ADVERTISEMENT

ಪ್ರತಿಕೂಲ ಹವಾಮಾನ: ಮರಳಿದ ವಿಮಾನ!

​ಪ್ರಜಾವಾಣಿ ವಾರ್ತೆ
Published 26 ಜೂನ್ 2016, 22:30 IST
Last Updated 26 ಜೂನ್ 2016, 22:30 IST
ಪ್ರತಿಕೂಲ ಹವಾಮಾನ: ಮರಳಿದ ವಿಮಾನ!
ಪ್ರತಿಕೂಲ ಹವಾಮಾನ: ಮರಳಿದ ವಿಮಾನ!   

ಬೆಂಗಳೂರು: ರಾಜ್ಯದ ಕರಾವಳಿ ಭಾಗದಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ಮಂಗಳೂರಿನಲ್ಲಿ ಇಳಿಯಬೇಕಿದ್ದ ಮೂರು ವಿಮಾನಗಳು ಮಾರ್ಗ ಬದಲಾವಣೆ ಮಾಡಿ ಬೆಂಗಳೂರಿನಲ್ಲಿ ಇಳಿದ ಘಟನೆ ಭಾನುವಾರ ನಡೆಯಿತು. ಮೂರು ವಿಮಾನಗಳ ಪೈಕಿ, ಒಂದರಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್‌ ಹಾಗೂ ನಟ ಉಪೇಂದ್ರ ಸೇರಿದಂತೆ ಸಾಕಷ್ಟು ಪ್ರಯಾಣಿಕರಿದ್ದರು.

ಬೆಂಗಳೂರು–ಮಂಗಳೂರು ನಡುವಣ ಜೆಟ್‌ ಏರ್‌ವೇಸ್‌–815 ವಿಮಾನ, ನಿಗದಿಯಂತೆ ಕೆಂಪೇಗೌಡ ಅಂತರರಾಷ್ಟ್ರೀಯ ನಿಲ್ದಾಣದಿಂದ ಮಧ್ಯಾಹ್ನ 3 ಗಂಟೆಗೆ ಮಂಗಳೂರಿಗೆ ಹೊರಡಬೇಕಿತ್ತು. ಆದರೆ, ಅದು ಹಲವು ನಿಮಿಷಗಳಷ್ಟು ತಡವಾಗಿ ಮಧ್ಯಾಹ್ನ 3.27ಕ್ಕೆ ಪ್ರಯಾಣಿಸಿತು.

‘ಬಹುತೇಕ ಮಂಗಳೂರು ತಲುಪಿದ್ದ ವಿಮಾನ ಪ್ರತಿಕೂಲ ಹವಾಮಾನದಿಂದ ಮರಳಿ ಬಂತು. ಸಂಜೆ 4.56ಕ್ಕೆ ಬೆಂಗಳೂರಿನಲ್ಲಿ ಇಳಿಯಿತು. ಬಳಿಕ ಮತ್ತೆ ಇಲ್ಲಿಂದ 6.25ಕ್ಕೆ ಹೊರಟಿತು’ ಎಂದು ಕೆಐಎ ಮೂಲಗಳು ಹೇಳಿವೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸಚಿವ ಖಾದರ್, ‘ವಿಮಾನವು ಬೆಂಗಳೂರಿನಲ್ಲಿ ಇಳಿಯಲಿದೆ ಎಂದು ನಮಗೆ ತಿಳಿಸಲಾಯಿತು. ಇದಕ್ಕೂ ಮೊದಲಿನ ಬೆಳವಣಿಗೆಗಳಿಂದ ಪ್ರಯಾಣಿಕರೆಲ್ಲ ತೀವ್ರ ಆತಂಕಗೊಂಡಿದ್ದರು. ಆದರೆ, ನಾನು ಆಗ ನಿದ್ರೆಗೆ ಜಾರಿದ್ದೆ. ವಿಮಾನ ಇಳಿಸುವ ಮುನ್ನ ಪೈಲಟ್‌ ಸುಮಾರು 20 ನಿಮಿಷಗಳ ಕಾಲ ನಿಲ್ದಾಣವನ್ನು ಸುತ್ತು ಹಾಕಿಸಿದ್ದ’ ಎಂದು ತಿಳಿಸಿದರು.

