ADVERTISEMENT

ಬಜೆಟ್‌ ಆದ್ಯತೆ ಮರುಪರಿಶೀಲಿಸಲು ಸಲಹೆ

ಪೂರಕ ಅಂದಾಜಿನಿಂದ ರಾಜ್ಯ ಸರ್ಕಾರಕ್ಕೆ ಹೆಚ್ಚುವರಿ ಹೊರೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2015, 20:04 IST
Last Updated 27 ನವೆಂಬರ್ 2015, 20:04 IST

ಬೆಂಗಳೂರು: ಪೂರಕ ಅಂದಾಜಿನಲ್ಲಿ ಘೋಷಿಸಿರುವ ಹೊಸ ಕಾರ್ಯಕ್ರಮಗಳಿಗೆ ಸಂಪನ್ಮೂಲ ಕ್ರೋಡೀಕರಿಸುವ ಸಲು ವಾಗಿ ಸರ್ಕಾರವು 2015–16ನೇ ಸಾಲಿನ ಬಜೆಟ್‌ ಅಂದಾಜುಗಳ ವೆಚ್ಚದ ಆದ್ಯತೆಗಳನ್ನು ಮರುಪರಿಶೀಲಿಸಬೇಕು ಎಂದು ವಿತ್ತೀಯ ನಿರ್ವಹಣೆ ಪರಿಶೀಲನಾ ಸಮಿತಿಯು (ಎಫ್‌ಎಂಆರ್‌ಸಿ)   ಸರ್ಕಾರಕ್ಕೆ ಸಲಹೆ ನೀಡಿದೆ.

ಪೂರಕ ಅಂದಾಜುಗಳಿಂದಾಗಿ ರಾಜ್ಯದ ಬೊಕ್ಕಸಕ್ಕೆ ₹ 4,400 ಕೋಟಿಯಷ್ಟು ಹೆಚ್ಚುವರಿ ಹೊರೆ  ಬೀಳಲಿದೆ. ಎರಡು ಕಂತುಗಳಲ್ಲಿ ಮಂಡಿಸಲಾದ ಪೂರಕ ಅಂದಾಜಿನಲ್ಲಿ ಉಲ್ಲೇಖಿಸಿರುವ ಹೆಚ್ಚುವರಿ ವೆಚ್ಚವನ್ನು 2015–16ನೇ ಸಾಲಿನ ಆಯವ್ಯಯದ ಅಂದಾಜಿನ ಮರುಹಂಚಿಕೆ  ಮೂಲಕವೇ   ಭರಿಸಬೇಕು ಎಂದು ವಿಧಾನಸಭೆಯಲ್ಲಿ ಶುಕ್ರವಾರ ಮಂಡಿಸಲಾದ 2015–16ನೇ ಸಾಲಿನ ರಾಜ್ಯ ಹಣಕಾಸಿನ ಮಧ್ಯವಾರ್ಷಿಕ ಪರಿಶೀಲನೆ (ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ) ವರದಿಯಲ್ಲಿ ಉಲ್ಲೇಖಿಸಲಾಗಿದೆ.

ರಾಜ್ಯ ಹಣಕಾಸು ಇಲಾಖೆ ಸಿದ್ಧಪಡಿಸಿರುವ ಈ ವರದಿಯಲ್ಲಿ ಪೂರಕ ಅಂದಾಜುಗಳಿಗೆ ಅನುದಾನ ಹೊಂದಿಸುವ ಸಲುವಾಗಿ ಯಾವ ಇಲಾಖೆಯ ಅನುದಾನ ಹಂಚಿಕೆ ವ್ಯತ್ಯಾಸ ಆಗಲಿದೆ ಎಂಬ ಬಗ್ಗೆ ಎಲ್ಲೂ ಉಲ್ಲೇಖ ಇಲ್ಲ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ತೆರಿಗೆ ಸಂಗ್ರಹದಲ್ಲಿ ನಿರೀಕ್ಷಿತ ಗುರಿ ತಲುಪಲು ಸಾಧ್ಯವಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.  ಈ ವರ್ಷ ₹ 81,652 ಕೋಟಿ ತೆರಿಗೆ ಸಂಗ್ರಹಿಸುವ ಗುರಿಯನ್ನು ಸರ್ಕಾರ ಹೊಂದಿತ್ತು.  ಸೆಪ್ಟೆಂಬರ್‌ ಅಂತ್ಯದವರೆಗೆ ₹ 37,884 ಕೋಟಿ ತೆರಿಗೆ (ಶೇಕಡಾ 47) ಸಂಗ್ರಹಿಸಲಾಗಿದೆ. 

ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಕಾಯ್ದೆ 2002ರ ಪ್ರಕಾರ ರಾಜ್ಯದ ಒಟ್ಟು  ವಿತ್ತೀಯ ಕೊರತೆಯನ್ನು ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ (ಜಿಎಸ್‌ಡಿಪಿ)  ಶೇ 3ರ ಮಿತಿಯ ಒಳಗೆ ಕಾಯ್ದುಕೊಳ್ಳಬೇಕಾಗಿದೆ. ಪ್ರಸಕ್ತ ಸಾಲಿನಲ್ಲಿ ಜಿಎಸ್‌ಡಿಪಿಯ ಶೇ 2.75ರಷ್ಟು (₹ 20,220 ಕೋಟಿ) ವಿತ್ತೀಯ ಕೊರತೆಯನ್ನು ಅಂದಾಜಿಸಲಾಗಿತ್ತು. ಆ ಪ್ರಕಾರ ಸೆಪ್ಟೆಂಬರ್‌ ಅಂತ್ಯಕ್ಕೆ ರಾಜ್ಯವು ₹ 1,256 ಕೋಟಿ  ವಿತ್ತೀಯ ಕೊರತೆ ಹೊಂದಿದೆ.  ಕ್ರಮಬದ್ಧ ವಿತ್ತೀಯ ನಿರ್ವಹಣೆ, ರಾಜಸ್ವ ಸಂಗ್ರಹಕ್ಕೆ ಪ್ರಯತ್ನ ಮುಂದುವರಿಸುವುದು, ಅನಗತ್ಯ ವೆಚ್ಚ ನಿಯಂತ್ರಣ ಹಾಗೂ ಪೂರಕ ಅಂದಾಜುಗಳಿಗೆ  ಹಣ ಒದಗಿಸಲು ಉಳಿತಾಯ ಮಾರ್ಗಗಳನ್ನು ಕಂಡುಕೊಳ್ಳುವ ಮೂಲಕ ವಿತ್ತೀಯ ಕೊರತೆಯ ಮಿತಿಯನ್ನು ಕಾಯ್ದುಕೊಳ್ಳಬಹುದು ಎಂದು ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿ ಸಲಹೆ ನೀಡಿದೆ.

‘ಅಧಿಕ ಹಣದುಬ್ಬರ ಹಾಗೂ ಕ್ಷೀಣಗೊಂಡ ಕೈಗಾರಿಕಾ ಉತ್ಪಾದನೆಯ ಕಾರಣ ರಾಜ್ಯವು ವೆಚ್ಚವನ್ನು ಹೆಚ್ಚಿಸುವಾಗ ಎಚ್ಚರ ವಹಿಸಬೇಕು’ ಎಂದು ಸಮಿತಿ ಸಲಹೆ ನೀಡಿದೆ. ಪೂರಕ ಅಂದಾಜುಗಳ ಮೂರನೇ ಕಂತಿನ ಮಂಡನೆಯನ್ನು ಕೈಬಿಡುವ ಬಗ್ಗೆ ಪರಿಶೀಲಿಸಬೇಕು ಎಂದು ಸಮಿತಿ ಸಲಹೆ ನೀಡಿದೆ.
*
‘ಅನುದಾನವನ್ನು ಬ್ಯಾಂಕ್‌ನಲ್ಲಿ ಠೇವಣಿ ಇಡುವುದು ಬೇಡ’
ಬಜೆಟ್‌ ಹಂಚಿಕೆ ಕೈತಪ್ಪುವುದನ್ನು ತಡೆಯಲು ಆರ್ಥಿಕ ವರ್ಷದ ಅಂತ್ಯದಲ್ಲಿ ಅನುದಾನದ ಮೊತ್ತವನ್ನು ಠೇವಣಿ ಖಾತೆಯಲ್ಲಿ ಅಥವಾ ಬ್ಯಾಂಕ್‌ ಖಾತೆಯಲ್ಲಿ ಇಡುವ ಪರಿಪಾಠ ಇದೆ. ಇಂತಹ ಪ್ರಕರಣಗಳಲ್ಲಿ ಅನುದಾನವು ವೆಚ್ಚವಾಗಿದೆ ಎಂದು ದಾಖಲಾದರೂ, ಆ ಹಣವು ಸಾಕಷ್ಟು ವಿಳಂಬವಾಗಿ ಬಳಕೆ ಆಗುತ್ತದೆ. ಹಾಗಾಗಿ ಅನುದಾನವನ್ನು ನಿಷ್ಕ್ರಿಯವಾಗಿ ಇರಿಸಿಕೊಳ್ಳುವ ಈ ಪರಿಪಾಠವನ್ನು ಸಂಪೂರ್ಣವಾಗಿ ತಡೆಯಬೇಕು ಎಂದು ಎಫ್‌ಎಂಆರ್‌ಸಿ ಸಲಹೆ ನೀಡಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆಗೆ ಸೇರಿದ  ಭಾರಿ ಮೊತ್ತದ ಹಣವನ್ನು ಅಕ್ರಮವಾಗಿ ಬ್ಯಾಂಕ್‌ ಖಾತೆಗಳಲ್ಲಿ ಇಟ್ಟಿರುವುದು ಬೆಳಕಿಗೆ ಬಂದ ಬೆನ್ನಲ್ಲೇ ಸಮಿತಿ ಈ ಸಲಹೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.