ADVERTISEMENT

ಬಳ್ಳಾರಿಯಲ್ಲಿ ಅಘೋಷಿತ ಬಂದ್‌!

ಕೆಂಡದಂತಹ ಬಿಸಿಲಿಗೆ ಹೆದರಿ ಮನೆಯಲ್ಲೆ ಕುಳಿತ ಜನ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 20 ಏಪ್ರಿಲ್ 2016, 19:38 IST
Last Updated 20 ಏಪ್ರಿಲ್ 2016, 19:38 IST
ಬಳ್ಳಾರಿಯ ರೈಲು ನಿಲ್ದಾಣ ಬಳಿಯ ವೃತ್ತ ಜನಸಂಚಾರ ಇಲ್ಲದೇ ಬಿಕೋ ಎನ್ನುತ್ತಿರುವುದು
ಬಳ್ಳಾರಿಯ ರೈಲು ನಿಲ್ದಾಣ ಬಳಿಯ ವೃತ್ತ ಜನಸಂಚಾರ ಇಲ್ಲದೇ ಬಿಕೋ ಎನ್ನುತ್ತಿರುವುದು   

ಬಳ್ಳಾರಿ: ಇಲ್ಲಿ ಮಧ್ಯಾಹ್ನ 12 ಗಂಟೆಯಾಗುತ್ತಿದ್ದಂತೆಯೇ ಜನಸಂಚಾರ ನಿಂತು ಬಿಡುತ್ತದೆ. ಬಹುತೇಕ ರಸ್ತೆಗಳೆಲ್ಲ ಬಿಕೋ ಎನ್ನುತ್ತವೆ. ಮಳಿಗೆಗಳಿಗೆ ಬೀಗ ಬೀಳುತ್ತದೆ. ಒಂದು ರೀತಿಯಲ್ಲಿ ಅಘೋಷಿತ ಬಂದ್‌ ವಾತಾವರಣ ನಿರ್ಮಾಣವಾಗುತ್ತದೆ.

ಕಳೆದ ಕೆಲವು ದಿನಗಳಿಂದ ನಗರದಲ್ಲಿ ಇಂತಹ ದೃಶ್ಯ ಸರ್ವೇ ಸಾಮಾನ್ಯ ಎಂಬಂತಾಗಿದೆ. ಎರಡ್ಮೂರು ದಿನಗಳಿಂದ ತಾಪಮಾನದಲ್ಲಿ ಭಾರಿ ಏರಿಕೆ ಉಂಟಾಗಿರುವುದರಿಂದ ಬಿಸಿಲಿಗೆ ಹೆದರಿ ಜನ ಮನೆಗಳಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ.

ರಣಬಿಸಿಲಿನಿಂದ ಬಚಾವ್‌ ಆಗಲು ಜನ ತಮ್ಮ ದೈನಂದಿನ ಕೆಲಸಗಳನ್ನು ಮಧ್ಯಾಹ್ನ 12ರ ಒಳಗೇ ಮುಗಿಸಿಕೊಳ್ಳುತ್ತಿದ್ದಾರೆ. ಮಧ್ಯಾಹ್ನ 12 ದಾಟುವ ಮೊದಲು ಮನೆ ಸೇರುವ ಜನರು ಮತ್ತೆ ಹೊರಗೆ ಬರುವುದು ಸಂಜೆ 6ರ ನಂತರವೇ. ಇದರಿಂದ ಬಹುತೇಕ ರಸ್ತೆಗಳು ನಿರ್ಜನವಾಗುತ್ತಿವೆ. ಇದರ ಪರಿಣಾಮ ವ್ಯಾಪಾರ ವಹಿವಾಟಿನ ಮೇಲೂ ಬಿದ್ದಿದೆ.

‘ಬೆಳಿಗ್ಗೆ 11ರ ನಂತರ ಜನ ಮಳಿಗೆಯತ್ತ ಮುಖ ಮಾಡುವುದೇ ಇಲ್ಲ. ವ್ಯಾಪಾರ ಇಲ್ಲ ಅಂದರೆ ಮಳಿಗೆಯಲ್ಲಿ ಸುಮ್ಮನೆ ಕೂರುವುದರಿಂದ ಯಾವುದೇ ಪ್ರಯೋಜನವಿಲ್ಲ. ಹಾಗಾಗಿ ಮಧ್ಯಾಹ್ನ 12ರ ವೇಳೆಗೆ ಅಂಗಡಿ ಮುಚ್ಚಿ, ಸಂಜೆ 6ರ ಬಳಿಕ  ತೆರೆಯುತ್ತೇನೆ’ ಎಂದು ಕನಕ ದುರ್ಗಮ್ಮ ರಸ್ತೆಯಲ್ಲಿ ಕಿರಾಣಿ ಮಳಿಗೆ ಹೊಂದಿರುವ ರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ಇದು ರಾಜು ಒಬ್ಬರ ಕಥೆಯಲ್ಲ. ಬಹುತೇಕ ವ್ಯಾಪಾರಿಗಳ ಪಾಡು ಇದೇ ಆಗಿದೆ. ಇದರಿಂದಾಗಿ ನಗರದ ಬೆಂಗಳೂರು ರಸ್ತೆ, ಗಾಂಧಿ ನಗರ, ಸಣ್ಣ ಮಾರುಕಟ್ಟೆ, ಹೂವಿನ ಮಾರುಕಟ್ಟೆ, ಜೈನ್‌ ಮಾರುಕಟ್ಟೆ, ಕೌಲ್‌ ಬಜಾರ್‌, ಇನ್‌ಫೆಂಟ್ರಿ ರಸ್ತೆ, ಎಸ್‌.ಪಿ ವೃತ್ತ ಹೀಗೆ ಬಹುತೇಕ ಭಾಗಗಳಲ್ಲಿ ಮಧ್ಯಾಹ್ನ ಆಗುತ್ತಿದ್ದಂತೆಯೇ ಮಳಿಗೆಗಳಿಗೆ ಬೀಗ ಬೀಳುತ್ತಿದೆ. ಬೀದಿ ವ್ಯಾಪಾರಿಗಳಂತೂ ಸಂಜೆ 7ರ ನಂತರವೇ ಕಾಣಿಸಿಕೊಳ್ಳುತ್ತಿದ್ದಾರೆ.

