ADVERTISEMENT

ಬಿಎಸ್‌ವೈಗೆ ಮುಖಭಂಗ

ರಾಜ್ಯ ಬಿಜೆಪಿ ಅಧ್ಯಕ್ಷರು ಕರೆದ ಸಭೆಗೆ ಬಾರದ ಭಿನ್ನಮತೀಯರು

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 19:45 IST
Last Updated 19 ಜನವರಿ 2017, 19:45 IST
ಬಿಎಸ್‌ವೈಗೆ ಮುಖಭಂಗ
ಬಿಎಸ್‌ವೈಗೆ ಮುಖಭಂಗ   

ಬೆಂಗಳೂರು: ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು ಗುರುವಾರ ಕರೆದಿದ್ದ ಸಂಧಾನ ಸಭೆಯನ್ನು ಬಹಿಷ್ಕರಿಸುವ ಮೂಲಕ ಅತೃಪ್ತರು ರಾಜ್ಯ ನಾಯಕತ್ವಕ್ಕೆ ಸೆಡ್ಡು ಹೊಡೆದಿದ್ದಾರೆ.

ಬಾಗಲಕೋಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿರುವ  ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ ಅವರು, ‘ಬಿಜೆಪಿಯ ಗಂಧ–ಗಾಳಿ ಗೊತ್ತಿಲ್ಲದವರಿಗೆ ಪಕ್ಷದಲ್ಲಿ ಪ್ರಾಧಾನ್ಯತೆ ನೀಡಿ, ನಿಷ್ಠಾವಂತರನ್ನು ಕಡೆಗಣಿಸಲಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಬಿಜೆಪಿಗೆ ಮತ್ತೆ ಅಧಿಕಾರ ಸಿಗುತ್ತದೋ, ಇಲ್ಲವೋ ಗೊತ್ತಿಲ್ಲ. ಆದರೆ, ರೆಸಾರ್ಟ್ ರಾಜಕಾರಣ ಮರುಕಳಿಸಲಿದೆ’ ಎಂದರು.

ಈಶ್ವರಪ್ಪ ವರ್ತನೆ ವಿರುದ್ಧ ಸೆಟೆದು ನಿಂತಿರುವ ಆಯನೂರು ಮಂಜುನಾಥ್‌ ಚಿಕ್ಕಮಗಳೂರು, ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳ ಸಂಘಟನೆಯ ಪ್ರಭಾರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಲ್ಲದೇ, ಈಶ್ವರಪ್ಪ ವಿರುದ್ಧ ವ್ಯಂಗ್ಯಮಿಶ್ರಿತ ಧ್ವನಿಯಲ್ಲಿ ಟೀಕೆ ಮಾಡಿದ್ದಾರೆ.

ಕಾದು ಕುಳಿತ ಬಿಎಸ್‌ವೈ: ಭಿನ್ನರ ಅಹವಾಲು ಆಲಿಸಲು ಮಧ್ಯಾಹ್ನ 3.30ಕ್ಕೆ ಸಮಯ ನಿಗದಿ ಮಾಡಿದ್ದ ಯಡಿಯೂರಪ್ಪ ಅವರು, 4.30 ರವರೆಗೂ ತಮ್ಮ ನಿವಾಸದಲ್ಲಿಯೇ  ಕುಳಿತಿದ್ದರು. ಸಭೆಗೆ ಬರುವುದಿಲ್ಲ ಎಂಬ  ಭಿನ್ನರು ಮಾಹಿತಿ ರವಾನಿಸಿದ್ದು ಖಚಿತವಾದ ಬಳಿಕ 5 ಗಂಟೆ ಸುಮಾರಿಗೆ  ಬಿಜೆಪಿ ಕಚೇರಿಗೆ ಬಂದರು. ಪಕ್ಷದ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ, ರವಿಕುಮಾರ್‌ ಜತೆ ಮಾತುಕತೆ ನಡೆಸಿದ ಅವರು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೂ ಉತ್ತರ  ನೀಡದೇ ಕಚೇರಿಯಿಂದ ತೆರಳಿದರು.

ಪಕ್ಷದ ಎರಡನೆಯ ಹಂತದ ನಾಯಕರಾಗಿರುವ, ರಾಜ್ಯ ಘಟಕದ ಉಪಾಧ್ಯಕ್ಷ ಎಂ.ಬಿ. ಭಾನುಪ್ರಕಾಶ್, ನಿರ್ಮಲಕುಮಾರ್ ಸುರಾನ ಸೇರಿದಂತೆ 24 ಜನರು ಯಡಿಯೂರಪ್ಪ ನಡೆ ಆಕ್ಷೇಪಿಸಿ ಪತ್ರ ಬರೆದಿದ್ದರು. ತಮ್ಮ ವಿರೋಧಿ ಅಲೆಗೆ ತೀವ್ರತೆ ಸಿಗುವುದನ್ನು ಕಂಡ ಯಡಿಯೂರಪ್ಪ, ಪತ್ರ ಬರೆದಿದ್ದವರ ಪೈಕಿ 12 ಜನರನ್ನು ಮಾತುಕತೆಗೆ ಕರೆದಿದ್ದರು.

ಈ ಸಭೆಗೆ ಮುನ್ನ ಕಾರ್ಯತಂತ್ರ ರೂಪಿಸಲು ಸೊಗಡು ಶಿವಣ್ಣ ಅವರ ತುಮಕೂರಿನ ನಿವಾಸದಲ್ಲಿ ಬುಧವಾರ ಸಭೆ ಸೇರಿದ್ದ ಭಿನ್ನರ ಬಣ, ಸಭೆಯಲ್ಲಿ ಮಂಡಿಸಬೇಕಾದ ವಿಷಯಗಳ ಕುರಿತು ಚರ್ಚಿಸಿತ್ತು. ಆದರೆ, ಕೊನೆಗಳಿಗೆಯಲ್ಲಿ ಸಂಧಾನ ಸಭೆ ಬಹಿಷ್ಕರಿಸುವ ನಿರ್ಣಯಕ್ಕೆ ಭಿನ್ನರ ಬಣ ಬಂದಿತು ಎನ್ನಲಾಗಿದೆ.
*
ಬ್ರಿಗೇಡ್‌ಗೆ ಪ್ರಮುಖರ ಬೆಂಬಲ: ಈಶ್ವರಪ್ಪ
‘ಬ್ರಿಗೇಡ್‌ ವಿಷಯದಲ್ಲಿ ಪ್ರಮುಖರು ಇದುವರೆಗೂ ಒಂದೇ ಒಂದು ಸೂಚನೆ ನೀಡಿಲ್ಲ. ಮೌನಕ್ಕೆ ಶರಣಾಗಿದ್ದಾರೆ. ಮೌನಂ ಸಮ್ಮತಿ ಲಕ್ಷಣಂ ಎಂಬುದನ್ನು ಅರಿತು ನಾನು ಸಂಘಟನೆಯಲ್ಲಿ ಸಕ್ರಿಯನಾಗಿರುವೆ’ ಎಂದು ಕೆ.ಎಸ್‌. ಈಶ್ವರಪ್ಪ ಬಾಗಲಕೋಟೆಯಲ್ಲಿ ಹೇಳಿದರು.

‘ಯಡಿಯೂರಪ್ಪ ಹಾಗೂ ನನ್ನ ಮಧ್ಯೆ ಇರುವುದು ಅಣ್ಣ–ತಮ್ಮಂದಿರ ಜಗಳ. ಹಾಗೆಂದು ನಾವು ಭಾರತ–ಪಾಕಿಸ್ತಾನ ಅಲ್ಲ. ಗೊಂದಲ ಉದ್ಭವವಾಗಿರುವ ವಿಚಾರವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಅವರ ಗಮನಕ್ಕೆ ತರಲಾಗಿದೆ. ಶೀಘ್ರವೇ ಅವರು ರಾಜ್ಯಕ್ಕೆ ಭೇಟಿ ನೀಡಿ ಬಿಕ್ಕಟ್ಟು ಪರಿಹರಿಸಲಿದ್ದಾರೆ ಎಂದರು.
*
ಶಿಸ್ತುಕ್ರಮ ಕೈಬಿಡದಿದ್ದರೆ ಹೋರಾಟ

ಬೆಂಗಳೂರು: ಬ್ರಿಗೇಡ್‌ ಜತೆ ಗುರುತಿಸಿಕೊಂಡಿರುವ  ಕೆಲವು ಮುಖಂಡರ ವಿರುದ್ಧ  ಬಿಜೆಪಿ ಕೈಗೊಂಡಿರುವ ಶಿಸ್ತು ಕ್ರಮ ಕೈಬಿಡದಿದ್ದರೆ ಹೋರಾಟ ನಡೆಸಬೇಕಾಗುತ್ತದೆ ಎದು ರಾಯಣ್ಣ ಬ್ರಿಗೇಡ್‌ ಅಧ್ಯಕ್ಷ ವಿರೂಪಾಕ್ಷಪ್ಪ ಎಚ್ಚರಿಸಿದ್ದಾರೆ.

ಮಾಧ್ಯಮಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ರಾಯಣ್ಣ ಬ್ರಿಗೇಡ್ ಸಂಘಟನೆಯ ಕುರಿತು ಯಡಿಯೂರಪ್ಪ ಅವರ ಜತೆ ಮಾತುಕತೆ ನಡೆಸಲು ಉದ್ದೇಶಿಸಿದ್ದೇವೆ. ಅದಕ್ಕಾಗಿ ಸಮಯವನ್ನೂ ಕೇಳಿದ್ದೇವೆ’ ಎಂದರು.

ಬ್ರಿಗೇಡ್‌ನ ಬೆಂಬಲ ಅಗತ್ಯವಿಲ್ಲ ಎಂದು ಯಡಿಯೂರಪ್ಪ ಮತ್ತು ಬಿ.ಜೆ.ಪುಟ್ಟಸ್ವಾಮಿ ಅವರು ಹೇಳಿರುವುದರಿಂದ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡದೇ ಇರಲು ನಿರ್ಧರಿಸಲಾಗಿದೆ ಎಂದರು.
*
ಆಂತರಿಕ ಕಲಹಗಳನ್ನು ಇತ್ಯರ್ಥಪಡಿಸಲು ಕರೆದಿದ್ದ ಸಭೆಗೆ ಈಶ್ವರಪ್ಪ ಮತ್ತು ಇತರರು ತಪ್ಪಿಸಿಕೊಂಡಿದ್ದಾರೆ. ಅವರಿಗೆ ಸಮಸ್ಯೆ ಇತ್ಯರ್ಥವಾಗುವುದು ಇಷ್ಟವಿಲ್ಲ.
ಬಿ.ಎಸ್.ಯಡಿಯೂರಪ್ಪ
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.