ADVERTISEMENT

ಬಾಲಕಿ ಮೇಲೆ ಅತ್ಯಾಚಾರ: ಮುಖ್ಯ ಆರೋಪಿಗಳ ಸೆರೆ

ವಿಬ್ಗಯೊರ್‌ ಪ್ರಕರಣಕ್ಕೆ ತಿರುವು: ದುಷ್ಕೃತ್ಯದಲ್ಲಿ ಇಬ್ಬರು ಭಾಗಿ

​ಪ್ರಜಾವಾಣಿ ವಾರ್ತೆ
Published 29 ಜುಲೈ 2014, 20:21 IST
Last Updated 29 ಜುಲೈ 2014, 20:21 IST

ಬೆಂಗಳೂರು: ವಿಬ್ಗಯೊರ್‌ ಶಾಲಾ ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣ ಹೊಸ ತಿರುವು ಪಡೆದಿದ್ದು, ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಆಘಾತಕಾರಿ ಸಂಗತಿ ಪೊಲೀಸ್‌ ತನಿಖೆಯಿಂದ ಬಯಲಾಗಿದೆ. ಕೃತ್ಯದಲ್ಲಿ ಭಾಗಿಯಾದ ಇಬ್ಬರು ಮುಖ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಬ್ಬರು ಇದೇ ಶಾಲೆಯ ಉದ್ಯೋಗಿಗಳು.

ಶಾಲೆಯ ಜಿಮ್ನಾಸ್ಟಿಕ್‌ ತರಬೇತು­ದಾರರಾದ ಲಾಲ್‌ಗಿರಿ (21) ಮತ್ತು ವಸೀಂ ಪಾಷಾ (28) ಬಂಧಿತರು. ಇದರೊಂದಿಗೆ ಪ್ರಕರಣ ಸಂಬಂಧ ಬಂಧಿಸಲಾದ ಆರೋಪಿಗಳ ಸಂಖ್ಯೆ ನಾಲ್ಕಕ್ಕೆ ಏರಿದೆ.

‘ಲಾಲ್‌ಗಿರಿ ಮತ್ತು ವಸೀಂ, ವಿದ್ಯಾರ್ಥಿನಿ ಮೇಲೆ ಶಾಲೆಯ ಕೊಠಡಿ­ಯಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ವಿದ್ಯಾರ್ಥಿನಿಯ ಹೇಳಿಕೆ, ಸಾಂದರ್ಭಿಕ ಸಾಕ್ಷ್ಯಗಳನ್ನು ಆಧರಿಸಿ ಅವರನ್ನು ಬಂಧಿಸಲಾಗಿದೆ. ಅಲ್ಲದೇ, ಅವರಿಬ್ಬರೂ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ್ದಾಗಿ ತಪ್ಪೊಪ್ಪಿಗೆ ಹೇಳಿಕೆ ಕೊಟ್ಟಿದ್ದಾರೆ’ ಎಂದು ನಗರ ಪೊಲೀಸ್‌ ಕಮಿಷನರ್‌ ಎಂ.ಎನ್‌.ರೆಡ್ಡಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬೇರೆ ಅತ್ಯಾಚಾರ ಪ್ರಕರಣಗಳಂತೆ ಈ ಪ್ರಕರಣದ ತನಿಖೆ ನಡೆಸಲು ಸಿಬ್ಬಂದಿಗೆ ಸಾಧ್ಯವಿರಲಿಲ್ಲ. ವಿದ್ಯಾರ್ಥಿನಿ ಚಿಕ್ಕವಳಾ­ದ್ದರಿಂದ ಆಕೆಯನ್ನು ನೇರವಾಗಿ ಮತ್ತು ಪದೇ ಪದೇ ವಿಚಾರಣೆಗೆ ಒಳಪಡಿಸು­ವುದು ಕಷ್ಟವಿತ್ತು. ಆದ ಕಾರಣ ಸಿಬ್ಬಂದಿಯು ನಿಮ್ಹಾನ್ಸ್‌ ತಜ್ಞರ ನೆರವು ಪಡೆದು ಸೂಕ್ಷ್ಮ ತನಿಖಾ ವಿಧಾನದ ಮೂಲಕ ಆರೋಪಿಗಳನ್ನು ಪತ್ತೆ ಮಾಡಿದ್ದಾರೆ. ಪ್ರಕರಣ ಭೇದಿಸಿದ ಸಿಬ್ಬಂದಿಗೆ ರೂ. 1 ಲಕ್ಷ ಬಹುಮಾನ ನೀಡಲಾಗುತ್ತದೆ ಎಂದು ಹೇಳಿದರು.

ಘಟನೆ ಸಂಬಂಧ ಈ ಹಿಂದೆ ಬಂಧಿಸಲಾಗಿದ್ದ ಆರೋಪಿ ಮುಸ್ತಫಾ ಪ್ರಕರಣದಲ್ಲಿ ಭಾಗಿಯಾಗಿ-­ಲ್ಲವೇ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ‘ತನಿಖೆ ವೇಳೆ ಆತನ ಲ್ಯಾಪ್‌ಟಾಪ್‌ನಲ್ಲಿ ವಿದ್ಯಾರ್ಥಿನಿಯರ ಅಶ್ಲೀಲ ಛಾಯಾ­ಚಿತ್ರಗಳು ಮತ್ತು ದೃಶ್ಯ ತುಣುಕುಗಳು ಪತ್ತೆಯಾಗಿದ್ದರಿಂದ ಸಂಶಯದ ಮೇಲೆ ಬಂಧಿಸಲಾಗಿತ್ತು. ಆದರೆ, ಆತ ಪ್ರಕರಣ­ದಲ್ಲಿ ನೇರವಾಗಿ ಭಾಗಿಯಾಗಿಲ್ಲ’ ಎಂದು ಉತ್ತರಿಸಿದರು.

ಬಂಧಿತರ ಪೂರ್ವಾಪರ: ನೇಪಾಳ ಮೂಲದ ಲಾಲ್‌ಗಿರಿಯ ಪೋಷಕರು ಸುಮಾರು 25 ವರ್ಷ­ಗಳ ಹಿಂದೆಯೇ ನಗರಕ್ಕೆ ಬಂದಿದ್ದರು. ನಗರ­ದಲ್ಲೇ ಹುಟ್ಟಿ ಬೆಳೆದಿರುವ ಆತ, ಕುಟುಂಬ ಸದಸ್ಯ­ರೊಂದಿಗೆ ಬೊಮ್ಮನಹಳ್ಳಿಯಲ್ಲಿ ವಾಸವಾಗಿದ್ದ. ವಿಬ್ಗಯೊರ್‌ ಶಾಲೆಯಲ್ಲಿ ಎರಡು ವರ್ಷಗಳ ಹಿಂದೆ ಕೆಲಸಕ್ಕೆ ಸೇರಿಕೊಂಡಿದ್ದ ಆತನಿಗೆ ತಿಂಗಳಿಗೆ ರೂ. 15 ಸಾವಿರ ಸಂಬಳವಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಮೂಲತಃ ಗುಲ್ಬರ್ಗ ಜಿಲ್ಲೆಯ ವಸೀಂ, ಬಿ.ಎ ಪದವೀಧರ. ಈ ಹಿಂದೆ ಬೂದಿಗೆರೆ ಕ್ರಾಸ್‌ನ ಖಾಸಗಿ ಶಾಲೆ­ಯೊಂದರಲ್ಲಿ ಅಥ್ಲೆಟಿಕ್‌ ತರಬೇತುದಾರ­ನಾಗಿದ್ದ ಆತ ಮೂರು ವರ್ಷಗಳ ಹಿಂದೆ ವಿಬ್ಗಯೊರ್‌ ಶಾಲೆಯಲ್ಲಿ ಕೆಲಸಕ್ಕೆ ಸೇರಿದ್ದ. ವರ್ತೂರು ಸಮೀಪದ ಬಸವನಗರದಲ್ಲಿ ವಾಸವಾಗಿದ್ದ ಆತನಿಗೆ ಮಾಸಿಕ ರೂ. 17 ಸಾವಿರ ಸಂಬಳ ಬರುತ್ತಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅವರಿಬ್ಬರ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳಿಗೆ ರಕ್ಷಣೆ ಕಾಯ್ದೆ (ಪೋಕ್ಸೊ) ಮತ್ತು ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಅಥವಾ ಸಿಬ್ಬಂದಿಯಿಂದ ನಡೆದ ಅತ್ಯಾಚಾರ (ಐಪಿಸಿ 376ಡಿ) ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಅವರ ವಿರುದ್ಧ ಈ ಹಿಂದೆ ಯಾವುದೇ ಅಪ­ರಾಧ ಪ್ರಕರಣಗಳು ದಾಖಲಾ­ಗಿರುವ ಬಗ್ಗೆ ಮಾಹಿತಿ ಇಲ್ಲ ಎಂದು ಪೊಲೀಸರು ಹೇಳಿದ್ದಾರೆ.

ವಿಬ್ಗಯೊರ್‌ ಶಾಲೆಯಲ್ಲಿ ಸ್ಕೇಟಿಂಗ್‌ ಸಹಾಯಕ ತರಬೇತುದಾರನಾಗಿದ್ದ ಮುಸ್ತಫಾ ಅಲಿಯಾಸ್‌ ಮುನ್ನಾನನ್ನು ಪೊಲೀಸರು ಜು.20ರಂದು ಬಂಧಿಸಿ­ದ್ದರು. ನಂತರ ಜು.23ರಂದು ಶಾಲೆಯ ಸಂಸ್ಥಾಪಕ ಅಧ್ಯಕ್ಷ ರುಸ್ತುಂ ಕೇರವಾಲ ಅವರನ್ನು ಬಂಧಿಸಿ, ನ್ಯಾಯಾಲಯ ಜಾಮೀನು ನೀಡಿದ್ದರಿಂದ ಬಿಡುಗಡೆ ಮಾಡಿದ್ದರು. ಮುಸ್ತಫಾ, ನ್ಯಾಯಾಂಗ ಬಂಧನದಲ್ಲಿದ್ದಾನೆ.

ಜಿಮ್ನಾಸ್ಟಿಕ್‌ ಕೊಠಡಿಯಲ್ಲಿ ಕೃತ್ಯ: ಪ್ರತಿನಿತ್ಯದಂತೆ ಜು.3ರಂದು ಶಾಲೆಗೆ ಬಂದಿದ್ದ ವಿದ್ಯಾರ್ಥಿನಿ, ಬೆಳಿಗ್ಗೆ 11 ಗಂಟೆ ಸುಮಾರಿಗೆ ಸಹಪಾಠಿಗಳೊಂದಿಗೆ ಶಾಲಾ ಆವರಣದಲ್ಲಿನ ಜಿಮ್ನಾಸ್ಟಿಕ್‌ ಕೊಠಡಿಗೆ ಹೋಗಿದ್ದಳು. ನಂತರ ಆಕೆಯ ಸಹಪಾಠಿಗಳು ಜಿಮ್ನಾಸ್ಟಿಕ್‌ ತರಬೇತಿ ಮುಗಿಸಿಕೊಂಡು ತರಗತಿಗೆ ಹಿಂದಿರು­ಗಿದ್ದರು. ಆದರೆ, ತರಗತಿಗೆ ಹಿಂದಿರುಗಲು ನಿರಾಕರಿಸಿ ಜಿಮ್ನಾಸ್ಟಿಕ್‌ ಕೊಠಡಿಯಲ್ಲೇ ಉಳಿದ ಆಕೆಯ ಮೇಲೆ ಲಾಲ್‌ಗಿರಿ ಮತ್ತು ವಸೀಂ ಅತ್ಯಾಚಾರ ಎಸಗಿದ್ದರು. ಅರ್ಧ ತಾಸಿನ ನಂತರ ಆರೋಪಿಗಳೇ ಆಕೆಯನ್ನು ಜಿಮ್ನಾಸ್ಟಿಕ್‌ ಕೊಠಡಿಯಿಂದ ತರಗತಿಗೆ ಕರೆದುಕೊಂಡು ಹೋಗಿ ಬಿಟ್ಟಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ವಿದ್ಯಾರ್ಥಿನಿ ಸಹಪಾಠಿಗಳೊಂದಿಗೆ ಜಿಮ್ನಾಸ್ಟಿಕ್‌ ಕೊಠಡಿಗೆ ಹೋಗುವ ಮತ್ತು ಸ್ವಲ್ಪ ಸಮಯದ ಬಳಿಕ ಅಲ್ಲಿಂದ ಆರೋಪಿಗಳು ಆಕೆಯನ್ನು ತರಗತಿಗೆ ಕರೆದೊಯ್ಯುವ ದೃಶ್ಯ ಜಿಮ್ನಾಸ್ಟಿಕ್‌ ಕೊಠಡಿಯ ಮುಂಭಾಗದ ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಆ ದೃಶ್ಯಾ­­ವಳಿಯನ್ನು ಆಧರಿಸಿ ಅವರಿಬ್ಬ­ರನ್ನೂ ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆಗೆ ಒಳಪಡಿಸಿದಾಗ ತಪ್ಪು ಒಪ್ಪಿಕೊಂಡರು. ಘಟನೆ ನಂತರ ಅವರಿಬ್ಬರೂ ಪ್ರತಿನಿತ್ಯದಂತೆ ಶಾಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದರು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ಮಂಪರು ಪರೀಕ್ಷೆಗೆ ನಿರ್ಧಾರ:
ಪ್ರಕರಣದಲ್ಲಿ ಮುಸ್ತಫಾನ ಯಾವುದೇ ಪಾತ್ರವಿಲ್ಲ ಎಂದು ಮೇಲ್ನೊಟಕ್ಕೆ ಗೊತ್ತಾಗಿದೆ. ಆದರೆ, ಆತ ಈ ಹಿಂದೆ ಕೆಲಸ ಮಾಡುತ್ತಿದ್ದ ವೈಟ್‌ಫೀಲ್ಡ್‌ನ ಡೀನ್ಸ್‌ ಅಕಾಡೆಮಿ ಶಾಲೆಯಲ್ಲಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಹೇಳಿಕೆ ಕೊಟ್ಟಿದ್ದಾನೆ. ಆ ಸಂಬಂಧ ಡೀನ್ಸ್‌ ಅಕಾಡೆಮಿ ಆಡಳಿತ ಮಂಡಳಿ ಸದಸ್ಯರು ದೂರು ಕೊಟ್ಟಿದ್ದಾರೆ. ಆ ದೂರು ಆಧರಿಸಿ ಮುಸ್ತಫಾನ ವಿರುದ್ಧ ವೈಟ್‌ಫೀಲ್ಡ್‌ ಠಾಣೆಯಲ್ಲಿ ‘ಪೊಕ್ಸೊ ’ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಆ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುವ ಉದ್ದೇಶದಿಂದ ಆತನಿಗೆ ಮಂಪರು ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದು ಉನ್ನತ ಪೊಲೀಸ್‌ ಮೂಲಗಳು ತಿಳಿಸಿವೆ.

ತಪ್ಪೊಪ್ಪಿಗೆ ಹೇಳಿಕೆ
ಸುಮಾರು ಒಂದು ವರ್ಷದ ಹಿಂದೆ ಶಾಲೆಗೆ ಸೇರಿದ್ದ ಆ ಬಾಲಕಿ ಹೆಚ್ಚು ತುಂಟಿಯಾಗಿದ್ದಳು. ಸಾಮಾನ್ಯ ಮಕ್ಕಳಿ­ಗಿಂತ ಹೆಚ್ಚು ಚಟುವಟಿಕೆಯಿಂದಿ­ರುವ ಆಕೆ ತರಗತಿಯಲ್ಲಿ ರಗಳೆ ಮಾಡುತ್ತಿ­ದ್ದಳು. ಸಹ­ಪಾಠಿಗಳಿಗೆ ಚಿವುಟುತ್ತಿದ್ದ ಆಕೆ ತರಗತಿಯಲ್ಲಿ ಇರಲು ಇಷ್ಟಪಡದೆ ಮೈದಾನಕ್ಕೆ ಓಡುತ್ತಿದ್ದಳು. ಅವಳನ್ನು ಶಾಲೆಯಲ್ಲಿ ಸಂಭಾಳಿಸುವುದೇ ಸಮಸ್ಯೆ­ಯಾಗಿತ್ತು. ಜುಲೈ 3ರಂದು ಸಹಪಾಠಿ­ಗಳೊಂದಿಗೆ ತರಗತಿಗೆ ಹೋಗಲು ನಿರಾಕರಿಸಿ, ಜಿಮ್ನಾಸ್ಟಿಕ್‌ ಕೊಠಡಿ­ಯಲ್ಲೇ ಹಟ ಮಾಡಿ ಕುಳಿತ ಆಕೆ ಮೇಲೆ ಇಬ್ಬರೂ ಸೇರಿ ಅತ್ಯಾ­ಚಾರ ಎಸಗಿದೆವು ಎಂದು ಲಾಲ್‌ಗಿರಿ ಮತ್ತು ವಸೀಂ ತಪ್ಪೊಪ್ಪಿಗೆ ಹೇಳಿಕೆ ಕೊಟ್ಟಿ­ದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

***
‘ಸುಪ್ರೀಂ’ ಸ್ಪಷ್ಟನೆ 
ನವದೆಹಲಿ:
ಫಿರ್ಯಾದು­ದಾರರು ಮತ್ತು ಆರೋಪಿಗಳು ರಾಜಿ ಸಂಧಾನ ಮಾಡಿಕೊಂಡರೂ ಅತ್ಯಾಚಾರ ಮತ್ತು ಕೊಲೆ­ಯಂತಹ ಘೋರ ಅಪರಾಧ­ಗಳ ವಿಚಾ­ರಣೆ­ಯನ್ನು ಅರ್ಧ­ದಲ್ಲಿ ರದ್ದುಗೊಳಿ­ಸಲು ಸಾಧ್ಯ­ವಿಲ್ಲ ಎಂದು ‘ಸುಪ್ರೀಂ’ ಸ್ಪಷ್ಟಪಡಿಸಿದೆ. 

ಬೆದರಿಸಿ ಅತ್ಯಾಚಾರ
ನವದೆಹಲಿ:
ಬಾಲಕಿಯನ್ನು ಪಿಸ್ತೂಲಿನಿಂದ ಹೆದರಿಸಿ ಐವರು ಸಾಮೂ­ಹಿಕವಾಗಿ ಅತ್ಯಾ­ಚಾರ ಎಸಗಿ­ರುವ ಘಟನೆ ಪಶ್ಚಿಮ ದೆಹಲಿಯ ಮನೆ­ಯೊಂದರಲ್ಲಿ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT