ADVERTISEMENT

ಮಹಾದಾಯಿ: ಮುಂದುವರಿದ ಪ್ರತಿಭಟನೆ

ಗದಗ ಜಿಲ್ಲೆಯಲ್ಲಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ, ಹಲವೆಡೆ ರೈತರಿಂದ ರಸ್ತೆ ತಡೆ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2015, 19:30 IST
Last Updated 31 ಆಗಸ್ಟ್ 2015, 19:30 IST

ಹುಬ್ಬಳ್ಳಿ: ಮಹಾದಾಯಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಗದಗ, ಧಾರವಾಡ, ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ಸೋಮವಾರವೂ ರೈತರ ಪ್ರತಿಭಟನೆ ಮುಂದುವರಿದಿದೆ.

ಗದಗ ಜಿಲ್ಲೆಯ ಗದಗ– ಬೆಟಗೇರಿ, ರೋಣ, ಗಜೇಂದ್ರಗಡ, ಮುಳಗುಂದ, ಲಕ್ಷ್ಮೇಶ್ವರದಲ್ಲಿ ಬಂದ್ ಕರೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲದೇ ಬೆಳಗಾವಿ ಜಿಲ್ಲೆಯ ಸವದತ್ತಿ, ಮುನವಳ್ಳಿ, ಬಾಗಲಕೋಟೆ ಜಿಲ್ಲೆಯ ಹುನಗುಂದಗಳಲ್ಲೂ ಸಹ ಮಹಾದಾಯಿ ನದಿ ಜೋಡಣೆಗೆ ಆಗ್ರಹಿಸಿ ಬಂದ್ ನಡೆಸಲಾಯಿತು.

ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿಯಲ್ಲಿ ರಸ್ತೆ ತಡೆ ನಡೆಸಲಾಯಿತು. ನರಗುಂದದಲ್ಲಿ ರೈತರ ಹೋರಾಟ ಮುಂದುವರಿದರೂ ವ್ಯಾಪಾರ– ವಹಿವಾಟಿಗೆ ಯಾವುದೇ ತೊಂದರೆ ಆಗಲಿಲ್ಲ. ಮುಂಡರಗಿಯಲ್ಲಿ ಮಂಗಳವಾರ ಬಂದ್‌ ನಡೆಸಲು ವಿವಿಧ ಸಂಘಟನೆಗಳು ನಿರ್ಧರಿಸಲಾಗಿದ್ದು ಶಿರಹಟ್ಟಿಯಲ್ಲಿ ಸೋಮವಾರ ಬಂದ್ ಮಾಡಲಿಲ್ಲ.

ಗದಗ ಜಿಲ್ಲೆಯ ವಿವಿಧೆಡೆ ವಿವಿಧ ಸಂಘಟನೆಗಳು, ರೈತರು ಪಟ್ಟಣದಲ್ಲಿ ಮೆರವಣಿಗೆ ನಡೆಸಿ ರಸ್ತೆ ತಡೆ ನಡೆಸಿದರಲ್ಲದೇ ಮಹಾದಾಯಿ ನದಿ ಜೋಡಣೆಗೆ ಸಂಬಂಧಪಟ್ಟಂತೆ ವಿಳಂಬ ನೀತಿ ಅನುಸರಿಸುತ್ತಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ಟೈರ್‌ಗೆ ಬೆಂಕಿ ಪ್ರತಿಭಟನೆ ನಡೆಸಲಾಯಿತು. ಬಂದ್‌ನಿಂದಾಗಿ ಜನಸಂಚಾರ ವಿರಳವಾಗಿತ್ತು. ರೈತ ಸೇನೆಯ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ಮಾತನಾಡಿ, ಮಹಾದಾಯಿ ನದಿ ಹಾಗೂ ಕಳಸಾ-–ಬಂಡೂರಿ ನಾಲಾಗಳ ನೀರು ರಾಜ್ಯದ ಜನರ ಹಕ್ಕು. ಅದನ್ನು ಪಡೆಯುವ ವರೆಗೆ ಹೋರಾಟ ನಿರಂತರವಾಗಿ ನಡೆಯಲಿದೆ ಎಂದರು.

ಬಾಗಲಕೋಟೆ ಜಿಲ್ಲೆಯ ಹುನಗುಂದದಲ್ಲಿ ನಡೆದ ಬಂದ್ ಸಂಪೂರ್ಣ ಯಶಸ್ವಿಯಾಯಿತು. ಬಂದ್ ನಿಮಿತ್ತ ಪಟ್ಟಣದ ಬಹುತೇಕ ಅಂಗಡಿ ಮುಂಗಟ್ಟು, ಶಾಲಾ– ಕಾಲೇಜು ಮುಚ್ಚಿದ್ದವು. ಸರ್ಕಾರಿ ಕಚೇರಿಗಳು ಮತ್ತು ಬ್ಯಾಂಕ್‌ಗಳು ಜನರಿಲ್ಲದೇ ಬಿಕೋ ಎನ್ನುತ್ತಿದ್ದವು.

