ADVERTISEMENT

ರಾಜ್ಯದ 4ಕಡೆ ಮಾತ್ರ ಎನ್‌ಇಇಟಿ

ಪರೀಕ್ಷಾ ಕೇಂದ್ರಗಳನ್ನು ಹೆಚ್ಚಿಸದ ಸಿಬಿಎಸ್‌ಇ

ವಿರೂಪಾಕ್ಷ ಹೊಕ್ರಾಣಿ
Published 19 ಫೆಬ್ರುವರಿ 2017, 19:30 IST
Last Updated 19 ಫೆಬ್ರುವರಿ 2017, 19:30 IST
ರಾಜ್ಯದ 4ಕಡೆ ಮಾತ್ರ ಎನ್‌ಇಇಟಿ
ರಾಜ್ಯದ 4ಕಡೆ ಮಾತ್ರ ಎನ್‌ಇಇಟಿ   

ಬೆಂಗಳೂರು: ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್‌ ಕೋರ್ಸ್‌ಗಳ ಪ್ರವೇಶಕ್ಕೆ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಗೆ (ಎನ್‌ಇಇಟಿ) ರಾಜ್ಯದ ನಾಲ್ಕು ಸ್ಥಳಗಳಲ್ಲಿ ಮಾತ್ರ ಪರೀಕ್ಷಾ ಕೇಂದ್ರಗಳನ್ನು ಗುರುತಿಸಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುವ ಸಾಧ್ಯತೆ ಇದೆ.

ರಾಜ್ಯದ ವಿವಿಧ ಜಿಲ್ಲೆಗಳ ಸುಮಾರು 75 ಸಾವಿರ ವಿದ್ಯಾರ್ಥಿಗಳು ಎನ್‌ಇಇಟಿ ಬರೆಯುವ ಸಂಭವವಿದ್ದು, ಪರೀಕ್ಷೆಗಾಗಿ ದೂರದ ಊರುಗಳಿಗೆ ಪ್ರಯಾಣ ಬೆಳೆಸುವ ಅನಿವಾರ್ಯತೆ ಎದುರಾಗಿದೆ.

ಕಳೆದ ವರ್ಷ ಸುಮಾರು 1.15ಲಕ್ಷ ವಿದ್ಯಾರ್ಥಿಗಳು ಸಿಇಟಿ ಬರೆದಿದ್ದರು. ಅಲ್ಲದೆ, ಗಣನೀಯ ಸಂಖ್ಯೆಯಲ್ಲಿ ಎನ್‌ಇಇಟಿ ಕೂಡಾ ತೆಗೆದು ಕೊಂಡಿದ್ದರು.  
ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) 2017–18ನೇ ಸಾಲಿನ ಎನ್‌ಇಇಟಿ ಪರೀಕ್ಷೆಯ ಅಧಿಸೂಚನೆ ಹೊರಡಿಸಿದ್ದು, ಬೆಂಗಳೂರು, ಬೆಳಗಾವಿ, ಕಲಬುರ್ಗಿ ಮತ್ತು ಮಂಗಳೂರಿನಲ್ಲಿ ಪರೀಕ್ಷೆಗಳು ನಡೆಯುತ್ತವೆ ಎಂದು ಪ್ರಕಟಿಸಿದೆ.

‘ಆಯಾ ಜಿಲ್ಲಾ ಕೇಂದ್ರಗಳಲ್ಲೇ ಪರೀಕ್ಷೆಗಳು ನಡೆದರೆ ವಿದ್ಯಾರ್ಥಿಗಳಿಗೆ ಅನುಕೂಲ ಆಗುತ್ತದೆ. ಆದರೆ, ಇಡೀ ರಾಜ್ಯದಲ್ಲಿ ನಾಲ್ಕು ಕಡೆ ಮಾತ್ರ ಪರೀಕ್ಷೆ ನಡೆಯುವುದರಿಂದ ವಿದ್ಯಾರ್ಥಿಗಳು ನೂರಾರು ಕಿ.ಮೀ ಪ್ರಯಾಣಿಸಬೇಕು. ಇದರಿಂದ ಪರೀಕ್ಷೆ ದಿನ ಗೊಂದಲ ಆಗಬಹುದು ಎಂಬ ಆತಂಕ ವ್ಯಕ್ತವಾಗಿದೆ. ಅಲ್ಲದೆ ಮಕ್ಕಳಿಗೆ ಇದು ಆರ್ಥಿಕವಾಗಿಯೂ ಹೊರೆ ಆಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. 

ಎನ್‌ಇಇಟಿ ಪರೀಕ್ಷೆ ಬರೆಯುವುದಕ್ಕಾಗಿ ಈಗಾಗಲೇ ಸಾವಿರಾರು ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಅರ್ಜಿ ಸಲ್ಲಿಸಲು ಮಾರ್ಚ್‌ 1ರವರೆಗೂ ಅವಕಾಶ ಇದೆ. ಪರೀಕ್ಷೆ ಬರೆಯಬೇಕಾದರೆ ಈ ನಾಲ್ಕು ಕೇಂದ್ರಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕಾಗಿದೆ.

ಬದಲಾಗಲಿಲ್ಲ: 2016-17ನೇ ಸಾಲಿನಲ್ಲಿ ಮೊದಲ ಬಾರಿಗೆ ಎನ್ಇಇಟಿ ನಡೆದಾಗಲೂ 4 ಕೇಂದ್ರಗಳಷ್ಟೇ ಇದ್ದವು. ಇವುಗಳ ಸಂಖ್ಯೆ ಹೆಚ್ಚಿಸಬೇಕೆಂಬ ಒತ್ತಡ ಆಗಲೇ ಕೇಳಿಬಂದಿತ್ತು. ಆದರೂ ಸಿಬಿಎಸ್‌ಸಿ ಕಿವಿಗೊಟ್ಟಿಲ್ಲ ಎಂಬ ದೂರುಗಳೂ ಕೇಳಿಬಂದಿವೆ.

52 ಕಡೆ ಸಿಇಟಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಈ ಬಾರಿ ಎಂಜಿನಿಯರಿಂಗ್‌, ಆರ್ಕಿಟೆಕ್ಚರ್, ಬಿ.ಎಸ್‌ಸಿ (ಕೃಷಿ), ಪಶು ವೈದ್ಯಕೀಯ ಮತ್ತು ಪಶು ಸಂಗೋಪನೆ (ಬಿವಿಎಸ್‌ಸಿ ಮತ್ತು ಎಎಚ್‌), ಬಿ ಫಾರ್ಮಾ ಹಾಗೂ ಡಿ ಫಾರ್ಮಾ  ಕೋರ್ಸ್‌ಗಳ ಪ್ರವೇಶಕ್ಕೆ 52 ಕಡೆ ಸಿಇಟಿ ಕೇಂದ್ರಗಳನ್ನು ಗುರುತಿಸಿದೆ.

ಎಂಜಿನಿಯರಿಂಗ್‌ ಕೋರ್ಸ್‌ ಪ್ರವೇಶಕ್ಕಾಗಿ ನಡೆಯುವ ಕಾಮೆಡ್‌–ಕೆ ಪರೀಕ್ಷೆಯೂ 26 ಕಡೆಗಳಲ್ಲಿ ನಡೆಯಲಿದೆ. ಸಿಬಿಎಸ್‌ಇ ಈ ಪರೀಕ್ಷೆಗಳನ್ನು ನೋಡಿಯಾದರೂ ಹೆಚ್ಚಿನ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಬೇಕು ಎಂದು  ವಿದ್ಯಾರ್ಥಿಗಳು, ಪೋಷಕರು ಆಗ್ರಹಿಸಿದ್ದಾರೆ.

ರಾಜ್ಯ ಸರ್ಕಾರಕ್ಕೂ ಮಾಹಿತಿ ಇಲ್ಲ
‘ಪರೀಕ್ಷಾ ಕೇಂದ್ರಗಳನ್ನು ಗುರುತಿಸುವ ಸಂಬಂಧ ರಾಜ್ಯದೊಂದಿಗೆ ಸಿಬಿಎಸ್‌ಇ ಅಧಿಕಾರಿಗಳು ಚರ್ಚಿಸಿಲ್ಲ. ಅವರೇ ಕೇಂದ್ರಗಳನ್ನು ಗುರುತಿಸಿದ್ದಾರೆ. ಈ ಬಗ್ಗೆ ನಮಗೆ ಯಾವುದೇ ಮಾಹಿತಿಯೂ ಇಲ್ಲ’ ಎಂದು ವೈದ್ಯಕೀಯ ಶಿಕ್ಷಣ ನಿರ್ದೇಶಕ ಡಾ.ಎಸ್‌. ಸಚ್ಚಿದಾನಂದ ಹೇಳಿದರು.

ಯಾವ ರಾಜ್ಯದಲ್ಲಿ ಎಷ್ಟು ಕೇಂದ್ರ?
ದೆಹಲಿಯಲ್ಲಿ 5, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಲ್ಲಿ ತಲಾ 6, ತಮಿಳುನಾಡು ಮತ್ತು ಮಧ್ಯಪ್ರದೇಶದಲ್ಲಿ ತಲಾ 5, ಗುಜರಾತ್‌ ಮತ್ತು ರಾಜಸ್ತಾನದಲ್ಲಿ ತಲಾ 4 ಹಾಗೂ ಕೇರಳದಲ್ಲಿ 3 ಕಡೆ ಎನ್‌ಇಇಟಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT