ADVERTISEMENT

ನೀಲಿ ನಾಲಿಗೆ ರೋಗಕ್ಕೆ ಕುರಿಗಳು ಬಲಿ

ಸಂಶೋಧನಾ ಹಂತದಲ್ಲಿ ಲಸಿಕೆ; ಕುರಿಗಾಹಿಗಳು ಕಂಗಾಲು

ಕೆ.ಎಸ್.ಸುನಿಲ್
Published 24 ಅಕ್ಟೋಬರ್ 2014, 19:30 IST
Last Updated 24 ಅಕ್ಟೋಬರ್ 2014, 19:30 IST

ಗದಗ: ‘ತಿಂಗಳಿಂದ ನೀಲಿ ನಾಲ್ಗಿ ರೋಗ ಬಂದ್‌ ಕುರಿಗಳು ಸಾಯಾಕ್‌ ಹತ್ತಾವು. ರೋಗಕ್ಕ ಔಷಧ ಇಲ್ದ ಬದಕ್‌ಗಳನ್ನ (ಕುರಿಗಳು) ಹ್ಯಾಂಗ್ ಉಳಿಸ್ಕೋಬೇಕ್ ತಿಳಿವಲ್ದರಿ. ಒಂದೊಂದು ದಡ್ಡಿನ್ಯಾಗ 30ರಿಂದ 40 ಕುರಿಗಳು ಸಾಯಾಕತ್ತಾವು. ಹೊರಗ ರೊಕ್ಕಾ ಕೊಟ್ಟ ತಂದು ಉಳಸಾಕ್ ಪ್ರಯತ್ನ ಮಾಡಿದ್ರೂ ಕುರಿಗಳು ಸಾಯುದು ನೋಡಾಕ್ ಆಗವಲ್ದರಿ...’

ಜಿಲ್ಲೆಯಲ್ಲಿ ಎರಡು ತಿಂಗಳಿನಿಂದ ಸುರಿದ ಮಳೆ ಹಾಗೂ ಹವಾಮಾನ ಬದಲಾವಣೆಯಿಂದ ಕುಟುಂಬಕ್ಕೆ ಆಧಾರವಾಗಿದ್ದ ಕುರಿಗಳನ್ನು ಕಳೆದು ಕೊಂಡ ಗದಗ ತಾಲ್ಲೂಕಿನ ಬೆಳಧಡಿ, ಪಾಪನಾಶಿ, ನಾಗಾವಿ, ಕಳಸಾಪುರ, ಲಕ್ಕುಂಡಿ, ಡೋಣಿ ಗ್ರಾಮಗಳ ಕುರಿಗಾರರ ಅಳಲು ಇದು. 

ಗದಗ ತಾಲ್ಲೂಕಿನಲ್ಲಿ ಎರಡು ತಿಂಗಳಿನಿಂದ ನೀಲಿ ನಾಲಿಗೆ ರೋಗಕ್ಕೆ 500ಕ್ಕೂ ಹೆಚ್ಚು ಕುರಿಗಳು ಬಲಿ ಯಾಗಿವೆ. ವಿಪರ್ಯಾಸವೆಂದರೆ, ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿ ಇಲಾಖೆಗೆ ಅಲೆದು ಬೇಸತ್ತ ಕುರಿಗಾಹಿಗಳು, ಅಧಿಕಾರಿಗಳಿಗೆ ಕುರಿಗಳು ಸತ್ತ ಮಾಹಿತಿಯೂ ನೀಡದೆ ಮಣ್ಣು ಮಾಡುತ್ತಿದ್ದಾರೆ.

‘ಈಗಾಗಲೇ ಸಾಕಷ್ಟು ಕುರಿಗಳು ಸತ್ರೂ ಸರ್ಕಾರದಿಂದ ಬಿಡಿಗಾಸು ಪರಿಹಾರ ಬಂದಿಲ್ಲ, ಹದಿನೈದ ವರ್ಷದಿಂದ ಈ ರೋಗಕ್ಕ ಔಷಧ ಕಂಡು ಹಿಡಿದಿಲ್ರಿ, ಯಾವ ಔಷಧ ಕೊಟ್ರೂ ಕಡಿಮೆ ಆಗಿಲ್ರಿ. ಏನ್‌ ಮಾಡೊದ್‌ ತಿಳಿವಲ್ದು’ ಎಂದು ಪಾಪನಾಶಿಯ ಕುರಿಗಾಹಿ ಮಾರೇಪ್ಪ ಚಿಂಗಳೆ ನೋವು ತೋಡಿಕೊಂಡರು.

ರೋಗದ ಲಕ್ಷಣ: ನೀಲಿ ನಾಲಿಗೆ ರೋಗ ಕ್ಯೂಲಿಕಾಯಡ್ಸ್‌ ನೊಣಗಳಿಂದ ಹರಡುತ್ತದೆ. ಮಳೆಗಾಲದಲ್ಲಿ ಹಾಗೂ ಹೆಚ್ಚಾಗಿ ಜೌಗು ಪ್ರದೇಶಗಳಲ್ಲಿ ಇದು ಕಂಡುಬರುತ್ತದೆ. ಪ್ರಾರಂಭದಲ್ಲಿ ಕುರಿಗಳಲ್ಲಿ ಜ್ವರ ಬಂದು ತುಟಿ, ಗದ್ದ, ಕಿವಿಗಳಲ್ಲಿ ಊತ ಕಾಣಿಸಿಕೊಂಡು ಬಾಯಲ್ಲಿ ಜೊಲ್ಲು ಸೋರುತ್ತದೆ. ನಾಲಿಗೆ ನೀಲಿ ವರ್ಣಕ್ಕೆ ತಿರುಗಿ ಹಾಗೂ ಕುರಿಗಳು ಕುಂಟಲು ಆರಂಭಿಸುತ್ತವೆ. ಕುರಿಗಳ ಮೇಲಿನ ಉಣ್ಣೆ ಉದುರಲು ಶುರುವಾಗುತ್ತದೆ.

ಕುರಿ ಸಾಕಾಣಿಕೆಯನ್ನೇ ನಂಬಿ ಬದುಕಿನ ಬಂಡಿ ಸಾಗಿಸುತ್ತಿರುವ ಅನೇಕ ಕುರಿಗಾರರ ಕುಟಂಬಗಳಿಗೆ ನೀಲಿ ರೋಗ ದೊಡ್ಡ ಬರೆ ಎಳೆದಿದೆ. ಮಾರು ಕಟ್ಟೆಯಲ್ಲಿ ಒಂದೊಂದು ಕುರಿಗೆ (ಗಾತ್ರಕ್ಕೆ ತಕ್ಕಂತೆ) ರೂ 5ರಿಂದ 6 ಸಾವಿರ ದರ ಇದೆ. ಇದೇ ಕುರಿಗಳು ಮರಿ ಹಾಕಿ, ಸಂತತಿ ಬೆಳೆದು ಕುರಿಗಾರರ ಜೀವನ ಸಾಗುತ್ತದೆ.

‘ಅಜ್ಜನ ಕಾಲದಿಂದಲೂ ಕುರಿ ಕಾಯ್ಕೊಂಡು ಜೀವನ ನಡೆಸೇನ್ರಿ. ಏನ್‌ ಮಾಡೊದ್‌ ಮಳ್ಯಾಗ್‌ ನೆನೆದು ಕುರಿಗಳ ಸತ್ತು ಹೋದ್ವು. ಜೀವನಾ ಹ್ಯಾಂಗ್‌ ನಡೆಸೋದು ಗೊತ್ತಿಲ್ರಿ. ಹ್ಯಾಂಗರ್‌ ಮಾಡಿ ಪರಿಹಾರ ಕೊಡಿಸ್ರಿ, ನಿಮಗ್‌ ಪುಣ್ಯ ಬರ್ತೈತಿ...’ ಎಂದು ತಿಂಗಳಲ್ಲಿ 30 ಕುರಿಗಳನ್ನು ಕಳೆದುಕೊಂಡ ಅಡವಿಸೋಮಾಪುರದ ಮಂಜುನಾಥ ಜಡಿ ಗೋಳಾಡಿದರು.

‘ನೀಲಿ ನಾಲಿಗೆ ರೋಗಕ್ಕೆ ಲಸಿಕೆ ಇನ್ನೂ ಸಂಶೋಧನೆ ಹಂತದಲ್ಲಿದೆ. ರೋಗದ ನಿಯಂತ್ರಣಕ್ಕೆ ಕುರಿಗಳನ್ನು ಮಳೆಗಾಲದಲ್ಲಿ ಮುಂಜಾನೆ ಹಾಗೂ ಸಂಜೆ ತಗ್ಗು ಪ್ರದೇಶದಲ್ಲಿ ಮೇಯಿಸ ಬಾರದು. ಮಳೆಗಾಲ ಮತ್ತು ಚಳಿಗಾಲದಲ್ಲಿ ಉಣ್ಣೆ ಕತ್ತರಿಸಬಾರದು. ಮುಂಜಾಗ್ರತಾ ಕ್ರಮವಾಗಿ ರೋಗ ಬಂದ ಕುರಿಗಳನ್ನು ಇತರ ಕುರಿಗಳಿಂದ ಬೇರ್ಪಡಿಸಬೇಕು. ಸೋಡಾ ಪುಡಿ ಯಿಂದ ಕುರಿಗಳ ಬಾಯಿ ಸ್ವಚ್ಛಗೊಳಿಸಿ, ಹೆಸರು ಪಾಯಸ ಕುಡಿಸಬೇಕು. ಕುರಿಗಳು ಸತ್ತಾಗ ಮಾಹಿತಿ ನೀಡಿದರೆ ಮರಣೋತ್ತರ ಪರೀಕ್ಷೆ ನಡೆಸಿ ಪರಿಹಾರ ನೀಡುವಂತೆ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮಕ್ಕೆ ಪತ್ರ ಬರೆ ಯಲಾಗುವುದು’ ಎಂದು ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ವಿ.ಜಿ. ಬಂಡಿ ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.