ADVERTISEMENT

ಬಾರದ ಲೋಕಕ್ಕೆ ಮಕ್ಕಳ ಪಯಣ, ಹೆತ್ತವರ ಕಣ್ಣೀರು

ಶ್ರೀಕಾಂತ ಕಲ್ಲಮ್ಮನವರ
Published 16 ಏಪ್ರಿಲ್ 2017, 5:43 IST
Last Updated 16 ಏಪ್ರಿಲ್ 2017, 5:43 IST
ಬಾರದ ಲೋಕಕ್ಕೆ ಮಕ್ಕಳ ಪಯಣ, ಹೆತ್ತವರ ಕಣ್ಣೀರು
ಬಾರದ ಲೋಕಕ್ಕೆ ಮಕ್ಕಳ ಪಯಣ, ಹೆತ್ತವರ ಕಣ್ಣೀರು   
ಬೆಳಗಾವಿ: ‘ಇನ್ನೊಂದು ವರ್ಷದಲ್ಲಿ ಎಂಜಿನಿಯರ್‌ ಆಗಬೇಕಾಗಿದ್ದ ಮಗ ಈಗ ಬಾರದ ಲೋಕಕ್ಕೆ ತೆರಳಿದ್ದಾನೆ... ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ... ಈ ಸುದ್ದಿ ಸುಳ್ಳಾಗಲಿ...’ ಎಂದು ಕಣ್ಣೀರು ಒರೆಸುತ್ತ ಭೀಮಾ ಮುತ್ನಾಳಕರ ಸಂಕಟ ತೋಡಿಕೊಂಡರು.
 
ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಮಾಳ್ವಾನ್‌ದ ವಾಯರಿ ಬೀಚ್‌ನಲ್ಲಿ ಸಾವಿಗೀಡಾದ ವಿದ್ಯಾರ್ಥಿ ನಿತಿನ್‌ ಮುತ್ನಾಳಕರ ಅವರ ತಂದೆಯ ಅಳಲು ಇದು. ದುರ್ಘಟನೆಯ ಸುದ್ದಿ ತಿಳಿದ ತಕ್ಷಣ ಬೆಳಗಾವಿ ಹೊರವಲಯದ ಭೂತರಾಮನಹಟ್ಟಿಯಲ್ಲಿರುವ ಮರಾಠಾ ಮಂಡಳ ಎಂಜಿನಿಯರಿಂಗ್‌ ಕಾಲೇಜಿಗೆ ಬಂದಿದ್ದ ಅವರು ಸುದ್ದಿಗಾರರ ಜೊತೆ ಮಾತನಾಡಿದರು.
 
ಬೆಳಗಾವಿಯಿಂದ ಸುಮಾರು 10 ಕಿ.ಮೀ. ದೂರದಲ್ಲಿರುವ ಕಾಕತಿ ನಿವಾಸಿಯಾಗಿರುವ ಭೀಮಾ ಅವರು ಹಿಂಡಾಲ್‌ ಕಾರ್ಖಾನೆಯಲ್ಲಿ ಗುತ್ತಿಗೆದಾರರ ಬಳಿ ದಿನಗೂಲಿ ಕೆಲಸ ಮಾಡುತ್ತಿದ್ದಾರೆ. 
 
ಕಡುಬಡವರಾಗಿರುವ ತಮ್ಮ ಕುಟುಂಬಕ್ಕೆ ಮುಂದೊಂದು ದಿನ ಸಹಾಯವಾಗಬಹುದು ಎನ್ನುವ ನಿರೀಕ್ಷೆಯಲ್ಲಿ ಮಗನನ್ನು ಎಂಜಿನಿಯರಿಂಗ್‌ಗೆ ಸೇರಿಸಿದ್ದರು. ಅವರ ಕನಸಿಗೆ ‘ಕೈಗಾರಿಕಾ ಪ್ರದೇಶಗಳಿಗೆ ಭೇಟಿ’ ಪ್ರವಾಸ ತಣ್ಣೀರೆರಚಿತು. 
 
‘ಓದಿನಲ್ಲಿ ಜಾಣನಾಗಿದ್ದ. ಹೀಗಾಗಿ ಎಂಜಿನಿಯರಿಂಗ್‌ಗೆ ಸೇರಿಸಿದೆ. ಈಗ 6ನೇ ಸೆಮಿಸ್ಟರ್‌ನಲ್ಲಿದ್ದ. ಕೈಗಾರಿಕೆಗಳಿಗೆ ಭೇಟಿ ನೀಡುವುದು ಅವರ ಪಠ್ಯಕ್ರಮದ ಭಾಗವಾಗಿದೆ. ಪುಣೆಯ ಕೈಗಾರಿಕೆಗಳಿಗೆ ಭೇಟಿ ನೀಡಲು ಹೋಗುತ್ತಿದ್ದೇವೆ ಎಂದು ಆತ ಬುಧವಾರ ರಾತ್ರಿ ಹೊರಟಿದ್ದ. ಗುರುವಾರ ಹಾಗೂ ಶುಕ್ರವಾರ ಆತ ತಾಯಿಯ ಜೊತೆ ಮೊಬೈಲ್‌ನಲ್ಲಿ ಮಾತನಾಡಿದ್ದಾನೆ. ಇಂದು (ಶನಿವಾರ) ಬೆಳಿಗ್ಗೆಯಿಂದ ಫೋನ್‌ ಸ್ವಿಚ್‌  ಆಫ್‌ ಆಗಿತ್ತು’ ಎಂದು ವಿವರಿಸಿದರು.
 
‘ಪ್ರವಾಸಕ್ಕೆಂದು ಹೋದ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಸಮುದ್ರ ಪಾಲಾಗಿದ್ದಾರೆ ಎನ್ನುವ ಸುದ್ದಿ ಮಧ್ಯಾಹ್ನ ಟಿ.ವಿ.ಯಲ್ಲಿ ಪ್ರಸಾರವಾಗುತ್ತಿತ್ತು. ಇದನ್ನು ನೋಡಿ ಆತಂಕಗೊಂಡಿದ್ದೇನೆ. ನನ್ನ ಮಗನ ಸ್ಥಿತಿಯ ಬಗ್ಗೆ ಅಧಿಕೃತವಾಗಿ ಯಾರೂ ಮಾಹಿತಿ ನೀಡಿಲ್ಲ. ಕಾಲೇಜಿಗೆ ಬಂದರೆ, ಯಾರೊಬ್ಬರೂ ಕಾಣುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
 
ಕುಟುಂಬದ ಆಧಾರ: ‘ದುರಂತದಲ್ಲಿ ಸಾವಿಗೀಡಾದ ಮತ್ತೊಬ್ಬ ವಿದ್ಯಾರ್ಥಿ ಕಿರಣ್‌ ಖಾಂಡೇಕರ್‌ ರೈತ ಕುಟುಂಬಕ್ಕೆ ಸೇರಿದವರು. ಮನೆಯಲ್ಲಿ ಹಿರಿಯ ಮಗನಾಗಿದ್ದ ಕಿರಣ ಅವರೇ ಕುಟುಂಬಕ್ಕೆ ಆಧಾರವಾಗಿದ್ದರು. ಎಂಜಿನಿಯರಿಂಗ್‌ ಪೂರೈಸಿ ಕುಟುಂಬವನ್ನು ಮುನ್ನಡೆಸುವ ಜವಾಬ್ದಾರಿ ಹೊರಬೇಕಿತ್ತು. ಆದರೆ, ವಿಧಿಯಾಟ ಬೇರೆಯೇ ಆಗಿತ್ತು’ ಎಂದು ಖಾಂಡೆಕರ್‌ ಕುಟುಂಬದ ಸಮೀಪವರ್ತಿ ಪರಶುರಾಮ ತಂಗನ್ನವರ ಹೇಳಿದರು.
 
‘ಬೆಳಗಾವಿ ತಾಲ್ಲೂಕಿನ ತುರಮುರಿ ಗ್ರಾಮದಲ್ಲಿ ಕಿರಣ್‌ ಖಾಂಡೇಕರ್‌ ಅವರ ಕುಟುಂಬ ವಾಸವಾಗಿದೆ. ಇದೇ ಗ್ರಾಮದಲ್ಲಿ ಮರಾಠಾ ಮಂಡಳ ಶಿಕ್ಷಣ ಸಂಸ್ಥೆಯ ಶಾಲೆಯಿತ್ತು. ಈ ಶಾಲೆಯಲ್ಲಿ ಕಿರಣ್‌ ವ್ಯಾಸಂಗ ಮಾಡಿದ್ದ, ನಂತರ ಇದೇ ಸಂಸ್ಥೆಗೆ ಸೇರಿದ ಎಂಜಿನಿಯರಿಂಗ್‌ ಕಾಲೇಜಿಗೆ ಸೇರ್ಪಡೆಗೊಂಡಿದ್ದ’ ಎಂದು ಸ್ಮರಿಸಿದರು.
 
‘ಇವರ ತಂದೆ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಈಗ ಕಂಪೆನಿ ಮುಚ್ಚಿಹೋಗಿದ್ದು, ಕೃಷಿಯಲ್ಲಿ ತೊಡಗಿದ್ದಾರೆ. ಕುಟುಂಬದ ಹಿರಿಯ ಮಗನೇ ಇಲ್ಲವೆಂದರೆ ಕುಟುಂಬದ ಸ್ಥಿತಿ ಇನ್ನೇನಾಗಬಹುದು’ ಎಂದು ಆತಂಕ ವ್ಯಕ್ತಪಡಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.