ADVERTISEMENT

‘ನಮ್ಮ ಮೆಟ್ರೊ’ ಕೇಂದ್ರದ ಯೋಜನೆಯಲ್ಲ, ಹಿಂದಿ ಹೇರಿಕೆಯನ್ನು ಕರ್ನಾಟಕ ಸಹಿಸುವುದಿಲ್ಲ: ಸಿದ್ದರಾಮಯ್ಯ

ಏಜೆನ್ಸೀಸ್
Published 30 ಜೂನ್ 2017, 8:39 IST
Last Updated 30 ಜೂನ್ 2017, 8:39 IST
‘ನಮ್ಮ ಮೆಟ್ರೊ’ ಕೇಂದ್ರದ ಯೋಜನೆಯಲ್ಲ, ಹಿಂದಿ ಹೇರಿಕೆಯನ್ನು ಕರ್ನಾಟಕ ಸಹಿಸುವುದಿಲ್ಲ: ಸಿದ್ದರಾಮಯ್ಯ
‘ನಮ್ಮ ಮೆಟ್ರೊ’ ಕೇಂದ್ರದ ಯೋಜನೆಯಲ್ಲ, ಹಿಂದಿ ಹೇರಿಕೆಯನ್ನು ಕರ್ನಾಟಕ ಸಹಿಸುವುದಿಲ್ಲ: ಸಿದ್ದರಾಮಯ್ಯ   

ನವದೆಹಲಿ: ‘ನಮ್ಮ ಮೆಟ್ರೊ ನಿಲ್ದಾಣಗಳಲ್ಲಿ ಹಿಂದಿ ಭಾಷೆಯ ಹೇರಿಕೆಯನ್ನು ಸರ್ಕಾರ ಸಹಿಸುವುದಿಲ್ಲ. ಇದರ ವಿರುದ್ಧ ರಾಜ್ಯ ಸರ್ಕಾರ ಹೋರಾಟ ನಡೆಸಲಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ನವದೆಹಲಿ ಭೇಟಿಯಲ್ಲಿರುವ ಸಿದ್ದರಾಮಯ್ಯ ಅವರು ಬೆಂಗಳೂರು ಮೆಟ್ರೊ ನಿಲ್ದಾಣಗಳಲ್ಲಿ ಹಿಂದಿ ಭಾಷೆಯ ಬಳಕೆ ಕುರಿತು ಮಾತನಾಡಿದ್ದು, ‘ಕೇಂದ್ರ ಸರ್ಕಾರವು ತ್ರಿಭಾಷಾ ಸೂತ್ರದ ಅಡಿಯಲ್ಲಿ ಹಿಂದಿಯನ್ನು ಹೇರಲು ಬಯಸುತ್ತಿದೆ. ಇದನ್ನು ಕರ್ನಾಟಕ ಸರ್ಕಾರ ಒಪ್ಪುವುದಿಲ್ಲ. ಮೆಟ್ರೊ ಯೋಜನೆಗೆ ರಾಜ್ಯಸರ್ಕಾರವೇ ಅಧಿಕ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡಿದ್ದು, ಇದು ಕೇಂದ್ರದ ಯೋಜನೆಯಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.

ಇತ್ತೀಚೆಗೆ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು, ‘ಹಿಂದಿ ರಾಷ್ಟ್ರಭಾಷೆಯಾಗಿದ್ದು, ದೇಶದ ಪ್ರತಿಯೊಬ್ಬರೂ ಕಲಿಯಬೇಕು’ ಎಂದು ಹೇಳಿದ್ದರು. ಇದನ್ನು ಅಲ್ಲಗಳೆದಿರುವ ಸಿದ್ದರಾಮಯ್ಯ, ‘ಹಿಂದಿಯನ್ನು ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಮಾತನಾಡಲಾಗುತ್ತದೆಯೇ ಹೊರತು ದೇಶದಾದ್ಯಂತ ಬಳಕೆಯಲ್ಲಿಲ್ಲ. ವೆಂಕಯ್ಯ ನಾಯ್ಡು ಅವರ ಹೇಳಿಕೆಯನ್ನು ಒಪ್ಪಲು ಸಾಧ್ಯವಿಲ್ಲ’ ಎಂದಿದ್ದಾರೆ.

ADVERTISEMENT

ರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷಗಳ ಅಭ್ಯರ್ಥಿ ಮೀರಾಕುಮಾರ್‌ ಅವರ ನಾಮನಿರ್ದೇಶನಕ್ಕಾಗಿ ಇಲ್ಲಿಗೆ ಆಗಮಿಸಿರುವ ಅವರು, ಹಿಂದಿಯೇತರ ರಾಜ್ಯಗಳಲ್ಲಿ ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ಧೋರಣೆ ವಿರುದ್ಧ ತಮ್ಮನ್ನು ಬೆಂಬಲಿಸುವಂತೆ ಕೇಂದ್ರ ವಿರೋಧ ಪಕ್ಷಗಳ ಜತೆಗೆ ಮಾತುಕತೆ ನಡೆಸುವುದಾಗಿಯೂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.