ADVERTISEMENT

ಮದುವೆ ಮಾಡಿಸಿ ಎಂದಿದ್ದ ಮಹೇಶ್

ಯೋಧನ ದೊಡ್ಡಪ್ಪನ ಕಣ್ಣೀರು

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2016, 19:30 IST
Last Updated 12 ಫೆಬ್ರುವರಿ 2016, 19:30 IST
ಮಹೇಶ್‌
ಮಹೇಶ್‌   

ಸಾಲಿಗ್ರಾಮ (ಮೈಸೂರು ಜಿಲ್ಲೆ): ‘ರಜೆಯಲ್ಲಿ ಊರಿಗೆ ಬರುತ್ತೇನೆ. ನನಗೆ ತಂದೆ ಇಲ್ಲ. ದೊಡ್ಡಪ್ಪಾ ನೀವೇ ಎಲ್ಲಾ. ದಯವಿಟ್ಟು ಹುಡುಗಿ ನೋಡಿ ನನಗೆ ಮದುವೆ ಮಾಡಿಸಿ ಎಂದು ಕಳೆದ 4 ತಿಂಗಳ ಹಿಂದೆ ಪಶುಪತಿ ಗ್ರಾಮಕ್ಕೆ ಬಂದಾಗ ಕೇಳಿಕೊಂಡಿದ್ದ. ಈಗ ನೋಡಿ ಸ್ವಾಮಿ, ಆ ದೇವರು ನಮ್ಮಿಂದ ನನ್ನ ಮಗನನ್ನು ಕಿತ್ತುಕೊಂಡುಬಿಟ್ಟ’ ಎಂದು ಯೋಧ ಪಿ.ಎನ್‌. ಮಹೇಶ್ ಅವರ ದೊಡ್ಡಪ್ಪ ಬಸಪ್ಪ ಕಣ್ಣೀರು ಹಾಕುತ್ತಾ ಹೇಳಿದರು.

ಹಿಮಪಾತದಲ್ಲಿ ಯೋಧ ಪಿ.ಎನ್. ಮಹೇಶ್ ಮೃತಪಟ್ಟಿರುವ ಸುದ್ದಿ ತಿಳಿಯುತ್ತಿದ್ದಂತೆ ಯೋಧನ ಕರ್ಮಭೂಮಿ ಕೆ.ಆರ್. ನಗರ ತಾಲ್ಲೂಕಿನ ಸಾಲಿಗ್ರಾಮ ಹೋಬಳಿ ಪಶುಪತಿ ಗ್ರಾಮದಲ್ಲಿ ದುಃಖ ಮಡುಗಟ್ಟಿದೆ. ಗ್ರಾಮಸ್ಥರು ಸೇರಿದಂತೆ ಸಂಬಂಧಿಗಳು, ಯೋಧನ ತಾಯಿ ಸರ್ವಮಂಗಳಾ ಅವರನ್ನು ಸಂರ್ಪಕಿಸಿದರು. ಮಹೇಶನ ತಂದೆಯ ಸಮಾಧಿ ಇರುವ ಜಮೀನಿನಲ್ಲೇ ಅಂತ್ಯಕ್ರಿಯೆ ಮಾಡುವಂತೆ ಅವರು ಮನವಿ ಮಾಡಿ ದ್ದಾರೆ’ ಎಂದು  ಮಹೇಶ್‌ ಸಂಬಂಧಿ ಪಿ.ಎನ್‌. ದಿನೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪಶುಪತಿ ಗ್ರಾಮದಲ್ಲಿ ಯೋಧನ ಅಂತ್ಯಕ್ರಿಯೆ ಎಂದು ತಿಳಿಯುತ್ತಿದ್ದಂತೆ ಸಂಬಂಧಿಗಳು, ಗ್ರಾಮಸ್ಥರು ಹಾಗೂ ಯುವಕರು ಸ್ವಯಂಪ್ರೇರಣೆ ಯಿಂದ ಯೋಧನ ಜಮೀನನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ.  ಯೋಧನ ಪಾರ್ಥಿವ ಶರೀರ ಪಶುಪತಿ ಗ್ರಾಮಕ್ಕೆ ಶುಕ್ರವಾರ ಮುಂಜಾನೆ ಬರುತ್ತದೆ ಎಂಬ ಮಾಹಿತಿ ಇತ್ತು. ಮೃತ ಯೋಧನ ಮನೆ ಮುಂದೆ ಜನದಟ್ಟಣೆ ಹೆಚ್ಚಾಗಿತ್ತು. ‘ಪಾರ್ಥಿವ ಶರೀರ ಬರಲಿಲ್ಲ. ನಾವು ಯಾವ ಅಧಿಕಾರಿಗಳನ್ನು ಕೇಳಬೇಕು ಎಂಬುದು ಗೊತ್ತಾಗುತ್ತಿಲ್ಲ. ಅಲ್ಲದೇ, ಯಾವ ಅಧಿ ಕಾರಿಗಳೂ ಸೂಕ್ತ ಮಾಹಿತಿ ನೀಡುತ್ತಿಲ್ಲ’ ಎಂದು ಯೋಧನ ಅಕ್ಕ ಯೋಗಾಮಣಿ ಅಸಹಾಯಕತೆ ತೋಡಿಕೊಂಡರು.

‘9 ವರ್ಷಗಳ ಹಿಂದೆ ಮಹೇಶ್ ಸೇನೆಗೆ ಸೇರಿದಾಗ, ಅಕ್ಕಾ ನನಗೆ ಆಶೀರ್ವಾದ ಮಾಡು ಎಂದಿದ್ದ. ಈಗ ನೋಡಿ ಆ ದೇವರು ನನ್ನ ತಮ್ಮನನ್ನು ಕಿತ್ತುಕೊಂಡು ಬಿಟ್ಟ’ ಎಂದು ಗೌರಮ್ಮಣ್ಣಿ  ದುಃಖ ತೋಡಿಕೊಂಡರು. 

ಜಿಲ್ಲಾ ಹೆಚ್ಚುವರಿ ಎಸ್‌ಪಿ ಕಲಾಕೃಷ್ಣಸ್ವಾಮಿ, ತಹಶೀಲ್ದಾರ್ ನಾಗರಾಜ್, ಸಿಪಿಐ ಸಿದ್ದಯ್ಯ, ಎಸ್ಐ ಗಂಗಾಧರ್ ಶುಕ್ರವಾರ ಪಶುಪತಿ ಗ್ರಾಮಕ್ಕೆ ಭೇಟಿ ನೀಡಿ ಯೋಧನ ಸಂಬಂಧಿಗಳಿಂದ ಮಾಹಿತಿ ಪಡೆದುಕೊಂಡರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.