ADVERTISEMENT

‘ಪಾತಾಳ ಗಂಗೆ’ಗೂ ಕನ್ನ

ನೆಲದಡಿಯ ನೀರು ಮೇಲೆತ್ತುವ ರಾಜ್ಯ ಸರ್ಕಾರದ ಯೋಜನೆ ಸಿದ್ಧ

ರಾಜೇಶ್ ರೈ ಚಟ್ಲ
Published 25 ಏಪ್ರಿಲ್ 2017, 19:30 IST
Last Updated 25 ಏಪ್ರಿಲ್ 2017, 19:30 IST
‘ಪಾತಾಳ ಗಂಗೆ’ಗೂ ಕನ್ನ
‘ಪಾತಾಳ ಗಂಗೆ’ಗೂ ಕನ್ನ   

ಬೆಂಗಳೂರು: ಕುಡಿಯುವ ನೀರಿನ ಸಮಸ್ಯೆಗೆ ಮಾರ್ಗೋಪಾಯ ಹುಡುಕುತ್ತಿರುವ ರಾಜ್ಯ ಸರ್ಕಾರ, ನೆಲದಡಿಯಲ್ಲಿ ಸ್ವಾಭಾವಿಕವಾಗಿ ಹರಿಯುವ ನೀರನ್ನೂ ‘ಪಾತಾಳ ಗಂಗೆ’ ಹೆಸರಿನಲ್ಲಿ ಮೇಲೆತ್ತಲು ಮುಂದಾಗಿದೆ.

ಸಮುದ್ರದ ಆಳದಲ್ಲಿರುವ ತೈಲವನ್ನು ಮೇಲೆತ್ತಿದ ರೀತಿಯಲ್ಲಿಯೇ ಭೂಮಿ ಆಳದಲ್ಲಿ  ಹರಿಯುವ ನೀರನ್ನು ಮೇಲೆತ್ತುವ ಯೋಜನೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ (ಆರ್‌ಡಿಪಿಆರ್‌) ‘ವಾಟರ್‌ಕ್ವೆಸ್ಟ್‌’ ಸಂಸ್ಥೆಯ ಸಹಯೋಗದಲ್ಲಿ ಸಿದ್ಧಪಡಿಸಿದೆ.

ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಅಮೆರಿಕದ ‘ಸ್ಕೈಕ್ವೆಸ್ಟ್’ ಸಂಸ್ಥೆಯ ಅಂಗ ಸಂಸ್ಥೆಯಾಗಿರುವ ‘ವಾಟರ್‌ಕ್ವೆಸ್ಟ್‌’ ಭಾರತದಲ್ಲಿ 2015ರಲ್ಲಿ ನೋಂದಣಿಯಾಗಿದೆ.

ADVERTISEMENT

ರಾಜ್ಯದ 10 ಕಡೆಗಳಲ್ಲಿ 6 ತಿಂಗಳ ಅವಧಿಯಲ್ಲಿ ಹಂತಹಂತವಾಗಿ  ಯೋಜನೆ ಕಾರ್ಯಗತಗೊಳಿಸುವ ಪ್ರಸ್ತಾವನೆಯನ್ನು ‘ವಾಟರ್‌ಕ್ವೆಸ್ಟ್‌’ ಸಲ್ಲಿಸಿದೆ.  ಮೊದಲು ಗಂಟೆಗೆ ಸರಾಸರಿ 80ರಿಂದ 120 ಕ್ಯುಬಿಕ್‌ ಮೀಟರ್‌ (ಒಂದು ಕ್ಯುಬಿಕ್‌ ಮೀಟರ್‌ ಅಂದರೆ ಒಂದು ಸಾವಿರ ಲೀಟರ್‌ ನೀರು) ನೀರು ಮೇಲೆ ತ್ತುವ 2 ಬಾವಿಗಳನ್ನು (ಕೊಳವೆ ಬಾವಿ ಮಾದರಿಯಲ್ಲಿ) ತಲಾ ₹ 12.48 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲಿದೆ.

ಸರಾಸರಿ ಅಷ್ಟೇ ಪ್ರಮಾಣದಲ್ಲಿ ನೀರೆತ್ತುವ ಉಳಿದ ಎಂಟು ಬಾವಿಗಳಿಗೆ ವೆಚ್ಚ ಕಡಿಮೆ ಮಾಡಿ ಅಂದರೆ, ತಲಾ ₹9.26 ಕೋಟಿ ವೆಚ್ಚದಲ್ಲಿ ಕೊರೆಯಲಿದೆ. ಎಲ್ಲಾ 10 ಬಾವಿಗಳಿಗೆ ಸರಾಸರಿ  ₹9.90ಕೋಟಿ ವೆಚ್ಚವಾಗಲಿದೆ ಎಂದು ಸಂಸ್ಥೆ ಪ್ರಸ್ತಾವನೆಯಲ್ಲಿ ತಿಳಿಸಿದೆ.

‘ದೇಶದಲ್ಲೇ ಮೊದಲ ಬಾರಿಗೆ ಇಂಥ ಪ್ರಯತ್ನ ಮಾಡಲಾಗುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಮತ ಸೂಚಿಸಿದ್ದಾರೆ.  ಸಂಪುಟದ  ಒಪ್ಪಿಗೆ ಬಳಿಕ ಆಯ್ದ ಸ್ಥಳಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಗುವುದು’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ  ಮೂಲಗಳು ತಿಳಿಸಿವೆ.

‘ನೆಲದ ಅಡಿಯಲ್ಲಿ ಸ್ವಾಭಾವಿಕವಾಗಿ ಹರಿಯುವ ನೀರಿನ ಸೆಲೆಗಳನ್ನು ವಾಟರ್‌ಕ್ವೆಸ್ಟ್ ಪತ್ತೆ ಮಾಡಿದೆ. ಮಳೆ ನೀರು ಅಥವಾ ಮೇಲ್ಮೈ ನೀರಿನಿಂದ ಇದು ಸ್ವತಂತ್ರವಾಗಿರುತ್ತದೆ. ಸಮುದ್ರದ ನೀರು ಭೂಮಿಗೆ  ಇಳಿಮುಖವಾಗಿ ಹರಿಯುವುದರಿಂದ ಸೆಲೆ ಬತ್ತುವುದಿಲ್ಲ. ಸ್ವಯಂ ಆಗಿ ಭರ್ತಿಯಾಗುತ್ತದೆ’ ಎಂದೂ ಮೂಲಗಳು ಹೇಳಿವೆ.

‘ಈ ಯೋಜನೆಯಲ್ಲಿ ಗ್ರಾಮೀಣ ಭಾಗಗಳಿಗೆ ನೀರು ಪೂರೈಸಲು ಬೃಹತ್‌ ಗಾತ್ರದ ಕೊಳವೆಗಳನ್ನು ಅಳವಡಿಸುವ ಅಗತ್ಯವಿಲ್ಲ. ಭೂಮಿ ಸ್ವಾಧೀನಪಡಿಸಿಕೊಳ್ಳುವ ಅಗತ್ಯವೂ ಇಲ್ಲದಿರುವುದರಿಂದ ಯೋಜನಾ ವೆಚ್ಚ ಕಡಿಮೆಯಾಗಲಿದೆ. ಸ್ಥಿರವಾಗಿರುವ ನೀರಿನ ಬದಲು ಹರಿಯುವ ನೀರು ಮೇಲೆತ್ತುವುದರಿಂದ ಪರಿಸರದ ಮೇಲೂ ಪರಿಣಾಮ ಆಗುವುದಿಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಯೋಜನೆ ಅನುಷ್ಠಾನಗೊಂಡ 4–5 ದಿನ ನೀರು ಪಂಪ್‌ ಮಾಡಿ, ಅದರ ಆಧಾರದಲ್ಲಿ ನೆಲದಡಿಯ ಹರಿವಿನ ವೇಗ ಮತ್ತು ಸ್ಥಿರ ನೀರಿನ ಮಟ್ಟ ಖಚಿತಪಡಿಸಿಕೊಳ್ಳಲಾಗುವುದು. ನೀರಿನ ಪ್ರಮಾಣದಲ್ಲಿ ಶೇ 15ರಷ್ಟು ಹೆಚ್ಚು–ಕಡಿಮೆ ಇದ್ದರೂ ಯೋಜನೆ ಯಶಸ್ವಿಯಾಗಿದೆ ಎಂಬುದಾಗಿ ಪರಿಗಣಿಸಲಾಗುವುದು’ ಎಂದೂ ಮೂಲಗಳು ವಿವರಿಸಿವೆ.

‘ನೋ ವಾಟರ್‌; ನೋ ಮನಿ’:  ‘ನೀರು ಸಿಗದಿದ್ದರೆ ಹಣವೂ ಇಲ್ಲ’ ಎಂಬ ಒಪ್ಪಂದದಡಿ ಯೋಜನೆ ಅನುಷ್ಠಾನಗೊಳಿಸಲಾಗುವುದು. ಮೊದಲ ಎರಡು ಬಾವಿಗಳ ಯೋಜನೆ ಯಶಸ್ವಿಯಾದ ಬಳಿಕ ಶೇ 100ರಷ್ಟು ಹಣ ಪಾವತಿಸಬೇಕು. ಆನಂತರದ ಮೂರು ಬಾವಿಗಳ ನಿರ್ಮಾಣಕ್ಕೆ ಶೇ 25ರಷ್ಟು  ಮುಂಗಡ ನೀಡಬೇಕು. ಆನಂತರ ಶೇ 75ರಷ್ಟು  ನೀಡಬೇಕು.

ಮಿಕ್ಕ 5 ಬಾವಿಗಳ ನಿರ್ಮಾಣಕ್ಕೆ ಶೇ 50ರಷ್ಟು ಮುಂಗಡ ಕೊಡಬೇಕು. ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಿಕ್ಕರೆ ಬಾಕಿ ಹಣ ನೀಡಬೇಕು ಎಂಬ ಆಧಾರದಲ್ಲಿ ಕಾರ್ಯಗತಗೊಳಿಸಲಾಗುತ್ತಿದೆ.

ಜಲತಜ್ಞರು,ವಿಜ್ಞಾನಿಗಳ ವಿರೋಧ

ಬೆಂಗಳೂರು: ನೆಲದಾಳದ ನೀರಿನ ಯೋಜನೆಗೆ ಜಲತಜ್ಞರು, ಭೂಗರ್ಭ ವಿಜ್ಞಾನಿಗಳು, ಪರಿಸರವಾದಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

‘ನಾವು ಮಳೆ ನೀರು ಹಿಡಿದಿಟ್ಟು ಬರ ಎದುರಿಸಲು ಸಿದ್ಧರಾಗಬೇಕೇ ಹೊರತು, ಇಂತಹ ಯೋಜನೆಗಳ ಮೂಲಕ ಅಲ್ಲ. ಇವುಗಳಿಂದ ಜನರ ಬದುಕು ಇನ್ನಷ್ಟು ದುಸ್ತರವಾಗಲಿದೆ’ ಎಂದು ಆಕ್ಷೇಪಿಸಿದ್ದಾರೆ.

‘ನೀರು ಮೇಲೆತ್ತುವ ಈ ತಂತ್ರಜ್ಞಾನದ ಕುರಿತು ನನಗೆ ಗೊತ್ತಿಲ್ಲ.  ನೀರು ತರುವುದರಲ್ಲಿ ಯೋಜನೆ ಎಷ್ಟು ಸಫಲವಾಗುತ್ತದೋ ಅದೂ ಗೊತ್ತಿಲ್ಲ. ಆದರೆ, ಇದು ಸುಸ್ಥಿರ ದಾರಿ ಅನಿಸುವುದಿಲ್ಲ. ಇದರಿಂದ ಭಾರಿ ಹಾನಿ ಆಗುವುದರಲ್ಲಿ ಯಾವುದೇ ಸಂದೇಹವೇ ಇಲ್ಲ’ ಎನ್ನುತ್ತಾರೆ ಜಲ ತಜ್ಞ ಶ್ರೀ ಪಡ್ರೆ.

‘ನಮಗೆ ಮೋಡ ಬಿತ್ತನೆ ಬೇಕಿಲ್ಲ. ಪಾತಾಳ ಗಂಗೆಯಂಥ ಯೋಜನೆಯ ಅಗತ್ಯವೂ ಇಲ್ಲ. ಮಿತವ್ಯಯದ ಸಾಕಷ್ಟು ಯೋಜನೆಗಳಿವೆ. ಬಿದ್ದ ಮಳೆ ನೀರನ್ನು ಅಲ್ಲಲ್ಲಿ ಹಿಡಿದಿಡಬೇಕು’ ಎನ್ನುತ್ತಾರೆ ಪಡ್ರೆ.

‘ಅಂತರ್ಜಲ ನಮ್ಮ ಮಕ್ಕಳು, ಮೊಮ್ಮಕ್ಕಳಿಗೆ ಸಂಬಂಧಿಸಿದ್ದು. ಅದರ ಮೇಲೆ ನಮಗೆ ಹಕ್ಕಿಲ್ಲ. ಅದಕ್ಕೆ ಕನ್ನ ಹಾಕುವುದು ಮೂರ್ಖತನದ ಕೆಲಸ. ಮಳೆ ನೀರಿನ ಸಂಗ್ರಹದ ಮೂಲಕ ನೀರು ಸಂರಕ್ಷಿಸುವ ಕೆಲಸಕ್ಕೆ ನಾವು ಮುಂದಾಗಬೇಕು’ ಎನ್ನುತ್ತಾರೆ ವಿಜ್ಞಾನಿ ಟಿ.ವಿ. ರಾಮಚಂದ್ರ.

‘ರಾಜ್ಯ ಬರದಿಂದ ತತ್ತರಿಸುತ್ತಿರುವಾಗ ನೆಲದಡಿಯ ನೀರು ತೆಗೆಯಲು ಮುಂದಾಗಿರುವುದು ಅತ್ಯಂತ ಅಪಾಯಕಾರಿ ಸಂಗತಿ. ಭಯೋತ್ಪಾದನೆ ನಮ್ಮ ಕಾಲಕ್ಕೆ ಭೀತಿ ಹುಟ್ಟಿಸುವ ಪ್ರಕ್ರಿಯೆಯಾದರೆ,  ಅಂತರ್ಜಲಕ್ಕೆ ಕನ್ನ ಹಾಕುವ ಈ ಪ್ರಕ್ರಿಯೆ ಮುಂದಿನ ಪೀಳಿಗೆಗೆ ನಾವು ಸೃಷ್ಟಿಸುವ ಭಯೋತ್ಪಾದನೆ’ ಎಂದೂ ಅವರೂ ಆಕ್ರೋಶ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.