ADVERTISEMENT

ಪುಸ್ತಕ ಮಾರಲು ಲಡ್ಡು ಕೊಡಬೇಕು: ಶೋಭಾ ಡೇ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2013, 19:59 IST
Last Updated 28 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ‘ಅಯ್ಯೋ, ಯಾಕೆ ಕೇಳ್ತೀರಿ. ಪುಸ್ತಕ ಮಾರಾಟ ಮಾಡಲು ಏನೆಲ್ಲ ತಂತ್ರ ಬಳಸಲಾಗುತ್ತದೆ ಗೊತ್ತಾ? ದೊಡ್ಡ, ದೊಡ್ಡ ಪುಸ್ತಕ ಮಳಿಗೆಗಳಿಗೆ ಕೃತಿ ಲೇಖಕರೇ ಭೇಟಿ ಕೊಡುತ್ತಾರೆ. ಮಳಿಗೆಗಳ ಮುಖ್ಯಸ್ಥರಿಗೆ ಲಡ್ಡು ಕಳುಹಿಸುತ್ತಾರೆ. ತಮ್ಮ ಪುಸ್ತಕ ಟಾಪ್‌ ಟೆನ್‌ನಲ್ಲಿ ಇರುವಂತೆ ನೋಡಿಕೊಳ್ಳುತ್ತಾರೆ’

–ಖ್ಯಾತ ಅಂಕಣಕಾರ್ತಿ ಶೋಭಾ ಡೇ ಬೆಂಗಳೂರು ಸಾಹಿತ್ಯೋತ್ಸವದಲ್ಲಿ ಶನಿವಾರ ಪುಸ್ತಕ ಮಾರಾಟ ಉದ್ಯಮದ ಒಳಹೊರಗುಗಳನ್ನು ಎಳೆ–ಎಳೆಯಾಗಿ ಬಿಡಿಸಿಟ್ಟರು.

‘ಪುಸ್ತಕ ಮಳಿಗೆಗಳ ಮುಖ್ಯಸ್ಥರನ್ನು ಚೆನ್ನಾಗಿ ನೋಡಿಕೊಂಡರೆ ಅವರು, ಎಲ್ಲರ ಕಣ್ಣಿಗೆ ಬೀಳು­ವಂತೆ ನಮ್ಮ ಪುಸ್ತಕ ಪೇರಿಸಿಡುತ್ತಾರೆ. ವಾರದ ಅತ್ಯು­ತ್ತಮ ಮಾರಾಟದ ಕೃತಿ ಎಂದು ಗ್ರಾಹಕರಿಗೆ ಪುಸಲಾಯಿಸಿ ಹೆಚ್ಚಿನ ಪ್ರತಿಗಳು ಮಾರಾಟವಾ­ಗುವಂತೆ ನೋಡಿಕೊಳ್ಳುತ್ತಾರೆ’ ಎಂದು ವಿವರಿಸಿ ದರು. ‘ಪುಸ್ತಕ ಮಾರಾಟದ ಈ ಅಡ್ಡ ಹಾದಿ­ಗಳಿಂದಾಗಿ ಟಾಪ್‌ ಟೆನ್‌ ಶ್ರೇಯಾಂಕಗಳು ಸಾಮಾನ್ಯವಾಗಿ ತಪ್ಪು ಮಾಹಿತಿಗಳಿಂದ ಕೂಡಿರು­ತ್ತವೆ’ ಎಂಬ ಕೋಪವನ್ನೂ ಅವರು ತೋರಿದರು.

‘ನೀವೂ ಇಂತಹ ತಂತ್ರ ಅನುಸರಿಸಿದ್ದೀರಾ ಎಂಬ ತುಂಟ ಪ್ರಶ್ನೆಯನ್ನು ನನಗೆ ಕೇಳುವುದು ಬೇಡ’ ಎಂದು ಹೇಳುವ ಮೂಲಕ ಶೋಭಾ ಸಭಿಕರಲ್ಲಿ ನಗೆ ಉಕ್ಕಿಸಿದರು.

ಶೋಭಾ ಮಾತು ಒಪ್ಪದ ಹಿರಿಯ ಲೇಖಕಿ ಶಶಿ ದೇಶಪಾಂಡೆ, ‘ನಾನು ಯಾವ ಮಳಿಗೆಗೂ ಭೇಟಿ ಕೊಟ್ಟಿಲ್ಲ. ಲಡ್ಡು ಸಹ ಕಳುಹಿಸಿಲ್ಲ. ಹೀಗಿದ್ದೂ ನನ್ನ ಪುಸ್ತಕಗಳು ಮಾರಾಟವಾಗುತ್ತಿವೆ’ ಎಂದು ಹೇಳಿದರು.

‘ಬೈಬಲ್‌ ಮತ್ತು ಗೀತೆ ಪ್ರತಿಗಳು ದಶಕಗಳಿಂದ ಮಾರಾಟ ಆಗುತ್ತಿವೆ. ಆದರೆ, ಅವುಗಳನ್ನು ಚೆನ್ನಾಗಿ ಮಾರಾಟವಾಗುವ ಕೃತಿಗಳು (ಬೆಸ್ಟ್‌ ಸೆಲ್ಲರ್‌ಗಳು) ಎನ್ನಲಾಗುವುದಿಲ್ಲ’ ಎಂದ ದೇಶಪಾಂಡೆ, ‘ಕೃತಿ ರಚನೆಯಲ್ಲಿ ತೊಡಗಿಕೊಂಡವರಿಗೆ ಅದರ ಮಾರಾಟದ ಚಿಂತೆ ಬೇಕಿಲ್ಲ. ಹೃದಯ ಮತ್ತು ಆತ್ಮದ ಪಿಸುಮಾತುಗಳಿಗೆ ಕಿವಿಯಾಗಿ ಬರೆಯಬೇಕು’ ಎಂದು ಅಭಿಪ್ರಾಯಪಟ್ಟರು.


‘ಕೆಟ್ಟ ಪುಸ್ತಕಗಳನ್ನು ಯಾವುದೇ ತಂತ್ರ ಬಳಸಿ ಹೆಚ್ಚುಕಾಲ ಮಾರಲು ಸಾಧ್ಯವಿಲ್ಲ. ಸಾಮಾಜಿಕ ಜಾಲತಾಣಗಳು ಅತ್ಯಂತ ಕ್ರಿಯಾಶೀಲವಾದ ಸಮಯ ಇದು. ಯಾವುದೇ ಕೃತಿ ಬಿಡುಗಡೆಯಾದ 3–4 ದಿನಗಳಲ್ಲಿ ಅದರ ಹಣೆಬರಹ ಗೊತ್ತಾಗಿ­ಬಿಡುತ್ತದೆ. ನೈಜ ವಿಮರ್ಶೆ ಫೇಸ್‌ಬುಕ್‌ನಲ್ಲಿ ಇರುತ್ತದೆ’ ಎಂದು ಶೋಭಾ ದನಿಗೂಡಿಸಿದರು.

ಪುಸ್ತಕಗಳನ್ನು ಬಿಟ್ಟು ನಮ್ಮದನ್ನೇ ಆಯ್ದು­ಕೊಳ್ಳುವಂತೆ ಮಾಡಲು ಮುಖಪುಟ ವಿನ್ಯಾಸವನ್ನು ಆಕರ್ಷಕಗೊಳಿಸಬೇಕು. ಜನ ನೋಡುವುದು ಪುಸ್ತಕದ ಹೊದಿಕೆ­ಯನ್ನು’ ಎಂದು ಯುವ ಬರಹಗಾರ ಅಶ್ವಿನ್‌ ಸಂಘಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT