ADVERTISEMENT

ರಾಘವೇಶ್ವರ ಪ್ರಕರಣ: ಒತ್ತಡಕ್ಕೆ ಮಣಿಯುವುದಿಲ್ಲ

ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2015, 19:54 IST
Last Updated 15 ಸೆಪ್ಟೆಂಬರ್ 2015, 19:54 IST

ಬೆಂಗಳೂರು: ಅತ್ಯಾಚಾರದ ಆರೋಪ ಎದುರಿಸುತ್ತಿರುವ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಇಲ್ಲಿ ಸ್ಪಷ್ಟಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಪ್ರಕರಣಗಳಲ್ಲಿ ಯಾರ ಒತ್ತಡಕ್ಕೂ ಮಣಿಯುವ ಪ್ರಶ್ನೆ ಇಲ್ಲ. ಸಿಐಡಿ ಅಧಿಕಾರಿಗಳು ತನಿಖೆ ನಡೆಸು ತ್ತಿದ್ದಾರೆ. ನಾವು ಅನಗತ್ಯವಾಗಿ ಮಧ್ಯಪ್ರ ವೇಶ ಮಾಡಲು ಆಗುವುದಿಲ್ಲ. ತನಿಖಾ ಧಿಕಾರಿಗಳು  ಶೀಘ್ರದಲ್ಲಿ ಆರೋಪಪಟ್ಟಿ ಸಲ್ಲಿಸಲಿದ್ದಾರೆ’ ಎಂದರು.

ಸ್ವಾಮೀಜಿ ಅವರನ್ನು ಇನ್ನೂ ಬಂಧಿಸಿಲ್ಲವಲ್ಲ ಎಂದು ಕೇಳಿದ ಪ್ರಶ್ನೆಗೆ, ‘ಕಾನೂನು ಪ್ರಕಾರ ಎಫ್‌ಐಆರ್‌ ದಾಖಲಾಗಿದೆ. ಅವರು ನಿರೀಕ್ಷಣಾ ಜಾಮೀನು ತೆಗೆದುಕೊಂಡಿದ್ದಾರೆ. ಪೊಲೀಸರು ಮೊನ್ನೆ ಅವರನ್ನು ಬಂಧಿಸಿ ಬಿಡುಗಡೆ ಮಾಡಿದ್ದಾರೆ. ಸ್ವಾಮೀಜಿ ಎರಡೂ ಪ್ರಕರಣಗಳಲ್ಲಿ ಜಾಮೀನು ಪಡೆದಿದ್ದಾರೆ. ನ್ಯಾಯಾಲಯ ಜಾಮೀನು ಕೊಟ್ಟಿರುವಾಗ ನಾವೇನೂ ಮಾಡು ವುದಕ್ಕೆ ಆಗುವುದಿಲ್ಲ’ ಎಂದರು.

ಚಂಪಾ ಅಸಮಾಧಾನ
ರಾಘವೇಶ್ವರ ಭಾರತಿ ಸ್ವಾಮೀಜಿ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣ ನಿರ್ವಹಿಸುವ ವಿಚಾರದಲ್ಲಿ ಸರ್ಕಾರದ ನಡೆ ಸರಿ ಕಾಣುತ್ತಿಲ್ಲ ಎಂದು ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು.

ಸಾಹಿತಿಗಳ ಜೊತೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಮಂಗಳವಾರ ಭೇಟಿ ಮಾಡಿದ ನಂತರ ಮಾತನಾಡಿದ ಚಂಪಾ, ‘ಸ್ವಾಮೀಜಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಮುಖ್ಯಮಂತ್ರಿಯವರನ್ನು ಒತ್ತಾಯಿಸಿದ್ದೇವೆ’ ಎಂದರು.

* ಹಿಂದುತ್ವನೂ ಇಲ್ಲ, ಯಾವ ತತ್ವನೂ ಇಲ್ಲ. ನೆಲದ ಕಾನೂನು ಏನು ಹೇಳುತ್ತದೆಯೋ ಅದರ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ.
-ಸಿದ್ದರಾಮಯ್ಯ, 
ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT