ADVERTISEMENT

ಮದ್ಯದ ಅಂಗಡಿಗೆ ಪರವಾನಗಿ: ಒಕ್ಕೊರಲ ಖಂಡನೆ

ಕೊಟ್ಟ‘ಭಾಗ್ಯ’ ಕಸಿಯದಿರಿ– ‘ಮಹಿಳೆ: ಆಧುನಿಕತೆಗೆ ಮುಖಾಮುಖಿ’ ಗೋಷ್ಠಿಯಲ್ಲಿ ಸರ್ಕಾರಕ್ಕೆ ಹೇಮಲತಾ ಮಹಿಷಿ ಮನವಿ

ವಿಶಾಲಾಕ್ಷಿ
Published 2 ಡಿಸೆಂಬರ್ 2016, 19:30 IST
Last Updated 2 ಡಿಸೆಂಬರ್ 2016, 19:30 IST
ಸಮಾನಾಂತರ ವೇದಿಕೆಯ ಘನಮಠ ಶಿವಯೋಗಿ ವೇದಿಕೆಯಲ್ಲಿ ಶುಕ್ರವಾರ ನಡೆದ 'ಮಹಿಳೆ: ಆಧುನಿಕತೆಗೆ ಮುಖಾಮುಖಿ' ಗೋಷ್ಠಿಯಲ್ಲಿ ಭಾಗವಹಿಸಿದ್ದ ಡಾ. ಕಲಾವತಿ ಬಳ್ಳಾರಿ, ಡಾ. ಎಚ್.ಎಲ್. ಪುಷ್ಪ, ಹೇಮಲತಾ ಮಹಿಷಿ, ಡಾ. ವಸುಂಧರಾ ಭೂಪತಿ, ಡಾ. ಅನಸೂಯಾ ಕಾಂಬಳೆ, ಡಾ. ಗಂಗಾಂಬಿಕಾ ಪಾಟೀಲ
ಸಮಾನಾಂತರ ವೇದಿಕೆಯ ಘನಮಠ ಶಿವಯೋಗಿ ವೇದಿಕೆಯಲ್ಲಿ ಶುಕ್ರವಾರ ನಡೆದ 'ಮಹಿಳೆ: ಆಧುನಿಕತೆಗೆ ಮುಖಾಮುಖಿ' ಗೋಷ್ಠಿಯಲ್ಲಿ ಭಾಗವಹಿಸಿದ್ದ ಡಾ. ಕಲಾವತಿ ಬಳ್ಳಾರಿ, ಡಾ. ಎಚ್.ಎಲ್. ಪುಷ್ಪ, ಹೇಮಲತಾ ಮಹಿಷಿ, ಡಾ. ವಸುಂಧರಾ ಭೂಪತಿ, ಡಾ. ಅನಸೂಯಾ ಕಾಂಬಳೆ, ಡಾ. ಗಂಗಾಂಬಿಕಾ ಪಾಟೀಲ   

ಸಮಾನಾಂತರ ವೇದಿಕೆ (ರಾಯಚೂರು:) ರಾಜ್ಯದಲ್ಲಿ ಹೊಸದಾಗಿ 900 ಮದ್ಯದ ಅಂಗಡಿಗಳ ಆರಂಭಕ್ಕೆ ಅನುಮತಿ ನೀಡಿರುವುದನ್ನು ಇಲ್ಲಿನ ಸಮಾನಾಂತರ ವೇದಿಕೆಯಲ್ಲಿ ಶುಕ್ರವಾರ ನಡೆದ ಮಹಿಳಾ ಗೋಷ್ಠಿ ಒಕ್ಕೊರಲಿನಿಂದ ಖಂಡಿಸಿತು.

‘ಮದ್ಯದ ಅಂಗಡಿಗಳನ್ನು ಮುಚ್ಚುವಂತೆ ಈ ಜಿಲ್ಲೆಯ ಮಹಿಳೆಯರು ನಡೆಸಿದ ಬೃಹತ್ ಹೋರಾಟವನ್ನು ಅವಮಾನಿಸುವ ರೀತಿಯಲ್ಲಿ ಸರ್ಕಾರ ಇಂಥ ನಿರ್ಧಾರ ಕೈಗೊಂಡಿದೆ. ಇದು ಆಗದಂತೆ ತಡೆಯಬೇಕು’ ಎಂದು ಆಗ್ರಹಿಸಿದ ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷ ಡಾ.ಬರಗೂರು ರಾಮಚಂದ್ರಪ್ಪ ಕೂಡ ಉಪಸ್ಥಿತರಿದ್ದರು.

‘ಮಹಿಳೆ: ಆಧುನಿಕತೆಗೆ ಮುಖಾಮುಖಿ' ಗೋಷ್ಠಿಯ ಆರಂಭದಲ್ಲೇ ಈ ಕುರಿತು ಆಕ್ಷೇಪ ಎತ್ತಿದ ಡಾ. ಎಚ್.ಎಲ್. ಪುಷ್ಪ, ಹಿಂದೊಮ್ಮೆ ವಿದ್ಯಾರ್ಥಿಗಳಿಗೆ ನೋಟ್‍ಬುಕ್ ವಿತರಿಸುತ್ತಿದ್ದ ಎಂಎಸ್‍ಐಎಲ್‍ನಿಂದ ಬದುಕನ್ನು ಅಧೋಗತಿಗೆ ತರುವ ಇಂಥ ಕೆಲಸ ಆಗಬಾರದು’ ಎಂದರು. ಗೋಷ್ಠಿಯಲ್ಲಿ ಭಾಗವಹಿಸಿದ್ದ ಎಲ್ಲ ಉಪನ್ಯಾಸಕರ ಮಾತಿನಲ್ಲೂ ಈ ವಿಷಯ ಪ್ರಸ್ತಾಪವಾಯಿತು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಹೇಮಲತಾ ಮಹಿಷಿ, ‘ಒಂದು ಕೈಯಲ್ಲಿ ಭಾಗ್ಯಗಳನ್ನು ಕೊಟ್ಟ ಸರ್ಕಾರ ಇನ್ನೊಂದು ಕೈಯಲ್ಲಿ ಅವುಗಳನ್ನು ಕಸಿದುಕೊಳ್ಳುವ ಕೆಲಸಕ್ಕೆ ಮುಂದಾಗುತ್ತಿದೆ. ಇದು ಸಲ್ಲ. ಎಷ್ಟು ಬೇಕಿದ್ದರೂ ತೆರಿಗೆ ಕಟ್ಟುತ್ತೇವೆ. ಆದರೆ ಸರ್ಕಾರ  ಮದ್ಯ ಮಾರಾಟದಿಂದ ಮಾತ್ರ ಆದಾಯ ನಿರೀಕ್ಷಿಸುವುದು ತರವಲ್ಲ' ಎಂದರು.

‘ಮಹಿಳೆ ಮತ್ತು ಸಮಕಾಲೀನ ಸಮಸ್ಯೆಗಳು' ವಿಷಯವಾಗಿ ಮಾತನಾಡಿದ ಪುಷ್ಪ, ‘ದೇಹ ಮತ್ತು ದೇಹಮೂಲವಾದ ಸವಾಲುಗಳ ಕಾರಣದಿಂದಾಗಿ ಮಹಿಳೆ ಅವಮಾನಕ್ಕೀಡಾಗುತ್ತಿದ್ದಾಳೆ. ದುರ್ಬಲ ಎನಿಸುತ್ತಿದ್ದಾಳೆ. ಇದರ ನಡುವೆಯೇ ಆಕೆ ತನ್ನನ್ನು ತಾನು ಹೇಗೆ ಕಾಪಾಡಿಕೊಳ್ಳಬೇಕು ಎನ್ನುವ ನಿಟ್ಟಿನ ಪ್ರಯತ್ನವನ್ನೂ ನಡೆಸಿದ್ದಾಳೆ’ ಎಂದರು.

'ಸಾಹಿತ್ಯ: ಲಿಂಗ ರಾಜಕಾರಣ' ವಿಷಯವಾಗಿ ಮಾತನಾಡಿದ ಡಾ.ವಸುಂಧರಾ ಭೂಪತಿ, 'ಲಿಂಗ ರಾಜಕಾರಣ ಛದ್ಮವೇಷದಲ್ಲಿದ್ದು, ಅಮೂರ್ತ ನೆಲೆಗಳಲ್ಲಿ ನಮ್ಮನ್ನು ಬಾಧಿಸುತ್ತಿದೆ. ಪ್ರಶ್ನಿಸಲೂ ಆಗದಂಥ ಸ್ಥಿತಿಗೆ ತಂದೊಡ್ಡಿದೆ' ಎಂದು ವಿಷಾದಿಸಿದರು.

ವಚನಕಾರ್ತಿಯರು. ಸ್ವಮರುಕದ ವ್ಯಕ್ತಿತ್ವದಿಂದ ಹೊರಬಂದು, ಆತ್ಮಘನತೆಯಿಂದ ಮಾತನಾಡಿದ ವ್ಯಕ್ತಿತ್ವಗಳು ಅವು ಎಂದು ಬಣ್ಣಿಸಿದರು.
"ಕೌಟುಂಬಿಕ ವ್ಯವಸ್ಥೆಯೊಳಗ ಮಹಿಳೆ' ವಿಷಯವಾಗಿ ಡಾ. ಕಲಾವತಿ ಬಳ್ಳಾರಿ ಮಾತನಾಡಿದರು.

‘ವ್ಯಾಖ್ಯಾನಕ್ಕೆ ಸಿಗದ ಆಧುನಿಕತೆ ನಿತ್ಯವೂ ತನ್ನ ಸಂರಚನೆಯನ್ನು ಬದಲಿಸಿಕೊಳ್ಳುತ್ತಿರುವ "ಆಧುನಿಕತೆ'ಯನ್ನು ವ್ಯಾಖ್ಯಾನಿಸುವ, ಅದು ತಂದಿತ್ತ ಸಂಕಟಗಳ ಬಗ್ಗೆ ಗೋಷ್ಠಿಯಲ್ಲಿ ಇನ್ನಷ್ಟು ಚರ್ಚೆ ಆಗಬೇಕಿತ್ತು’ ಎಂದು ಡಾ. ಅನಸೂಯಾ ಕಾಂಬಳೆ ಪ್ರತಿಕ್ರಿಯೆ ವ್ಯಕ್ತಪಡಿಸಿದರು.

'ಆಧುನಿಕತೆ ಎಂದರೆ ಹಳೆಯದೆಲ್ಲವನ್ನು ಬಿಟ್ಟುಬಿಡುವುದೇ? ಹೊಸದೆಲ್ಲವೂ ಒಳ್ಳೆಯದೇ?' ಎಂಬುದನ್ನು ವಿಚಾರ ಮಾಡಬೇಕು. ಗಾಬರಿ ಹುಟ್ಟಿಸುವ ರೀತಿಯಲ್ಲಿ ಶೀಘ್ರವಾಗಿ ಬದಲಾವಣೆಗಳಾಗುತ್ತಿದ್ದು, ನಮ್ಮ ಮನೆ, ಮಕ್ಕಳು, ನಮ್ಮೆಲ್ಲರಲ್ಲೂ ಬದಲಾವಣೆ ಕಾಣುತ್ತಿದೆ. ಪ್ರಗತಿಪರರು ಎನ್ನಿಸಿಕೊಂಡವರೇ ಹಳಬರಾಗುತ್ತಿದ್ದಾರೆ. ಈ ಬದಲಾವಣೆ ಪೀಳಿಗೆಯ ನಡುವಿನ ಅಂತರವನ್ನು ಹೆಚ್ಚಿಸಿದೆ' ಎಂದು ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಹೇಮಲತಾ ಮಹಿಷಿ ಆತಂಕ ವ್ಯಕ್ತಪಡಿಸಿದರು. ಬದಲಾವಣೆಯೊಂದು ಮನುಷ್ಯ ಬದುಕಿನ ಘನತೆಯನ್ನು ಎತ್ತಿ ಹಿಡಿದರೆ ಅದನ್ನು ಮುಕ್ತವಾಗಿ ಸ್ವೀಕರಿಸಬೇಕು ಎಂದರು.

ಡಾ. ಗಂಗಾಂಬಿಕಾ ಪಾಟೀಲ ಗೋಷ್ಠಿಗೆ ಪ್ರತಿಕ್ರಿಯಿಸಿದರು. ಡಾ. ಗೀತಾ ವಸಂತ ವಂದಿಸಿದರು.

* ಕುಟುಂಬ ವ್ಯವಸ್ಥೆಗೆ ಹೊರತಾದ ಲಿವ್ ಇನ್ ರಿಲೇಶನ್ ಹಾಗೂ ತೃತೀಯ ಲಿಂಗಿಗಳ ಸಂಬಂಧದ ನೆಲೆಯಲ್ಲೂ ಚರ್ಚೆ ಆಗಬೇಕು.
–ಡಾ. ಕಲಾವತಿ ಬಳ್ಳಾರಿ, ಪ್ರಾಧ್ಯಾಪಕರು

* ಕಾರ್ನಾಡರ 'ಆಡಾಡ್ತ ಆಯುಷ್ಯ' ಆತ್ಮಕತೆಗೆ ಸಿಗುವ ಪ್ರತಿಕ್ರಿಯೆಯೇ ಬೇರೆ. ಶಶಿಕಲಾ ವೀರಯ್ಯಸ್ವಾಮಿ ಅವರ 'ಇದ್ದೇನಯ್ಯಾ ಇಲ್ಲದಂತೆ'ಗೆ ಹಾಗೂ ಪ್ರತಿಭಾ ನಂದಕುಮಾರ ಅವರ ಆತ್ಮಕತೆಗೆ ಸಿಗುವ ಪ್ರತಿಕ್ರಿಯೆಯೇ ಬೇರೆ
–ವಸುಂಧರಾ ಭೂಪತಿ, ಬರಹಗಾರ್ತಿ

* ಮನುಷ್ಯ ಮನುಷ್ಯನಾಗಿ ಘನತೆಯ ಬದುಕು ಬದುಕಲು ಅವಕಾಶ ಇರುವಂಥ ಬದಲಾವಣೆಯನ್ನು ಆಧುನಿಕತೆ ಎನ್ನಬೇಕು.
ಹೇಮಲತಾ ಮಹಿಷಿ, ವಕೀಲರು, ಬರಹಗಾರರು

* ಆಧುನಿಕತೆ ತಂದ ಬದಲಾವಣೆಯಿಂದ ಮರುಗಟ್ಟಿದ ಹೆಣ್ಣು ಶರೀರಗಳಲ್ಲಿ ಜೀವ ಸಂಚಾರವಾಗಿ ಅವು ತಮ್ಮ ನೋವು ಹೇಳಿಕೊಳ್ಳುತ್ತಿವೆ.
–ಎಚ್.ಎಲ್. ಪುಷ್ಪ, ಲೇಖಕರು

* ಮಹಿಳೆಯರು ಇಂತಿಷ್ಟು ಬಂಗಾರ ಇಟ್ಟುಕೊಳ್ಳಬಹುದು ಎಂದು ಹೇಳುತ್ತಿದ್ದಾರೆ. ಹಾಗಿದ್ದರೆ ಹೇಳಿ; ನಿಮ್ಮ ಗುಡಿ ಗುಂಡಾರಗಳಲ್ಲಿ ಇರುವ ಗಂಡು ದೇವರು ಎಷ್ಟು ಬಂಗಾರ ಹೇರಿಕೊಳ್ಳಬೇಕು? ಹೆಣ್ಣು ದೇವರುಗಳು ಎಷ್ಟು ಹೊರಬೇಕು?
–ಅನಸೂಯಾ ಕಾಂಬಳೆ, ಬರಹಗಾರ್ತಿ

* ಮಹಿಳೆಯರಷ್ಟೆ ಅಲ್ಲ ಮಹಿಳೆಯರು ರಚಿಸಿದ ಸಾಹಿತ್ಯವೂ ಅವಗಣನೆಗೆ, ಶೋಷಣೆಗೆ ಒಳಗಾಗುತ್ತಿದೆ.
ಡಾ. ಗಂಗಾಂಬಿಕಾ ಪಾಟೀಲ, ಚಿಂತಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.