂಜೆ ಆರಂಭವಾದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ 21ನೇ ವರ್ಷದ ಆಳ್ವಾಸ್ ವಿರಾಸತ್‌ನಲ್ಲಿ ಈ ಸಾಲಿನ ವಿರಾಸತ್ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

‘ಶಾಂತಿ  ಪಸರಿಸುವ ಅಗಾಧ ಶಕ್ತಿ ಇರುವ ಸಂಗೀತವನ್ನು ನಾನಷ್ಟೇ ನೆಚ್ಚಿಕೊಂಡಿಲ್ಲ, ನನ್ನ ಮುಂದಿನ ತಲೆಮಾರು ಕೂಡಾ ಇದನ್ನೇ ನೆಚ್ಚಿಕೊಂಡಿದೆ. ನನ್ನ ಮೊಮ್ಮಕ್ಕಳೂ ಸಂಗೀತ ಸೇವೆ ನಡೆಸುತ್ತಿದ್ದಾರೆ. ಸಂಗೀತದ ಮೂಲಕ ಶಾಂತಿಯ ಪರಮ ಸಂದೇಶ ಸಾರಬೇಕು ಎಂಬುದು ನನ್ನ ಆಶಯ’ ಎಂದು ಅವರು ಹೇಳಿದರು.

‘ಜಗತ್ತಿನ ನಾನಾ ಭಾಗಗಳಿಗೆ ನಾನು ಹೋಗಿದ್ದೇನೆ. ಆದರೆ ದಕ್ಷಿಣ ಭಾರತದಲ್ಲಿ ಸಂಗೀತ, ಇತರ ಕಲಾ ಪ್ರಕಾರಗಳಿಗೆ ಇರುವ ಮಹತ್ವ ಬೇರೆಲ್ಲೂ ಕಂಡಿಲ್ಲ. ಮೂಡುಬಿದಿರೆ­ಯಲ್ಲಂತೂ ಕಲಾ ಆರಾಧನೆಗಾಗಿ ಇಷ್ಟು ವ್ಯವಸ್ಥಿತವಾಗಿ ಕಾರ್ಯಕ್ರಮ ಹಮ್ಮಿ­ಕೊಂಡಿದ್ದನ್ನು ಕಂಡು ಬೆರಗಾಗಿದ್ದೇನೆ' ಎಂದು ಅವರು ಹೇಳಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅವರು ₨1 ಲಕ್ಷ  ನಗದು ಒಳಗೊಂಡ ವಿರಾಸತ್ ಪ್ರಶಸ್ತಿಯನ್ನು ಅಮ್ಜದ್ ಅಲಿ ಖಾನ್ ಅವರಿಗೆ ಪ್ರದಾನ ಮಾಡಿದರು.

ಕಳೆದ ವರ್ಷ ‘ವಿಶ್ವ ನುಡಿಸಿರಿ’ ಮತ್ತು ‘ವಿರಾಸತ್’ ಅನ್ನು ಇಲ್ಲಿ ಒಟ್ಟಿಗೆ ನಡೆಸಲಾಗಿತ್ತು. ಇನ್ನು ಮುಂದೆ ಪ್ರತಿ 10 ವರ್ಷಗಳಿಗೊಮ್ಮೆ ವಿಶ್ವ ನುಡಿಸಿರಿ ವಿರಾಸತ್ ಏರ್ಪಡಿಸುವ ಯೋಜನೆ ಇದೆ ಎಂದು ಮೋಹನ ಆಳ್ವ ಹೇಳಿದರು.
 
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ವಿರಾಸತ್‌ಗೆ ಚಾಲನೆ ನೀಡಿದರು. ನಿಟ್ಟೆ ಎಜುಕೇಷನ್ ಟ್ರಸ್ಟ್‌ ಅಧ್ಯಕ್ಷ ಎನ್.ವಿನಯ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಭಾನುವಾರದವರೆಗೆ ಪ್ರತಿದಿನ ಸಂಜೆ 6ರಿಂದ ಇಲ್ಲಿ ಸಾಂಸ್ಕೃತಿಕ ವೈಭವ ಮೆರೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.