ಕ್ರೀಡಾಂಗಣಗಳು ಖಾಲಿ ಖಾಲಿ... ನಗರದ ಹೊಸ ಬಸ್‌ ನಿಲ್ದಾಣ ಸಮೀಪದ ಜಿಲ್ಲಾ ಕ್ರೀಡಾಂಗಣ, ರಾಜಕುಮಾರ್‌ ರಸ್ತೆಯಲ್ಲಿರುವ ಮುನ್ಸಿಪಲ್‌ ಆಟದ ಮೈದಾನ, ಬಿಡಿಎ ಫುಟ್‌ಬಾಲ್‌ ಮೈದಾನದತ್ತ ನರಪಿಳ್ಳೆಯೂ ಸುಳಿದಾಡುತ್ತಿಲ್ಲ. ಕ್ರೀಡಾ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಬೆಳಿಗ್ಗೆ 7ರ ಮೊದಲು ಮತ್ತು ಸಂಜೆ 6ರ ನಂತರ ಜನ ವಾಯುವಿಹಾರಕ್ಕೆ ಮಾತ್ರ ಕ್ರೀಡಾಂಗಣಗಳಿಗೆ ಬರುತ್ತಿದ್ದಾರೆ.

‘ಪರೀಕ್ಷೆ ಮುಗಿದ ನಂತರ ಸ್ನೇಹಿತರೊಂದಿಗೆ ಸೇರಿಕೊಂಡು ನಿತ್ಯ ಆಟವಾಡಿ ದಿನ ಕಳೆಯಬೇಕು ಅಂದುಕೊಂಡಿದ್ದೆ. ಆದರೆ ವಿಪರೀತ ಬಿಸಿಲು ಇರುವುದರಿಂದ ನಮ್ಮ ಪ್ಲಾನ್‌ ಉಲ್ಟಾ ಆಗಿದೆ. ಮನೆಯಲ್ಲಿಯೇ ಚೆಸ್‌, ಕೇರಂ ಆಡಿ ದಿನ ಕಳೆಯುತ್ತಿದ್ದೇನೆ. ರಜೆ ಇದ್ದರೂ ಹೊರಗೆ ಹೋಗಲು ಆಗುತ್ತಿಲ್ಲ’ ಎಂದು ಇತ್ತೀಚೆಗೆ ದ್ವಿತೀಯ ಪಿಯು ಪರೀಕ್ಷೆ ಬರೆದಿರುವ ಇಲ್ಲಿನ ಬಸವೇಶ್ವರ ನಗರದ ಚನ್ನಬಸವ ತಿಳಿಸಿದರು.
*
42 ಡಿಗ್ರಿಗೆ ಏರಿದ ಉಷ್ಣಾಂಶ

ಬಳ್ಳಾರಿಯಲ್ಲಿ ಬುಧವಾರ 42 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ. ಈ ತಿಂಗಳ ಎರಡನೇ ವಾರ ದಲ್ಲಿ 38 ರಿಂದ 40 ಡಿಗ್ರಿ ಆಸುಪಾಸಿನಲ್ಲಿದ್ದ ತಾಪಮಾನ ಸತತ ಮೂರು ದಿನಗಳಿಂದ 42 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿದೆ. ಸೂರ್ಯ ಕೆಂಡ ಕಾರುತ್ತಿದ್ದಾನೆ. ಬೆಳಿಗ್ಗೆ 11ಗಂಟೆಯಾಗುತ್ತಲೇ ಬಿಸಿಲ ಝಳ ಬಡಿಯುತ್ತಿದೆ. ಬಿಸಿ ಗಾಳಿ ಬೀಸುತ್ತಿದೆ. ಇದರಿಂದ ಜನ ಎಲ್ಲಿಗೂ ಹೋಗಲಾರದೆ ಅನಿವಾರ್ಯವಾಗಿ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.