ಮೆಕ್ಕಾದಿಂದ ಮರಳಿದ್ದ ಖಾದರ್‌, ಮುಖ್ಯಮಂತ್ರಿ ಹಾಗೂ ಇತರರ ಭೇಟಿಯ ಬಳಿಕ, ಮಂಗಳೂರು ಹಾಗೂ ಉಲ್ಲಾಳದಲ್ಲಿ ಎರಡು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿತ್ತು.  ವಿಮಾನದಲ್ಲಿ ಹವಾನಿಯಂತ್ರಣ ವ್ಯವಸ್ಥೆ ಕೂಡ ಕೆಲಸ ಮಾಡುತ್ತಿರಲಿಲ್ಲ. ಇದರಿಂದ ಸಹ ಪ್ರಯಾಣಿಕರು ಗಾಬರಿಗೊಂಡಿದ್ದರು ಎಂದು ಖಾದರ್ ತಿಳಿಸಿದರು.

ಈ ನಡುವೆ, ವಿಮಾನವು ನಿಲ್ದಾಣ ತಲುಪುತ್ತಿದ್ದಂತೆಯೇ ಕೆಲವು ಪ್ರಯಾಣಿಕರು ಇಳಿಯಲು ಮುಂದಾದರು. ಆದರೆ, ಆರಂಭದಲ್ಲಿ ಅವರಿಗೆ ಅನುಮತಿ ನಿರಾಕರಿಸಲಾಯಿತು. ಕೆಲ ಹೊತ್ತಿನ ಬಳಿಕ ಅನುಮತಿ ನೀಡಲಾಯಿತು ಎಂದು ಪ್ರಯಾಣಿಕರೊಬ್ಬರು ತಿಳಿಸಿದರು.

ಮುಂಬೈನಿಂದ ಮಂಗಳೂರಿಗೆ ಹೊರಟಿದ್ದ ಜೆಟ್‌ ಏರ್‌ವೇಸ್‌–431 ವಿಮಾನ ಕೂಡ ಪ್ರತಿಕೂಲ ಹವಾಮಾನದಿಂದಾಗಿ ಕೆಐಎಗೆ ಬಂದಿಳಿಯಿತು. 4.02ಕ್ಕೆ ಬಂದಿಳಿದ ಈ ವಿಮಾನವು ಬಳಿಕ ಸಂಜೆ 5.55ಕ್ಕೆ ಮಂಗಳೂರಿನತ್ತ ಹಾರಾಟ ಆರಂಭಿಸಿತು ಎಂದು ಮೂಲಗಳು ತಿಳಿಸಿವೆ.

ಇಳಿಯಲು ತೊಂದರೆ
ಮಂಗಳೂರು: ಮಂಗಳೂರಿನಲ್ಲಿ ಭಾನುವಾರ ಸಂಜೆ ಮೋಡ ಕವಿದ ವಾತಾವರಣ ಇದ್ದುದರಿಂದ ಬಜ್ಪೆಯ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ವಿಮಾನಗಳು ಇಳಿಯುವುದಕ್ಕೆ ತೊಂದರೆ ಉಂಟಾಯಿತು.

ಮುಂಬೈ–ಮಂಗಳೂರು ಜೆಟ್‌ ಏರ್‌ವೇಸ್‌, ಬೆಂಗಳೂರು–ಮಂಗಳೂರು ಜೆಟ್‌ ಏರ್‌ವೇಸ್‌ ಮತ್ತು ದೋಹಾ–ಮಂಗಳೂರು ಏರ್‌ ಇಂಡಿಯಾ ವಿಮಾನಗಳು ಬೆಂಗಳೂರಿಗೆ ತೆರಳಬೇಕಾಯಿತು. ಸಂಜೆ 6 ಗಂಟೆಯ ನಂತರ ಈ ಮೂರೂ ವಿಮಾನಗಳು ಮಂಗಳೂರಿಗೆ ಬಂದಿಳಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT