ADVERTISEMENT

ನೇಪಾಳದಲ್ಲಿ 85 ಕನ್ನಡಿಗರು ಸುರಕ್ಷಿತ: ಸರ್ಕಾರ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2015, 12:44 IST
Last Updated 25 ಏಪ್ರಿಲ್ 2015, 12:44 IST

ಬೆಂಗಳೂರು: ಭೂಕಂಪದಿಂದ ತತ್ತರಿಸಿರುವ ನೇಪಾಳ ಪ್ರವಾಸದಲ್ಲಿರುವ 85 ಕನ್ನಡಿಗರು ಸುರಕ್ಷಿತವಾಗಿದ್ದಾರೆ ಎಂದು ರಾಜ್ಯ ಸರ್ಕಾರ ಹೇಳಿದೆ. ಮತ್ತೊಂದೆಡೆ, ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ಸಹಾಯವಾಣಿ ಆರಂಭಿಸಿದೆ.

ನೇಪಾಳಕ್ಕೆ ತೆರಳಿರುವ ಕನ್ನಡಿಗರೊಂದಿಗೆ ರಾಜ್ಯ ಸರ್ಕಾರ ಮೊದಲ ಯತ್ನದಲ್ಲೇ ಸಂಪರ್ಕ ಸಾಧಿಸಿದ್ದು, ಗೋರಖ್‌ಪುರ ಮಾರ್ಗವಾಗಿ ನೇ‍ಪಾಳದಿಂದ ನಾಳೆ ಸಂಜೆ ವಾರಾಣಸಿಗೆ ತಲುಪಲಿದ್ದಾರೆ ಎಂಬ ವರದಿಗಳಿವೆ ಎಂದು ಸರ್ಕಾರವು ಪ್ರಕಟಣೆಯಲ್ಲಿ ತಿಳಿಸಿದೆ.

ಸಹಾಯವಾಣಿ ತೆರದ ಸರ್ಕಾರ: ನೇಪಾಳ ಹಾಗೂ ಉತ್ತರ ಭಾರತದಲ್ಲಿ ಸಂಭವಿಸಿರುವ ಪ್ರಬಲ ಭೂಕಂಪದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಪರಿಸ್ಥಿತಿಯನ್ನು ಅವಲೋಕಿಸಲು ಮುಖ್ಯ ಕಾರ್ಯದರ್ಶಿ ಅವರಿಗೆ ಸೂಚಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಕಾರ್ಯಾಲಯ ಸರಣಿ ಟ್ವೀಟ್ ಮಾಡಿದೆ.

ADVERTISEMENT

ಅಲ್ಲದೇ, ಅಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಯ ನಿಟ್ಟಿನಲ್ಲಿ ನೇಪಾಳದ ಹಿರಿಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರಲು ಇಬ್ಬರು ಅಧಿಕಾರಿಗಳನ್ನು ನಿಯೋಜಿಸಿರುವ ಸರ್ಕಾರ, ಸಹಾಯ ವಾಣಿಯನ್ನೂ ಸ್ಥಾಪಿಸಿದೆ.

ಮತ್ತೊಂದೆಡೆ, ಅಗತ್ಯ ಬಿದ್ದರೆ ನೆರೆಯ ನೇಪಾಳಕ್ಕೆ ವೈದ್ಯಕೀಯ ನೆರವಿಗಾಗಿ ವೈದ್ಯರ ತಂಡವನ್ನು ಕಳುಹಿಸಲು ಸಜ್ಜಾಗಿರುವಂತೆ ಆರೋಗ್ಯ ಸಚಿವ ಯು.ಟಿ. ಖಾದರ್ ಅವರಿಗೆ ಸಿದ್ದರಾಮಯ್ಯ ಅವರು ಸೂಚಿಸಿದ್ದಾರೆ.

ಸಹಾಯವಾಣಿ ಕೊಠಡಿಯ ಸಂಖ್ಯೆ ಇಂತಿದೆ: 1070/ 080-22340676/22032582/22353980

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.