ADVERTISEMENT

ಪೊಲೀಸರಿಂದ ದೌರ್ಜನ್ಯ ಆರೋಪ

ಬೆಳ್ತಂಗಡಿ ಎಸ್‌ಐ, ಸಿಬ್ಬಂದಿಯಿಂದ ಹಲ್ಲೆ: ಸವಣಾಲು ಪ್ರಕರಣದಲ್ಲಿ ಮೂವರ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2015, 20:18 IST
Last Updated 30 ಡಿಸೆಂಬರ್ 2015, 20:18 IST

ಮಂಗಳೂರು: ವಂಚನೆ ಪ್ರಕರಣದ ಆರೋಪಿಯೊಬ್ಬನನ್ನು ಬಂಧಿಸುವಾಗ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಬೆಳ್ತಂಗಡಿ ಪೊಲೀಸರು ಸೋಮವಾರ ರಾತ್ರಿ ವಶಕ್ಕೆ ಪಡೆದಿದ್ದ ಮೂವರು ಯುವಕರನ್ನು ಮಂಗಳವಾರ ರಾತ್ರಿ ಬಿಡುಗಡೆ ಮಾಡಿದ್ದಾರೆ. ಪೊಲೀಸರು ತಮ್ಮ ಮೇಲೆ ಹಲ್ಲೆ ನಡೆಸಿದ್ದು, ಚಿಕಿತ್ಸೆ ಪಡೆಯದಂತೆ ಮತ್ತು ದೂರು ನೀಡದಂತೆ ಷರತ್ತು ವಿಧಿಸಿದ್ದಾರೆ ಎಂದು ಬಂಧಿತರಾಗಿದ್ದ ಮೂವರು ಆರೋಪಿಸಿದ್ದಾರೆ.

ಪೊಲೀಸರಿಂದ ಬಂಧಿತರಾಗಿ ಬಿಡುಗಡೆ ಹೊಂದಿರುವ ರೂಪೇಶ್‌ ಸಲ್ಡಾನ, ಇಲಿಯಾಸ್‌ ಸಲ್ಡಾನ ಮತ್ತು  ಅನುಪಮ್‌ ಗಾಡ್ವಿನ್‌ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂವರೂ ತೀರಾ ಬಳಲಿದ್ದು, ಮೈಯೆಲ್ಲ ಬಾಸುಂಡೆಗಳು ಎದ್ದಿವೆ. ರೂಪೇಶ್‌ ಕಿವಿಯಲ್ಲಿ ರಕ್ತ ಸೋರುತ್ತಿತ್ತು. ಬೆಳ್ತಂಗಡಿ ಠಾಣೆಯ ಸಬ್‌ಇನ್‌ಸ್ಪೆಕ್ಟರ್‌ ಸಂದೇಶ್‌ಕುಮಾರ್‌ ಮತ್ತು ಸಿಬ್ಬಂದಿ ಠಾಣೆಗೆ ಕರೆದೊಯ್ದು ಥಳಿಸಿದ್ದು ತಮ್ಮ ಈಗಿನ ಸ್ಥಿತಿಗೆ ಕಾರಣ ಎಂದು ಅವರು ಆರೋಪಿಸಿದರು.

‘ನಮ್ಮನ್ನು ಠಾಣೆಗೆ ಕರೆದೊಯ್ದ ಪೊಲೀಸರು ರಾತ್ರಿಯಿಡೀ ಹಲ್ಲೆ ನಡೆಸಿದರು. ಮೂವರನ್ನೂ ಬೋರಲಾಗಿ ಮಲಗಿಸಿ ಬೆನ್ನಿನ ಮೇಲೆ ಲಾಠಿಗಳನ್ನು ಇರಿಸಿದರು, ಅದರ ಮೇಲೆ ಪೊಲೀಸ್‌ ಸಿಬ್ಬಂದಿ ಮನಬಂದಂತೆ ನರ್ತಿಸಿದರು. ಅಂಗಾಲುಗಳ ಮೇಲೆ ನಿರಂತರವಾಗಿ ಲಾಠಿಯಿಂದ ಹೊಡೆದಿದ್ದಾರೆ. ಇದರಿಂದಾಗಿ ಎದ್ದು ನಿಲ್ಲುವುದಕ್ಕೂ ಆಗುತ್ತಿಲ್ಲ. ಅಂಗೈಗಳಿಗೂ ಲಾಠಿಯಿಂದ ಹಲ್ಲೆ ನಡೆಸಿದ್ದು, ಕೈ ಬೆರಳುಗಳನ್ನು ಅಲ್ಲಾಡಿಸುವುದಕ್ಕೂ ಸಾಧ್ಯವಾಗುತ್ತಿಲ್ಲ’ ಎಂದು ರೂಪೇಶ್‌ ಮತ್ತು ಇಲಿಯಾಸ್‌ ಬಾತುಕೊಂಡಿದ್ದ ಕೈಗಳನ್ನು ತೋರಿಸಿದರು.
‘ನಾವು ಸುಸ್ತಾಗುವವರೆಗೂ ಪೊಲೀಸರು ಹಲ್ಲೆ ಮಾಡಿದರು.

ಸಹೋದರ ವಾಲ್ಟರ್‌ ಕಿರಣ್‌ ಸಲ್ಡಾನ ಅವರನ್ನು ಬಂಧಿಸುವಾಗ ಮಹಿಳೆಯರ ಮೇಲೆ ಪೊಲೀಸರು ಹಲ್ಲೆ ನಡೆಸಿರುವುದಾಗಿ ನಮ್ಮ ಕುಟುಂಬದ ಸದಸ್ಯರು ಆರೋಪ ಮಾಡಿದ್ದರು. ಅದಕ್ಕೆ ಪ್ರತೀಕಾರ ತೀರಿಸಿಕೊಳ್ಳುವ ಉದ್ದೇಶದಿಂದ ಸಂದೇಶ್‌ಕುಮಾರ್‌ ಮತ್ತು ಸಿಬ್ಬಂದಿ ಈ ರೀತಿ ಮಾಡಿದ್ದಾರೆ. ಚಿಕಿತ್ಸೆಗೆ ದಾಖಲಾದರೆ ಮತ್ತು ದೂರು ನೀಡಿದರೆ ಮತ್ತೆ ಬಂಧಿಸುವುದಾಗಿ ಬೆದರಿಸಿದ್ದಾರೆ. ಕುಟುಂಬದ ಸದಸ್ಯರು ಬಲವಂತವಾಗಿ ನಮ್ಮನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ’ ಎಂದು ದೂರಿದರು.

ಮಹಿಳೆಯರ ಮೇಲೆ ಹಲ್ಲೆ ಆರೋಪ: ಇದೇ ಪ್ರಕರಣದಲ್ಲಿ ಪೊಲೀಸರು ಸೋಮವಾರ ಮನೆಯಲ್ಲಿದ್ದ ಮಹಿಳೆಯರು ಮತ್ತು ಕ್ರೈಸ್ತ ಸನ್ಯಾಸಿನಿಯೊಬ್ಬರ ಮೇಲೂ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ವಂಚನೆ ಪ್ರಕರಣದಲ್ಲಿ ಬಂಧಿತರಾಗಿರುವ ಸವಣಾಲು ಗ್ರಾಮದ ವಾಲ್ಟರ್ ಕಿರಣ್ ಸಲ್ಡಾನ ಅವರ ಪತ್ನಿ ಜೆನ್ನಿಫರ್ ಸಲ್ಡಾನ ಮಂಗಳವಾರ ಆರೋಪ ಮಾಡಿದ್ದರು.

ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಜೆನ್ನಿಫರ್ ಮತ್ತು ಇತರರರು ಪಶ್ಚಿಮ ವಲಯ ಐಜಿಪಿ ಅಮೃತ್‌ ಪಾಲ್‌ ಅವರನ್ನು ಭೇಟಿಮಾಡಿ ಬೆಳ್ತಂಗಡಿ ಠಾಣೆ ಪೊಲೀಸರ ವಿರುದ್ಧ ದೂರು ನೀಡಿದ್ದರು.

ಐಜಿಪಿ ಭೇಟಿಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಜೆನ್ನಿಫರ್, ‘ವಾಲ್ಟರ್‌ ಅವರ ತಮ್ಮ ಆಲ್ವಿನ್‌ ಸಲ್ಡಾನಾ ವಿವಾಹ ಕಾರ್ಯಕ್ರಮ ಮುಗಿಸಿ ನಾವು ಮನೆಗೆ ವಾಪಸಾಗಿದ್ದೆವು. ಸೋಮವಾರ ಸಂಜೆ ಮನೆಗೆ ಬಂದ ಸಂದೇಶ್‌ಕುಮಾರ್‌ ಮತ್ತು ಮೂವರು ಪೊಲೀಸರು ವಾಲ್ಟರ್‌ ಅವರನ್ನು ಸುತ್ತುವರಿದರು. ಬಂಧಿಸಿ ಕರೆದೊಯ್ಯಲು ಯತ್ನಿಸಿದಾಗ ನಾನು ಪ್ರಶ್ನಿಸಿದೆ. ಆಗ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಪೊಲೀಸರು ಹಲ್ಲೆ ನಡೆಸಿದರು’ ಎಂದು ಆರೋಪಿಸಿದರು.

‘ಮನೆಯಲ್ಲಿದ್ದ ಸನ್ಯಾಸಿನಿ ವಿನ್ನೆ ಮತ್ತು ಸಂಬಂಧಿಕರೂ ಪೊಲೀಸರ ಕ್ರಮವನ್ನು ಪ್ರಶ್ನಿಸಿದರು. ಅವರ ಮೇಲೂ ಹಲ್ಲೆ ನಡೆಸಿದ ಪೊಲೀಸರು, ಮನಬಂದಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಬಲವಂತವಾಗಿ ವಾಲ್ಟರ್‌ ಮತ್ತು ಇತರೆ ಮೂವರನ್ನು ಪೊಲೀಸ್ ವಾಹನದೊಳಕ್ಕೆ ಕರೆದೊಯ್ದರು. ಘಟನೆಯ ಸಂಪೂರ್ಣ ವಿವರವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದೆವು. ಇದನ್ನು ಅರಿತ ಪೊಲೀಸರು ನಾವು ಬಳಸುತ್ತಿದ್ದ ಏಳು ಮೊಬೈಲ್‌ ಫೋನ್‌ಗಳನ್ನು ಕೊಂಡೊಯ್ದಿದ್ದಾರೆ’ ಎಂದು ದೂರಿದರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅಮೃತ್ ಪಾಲ್, ‘ಬಂಟ್ವಾಳ ಸಹಾಯಕ ಎಸ್‌ಪಿ ಸಿ.ಬಿ.ರಿಷ್ಯಂತ್ ಪ್ರಕರಣ ಕುರಿತು ತನಿಖೆ ನಡೆಸುತ್ತಿದ್ದಾರೆ. ವಾರಾಂತ್ಯದೊಳಗೆ ವರದಿ ಸಲ್ಲಿಸುವ ನಿರೀಕ್ಷೆ ಇದೆ. ವರದಿ ಬಂದ ಬಳಿಕ ಸೂಕ್ತ ಕ್ರಮ ಜರುಗಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.