ADVERTISEMENT

ರಥಯಾತ್ರೆ ಸ್ವರೂಪ: ಪ್ರಮುಖರ ಸಮಿತಿ ಸಭೆಯಲ್ಲಿ ಚರ್ಚೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2017, 19:30 IST
Last Updated 24 ಸೆಪ್ಟೆಂಬರ್ 2017, 19:30 IST

ಬೆಂಗಳೂರು: ನವೆಂಬರ್‌ 1ರಿಂದ ಆರಂಭವಾಗಲಿರುವ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ರಥಯಾತ್ರೆಯ ಸ್ವರೂಪ ಹಾಗೂ ಯಾತ್ರೆ ಯಶಸ್ವಿಗೊಳಿಸುವ ಕುರಿತು ಭಾನುವಾರ ಸಂಜೆ ನವದೆಹಲಿಯಲ್ಲಿ ನಡೆದ ಪಕ್ಷದ ‍ಪ್ರಮುಖರ ಸಮಿತಿ ಸಭೆಯಲ್ಲಿ ಚರ್ಚೆ ನಡೆಯಿತು.

‍ರಾಜ್ಯ ಚುನಾವಣಾ ಉಸ್ತುವಾರಿಯಾಗಿರುವ, ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಮನೆಯಲ್ಲಿ ನಡೆದ ಸಭೆಯಲ್ಲಿ ಸಹ ಉಸ್ತುವಾರಿ ಪೀಯೂಷ್ ಗೋಯಲ್‌, ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ಕೇಂದ್ರ ಸಚಿವ ಅನಂತಕುಮಾರ್‌ ಸೇರಿದಂತೆ ಪ್ರಮುಖರ ಸಮಿತಿಯ ಎಲ್ಲ ಸದಸ್ಯರು ಪಾಲ್ಗೊಂಡಿದ್ದರು. ಪೂರ್ವ ನಿಗದಿತ ಕಾರ್ಯಕ್ರಮ ಇದ್ದುದರಿಂದ ವಿಧಾನಪರಿಷತ್ತಿನ ವಿರೋಧ ಪಕ್ಷದ ಕೆ.ಎಸ್‌. ಈಶ್ವರಪ್ಪ ಸಭೆಯಲ್ಲಿ ಭಾಗಿಯಾಗಿರಲಿಲ್ಲ.

‘ರ‍ಥಯಾತ್ರೆ ಯಶಸ್ವಿಗೊಳಿಸುವ ಕಾರ್ಯತಂತ್ರದ ಬಗ್ಗೆ ಪ್ರಮುಖವಾಗಿ ಚರ್ಚೆ ನಡೆಯಿತು. ಪ್ರಮುಖರ ಸಮಿತಿಯ ಸದಸ್ಯರು ಅಕ್ಟೋಬರ್ ಎರಡನೇ ವಾರದಿಂದಲೇ ತಮ್ಮ ಎಲ್ಲ ವೈಯಕ್ತಿಕ ಚಟುವಟಿಕೆಗಳನ್ನು ಬದಿಗಿಟ್ಟು, ಯಾತ್ರೆ ಯಶಸ್ವಿಗೊಳಿಸಲು ಶ್ರಮಿಸಬೇಕು. ಈಗಾಗಲೇ ಜವಾಬ್ದಾರಿ ವಹಿಸಲಾಗಿರುವ ತಲಾ ಎರಡು ಜಿಲ್ಲೆಗಳಿಗೆ ಪ್ರತಿಯೊಬ್ಬ ಸದಸ್ಯರೂ ತೆರಳಿ, ಯಾತ್ರೆಗೆ ಪೂರ್ವ ಸಿದ್ಧತೆ ಕೈಗೊಳ್ಳಬೇಕು ಎಂದು ಜಾವಡೇಕರ್ ಸೂಚಿಸಿದರು’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT