ADVERTISEMENT

ಪೊಲೀಸ್‌ ಸಿಬ್ಬಂದಿ ತರಬೇತಿಗೆ ವಿವಿ ಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2017, 20:16 IST
Last Updated 23 ನವೆಂಬರ್ 2017, 20:16 IST

ಬೆಳಗಾವಿ: ‘ಅಪರಾಧ ಪ್ರಕರಣಗಳ ತನಿಖೆಯಲ್ಲಿ ಆಧುನಿಕ ತಂತ್ರಜ್ಞಾನ ಬಳಕೆ ಹಾಗೂ ವೃತ್ತಿ ಕೌಶಲ ಹೆಚ್ಚಿಸುವ ನಿಟ್ಟಿನಲ್ಲಿ ಪೊಲೀಸ್‌ ಸಿಬ್ಬಂದಿಗಾಗಿ ವಿಶ್ವವಿದ್ಯಾಲಯ ಆರಂಭಿಸಲು ಉದ್ದೇಶಿಸಲಾಗಿದೆ’ ಎಂದು ಗೃಹ ಸಚಿವ ರಾಮಲಿಂಗಾರಡ್ಡಿ ಹೇಳಿದರು.

ವಿಧಾನ ಪರಿಷತ್‌ನಲ್ಲಿ ಗುರುವಾರ ಬಿಜೆಪಿಯ ತಾರಾ ಅನೂರಾಧ, ‘ಪೊಲೀಸರಲ್ಲಿ  ವೃತ್ತಿ ಕೌಶಲ ಹೆಚ್ಚಳ ಹಾಗೂ ತನಿಖೆಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಕೆಗೆ ಹಮ್ಮಿಕೊಂಡಿರುವ ಯೋಜನೆ ಕುರಿತು ಪ್ರಶ್ನಿಸಿದರು.

‘ಈಗಾಗಲೇ ಇಲಾಖೆಯ ಅಧಿಕಾರಿಗಳು ಪುಣೆಗೆ ಭೇಟಿ ನೀಡಿ ಅಧ್ಯಯನ ನಡೆಸಿದ್ದಾರೆ. ಹಾಲಿ ಸಿಬ್ಬಂದಿ ಜತೆಗೆ ಹೊಸದಾಗಿ ಸೇರುವ ಸಿಬ್ಬಂದಿಗೂ ವಿಶ್ವವಿದ್ಯಾಲಯದಲ್ಲಿ ತರಬೇತಿ ನೀಡುವ ಉದ್ದೇಶವಿದೆ. ಮುಂದಿನ ಬಜೆಟ್‌ನಲ್ಲಿ ವಿವಿ ಘೋಷಣೆ ಮಾಡುವ ಯೋಜನೆ ಇದೆ’ ಎಂದರು.

ADVERTISEMENT

ಇದಕ್ಕೂ ಮೊದಲು ವಿಧಾನ ಪರಿಷತ್‌ನಲ್ಲಿ ಗುರುವಾರ ಜೆಡಿಎಸ್‌ನ ಕಾಂತರಾಜು ಪ್ರಶ್ನೆಗೆ, ‘ಪೊಲೀಸ್‌ ಇಲಾಖೆಯ ವಿವಿಧ ಹಂತದ ಒಟ್ಟು 19,810 ಹುದ್ದೆಗಳು ಖಾಲಿ ಇವೆ’ ಎಂದು ಸಚಿವರು ಹೇಳಿದರು.

‘ಒಟ್ಟು 66,740 ಮಂಜೂರಾದ ಹುದ್ದೆಗಳಿವೆ. 18,026 ಕಾನ್‌ಸ್ಟೆಬಲ್‌ ಹುದ್ದೆಗಳು ಖಾಲಿ ಇವೆ’ ಎಂದರು.

‘2013 ರಿಂದ 2016–17ರ ವರೆಗೆ 27,770 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗಿದೆ. 1,172 ಪಿಎಸ್‌ಐ ಗಳ ನೇಮಕಾತಿ ಪ್ರಕ್ರಿಯೆ ನಡೆದಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.