ಜೆಡಿಎಸ್ ಪಾದಯಾತ್ರೆ: ಕಳಸಾ–ಬಂಡೂರಿ ನಾಲಾ ಜೋಡಣೆ ಯೋಜನೆ ಜಾರಿ ಮತ್ತು ಬೆಳೆ ವಿಮೆ ಮೊತ್ತವನ್ನು ವಿತರಿಸಬೇಕು ಎಂದು ಆಗ್ರಹಿಸಿ ಜೆಡಿಎಸ್‌ ಮುಖಂಡರು ಮತ್ತು ಕಾರ್ಯಕರ್ತರು ಧಾರವಾಡ ಜಿಲ್ಲೆ ಕುಂದಗೋಳ ತಾಲ್ಲೂಕಿನ ತರ್ಲಘಟ್ಟ ಬಸ್ ನಿಲ್ದಾಣದಿಂದ ಕುಂದಗೋಳ ಪಟ್ಟಣದ ತಹಶೀಲ್ದಾರ್‌ ಕಚೇರಿ ವರೆಗೆ ಸೋಮವಾರ ಪಾದಯಾತ್ರೆ ನಡೆಸಿದರು. ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ, ಮಾಜಿ ಶಾಸಕ ಎಂ.ಎಸ್‌.ಅಕ್ಕಿ ಇದ್ದರು.

ಜೋಶಿ, ಶೆಟ್ಟರ್ ಮನೆ ಮುಂದೆ ಭಜನೆ: ರೈತರ ಹೋರಾಟಕ್ಕೆ ಬೆಂಬಲ ನೀಡುವಂತೆ ಒತ್ತಾಯಿಸಿ ಕಳಸಾ ಬಂಡೂರಿ ಸಮನ್ವಯ ಸಮಿತಿಯವರು ಸಂಸದ ಪ್ರಹ್ಲಾದ ಜೋಶಿ ಮತ್ತು ವಿಧಾನ ಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಮನೆ ಮುಂದೆ ಸೆಪ್ಟೆಂಬರ್‌ ಮೂರರಿಂದ ರಾತ್ರಿ ಭಜನೆ ಮಾಡಲು ನಿರ್ಧರಿಸಿದ್ದಾರೆ. ಸಮಿತಿಯ ಮುಖಂಡ ಕಾಡಯ್ಯ ಹಿರೇಮಠ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ‘ಸೆಪ್ಟೆಂಬರ್ ಒಂದರಿಂದ ಹುಬ್ಬಳ್ಳಿ ನಗರದಲ್ಲಿ ಹೋರಾಟ ತೀವ್ರಗೊಳಿಸಲು ನಿರ್ಧರಿಸಲಾಗಿದೆ. ಎಂದರು.

ಹುಬ್ಬಳ್ಳಿ–ವಿಜಯಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು. ಭಾನುವಾರ ಹತ್ಯೆಗೀಡಾದ ಡಾ. ಎಂ.ಎಂ. ಕಲಬುರ್ಗಿ ಅವರಿಗೆ ಪ್ರತಿಭಟನಾಕಾರರು ಶ್ರದ್ಧಾಂಜಲಿ ಸಲ್ಲಿಸಿದರು.

*
ಪ್ರಧಾನಿ ಮಧ್ಯಸ್ಥಿಕೆ ವಹಿಸಲಿ
ತುಮಕೂರು:
ಮಹದಾಯಿ ನದಿ ನೀರಿನ ವಿಚಾರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೇ ಮಧ್ಯಸ್ಥಿಕೆ ವಹಿಸಬೇಕು. ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ ಅಭಿಪ್ರಾಯ ಪಡೆದು ತೀರ್ಮಾನ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಇಲ್ಲಿ ಸೋಮವಾರ ಆಗ್ರಹಿಸಿದರು.

ರಾಜ್ಯ ಸರ್ಕಾರವು ಈವರೆಗೆ ಪ್ರಾಮಾಣಿಕ ಪ್ರಯತ್ನ ಮಾಡಿದೆ. ಮುಖ್ಯಮಂತ್ರಿಗಳೂ ಸರ್ವಪಕ್ಷಗಳ ನಿಯೋಗದಲ್ಲಿ ತೆರಳಿ ಪ್ರಧಾನಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಸಮಸ್ಯೆ ಕಡೆಗಣಿಸಿಲ್ಲ. ಈಗ ಪ್ರಧಾನಿ ಅವರೇ ಮಧ್ಯಸ್ಥಿಕೆ ವಹಿಸಿ ಬಿಕ್ಕಟ್ಟು ಪರಿಹರಿಸಬೇಕು ಎಂದು ಸುದ್ದಿಗಾರರಿಗೆ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT