ADVERTISEMENT

ರೂ 1.13 ಕೋಟಿಯ ಡಾಲರ್‌ ವರ್ಗಾವಣೆ

ಇ ಮೇಲ್‌ ಖಾತೆಗೆ ಕನ್ನ ಹಾಕಿದ ದುಷ್ಕರ್ಮಿಗಳು

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2014, 19:55 IST
Last Updated 24 ನವೆಂಬರ್ 2014, 19:55 IST

ಉಡುಪಿ: ಕೆನಡಾದಲ್ಲಿರುವ ಲೂವಿಸ್‌ ಡಿಸೋಜ ಎಂಬು­­ವವರ ಇ ಮೇಲ್‌ ಖಾತೆಗೆ ಕನ್ನ ಹಾಕಿದ (ಹ್ಯಾಕ್‌) ದುಷ್ಕರ್ಮಿಗಳು ಅವರ ಸಿಂಡಿಕೇಟ್ ಬ್ಯಾಂಕ್‌ನ ಮಣಿಪಾಲ ಶಾಖೆಯ ಅನಿವಾಸಿ ಭಾರತೀ­ಯರ ವಿದೇಶಿ ಹಣ (ಎಫ್‌ಸಿಎನ್‌ಆರ್‌) ಖಾತೆಯಿಂದ ಅಕ್ರಮವಾಗಿ ಸುಮಾರು ರೂ1,13ಕೋಟಿ ಮೌಲ್ಯದ ಡಾಲರ್‌  ವರ್ಗಾವಣೆ ಮಾಡಿಕೊಂಡಿದ್ದಾರೆ.

ಎರಡು ಬಾರಿ ಈ ರೀತಿ ವಂಚನೆ ಮಾಡಿರುವ ದುಷ್ಕರ್ಮಿಗಳು ಮೂರನೇ ಬಾರಿ ಅಂತಹುದೇ ಪ್ರಯತ್ನ ಮಾಡಿದಾಗ ಅನುಮಾನಗೊಂಡ ಬ್ಯಾಂಕ್‌ ಅಧಿಕಾರಿ ಲೂವಿಸ್‌ ಅವರನ್ನು ಸಂಪರ್ಕಿಸಿದಾಗ ವಂಚನೆ­ಯಾಗಿರುವುದು ಗೊತ್ತಾಗಿದೆ.

‘ಲೂವಿಸ್‌ ಅವರ ಖಾತೆಗೆ ಉಡುಪಿ ಜಿಲ್ಲೆಯ ಕಟಪಾಡಿಯ ಕೆನರಾ ಮತ್ತು ಐಸಿಐಸಿಐ ಬ್ಯಾಂಕ್‌ನಿಂದ 2,23,830 ಡಾಲರ್‌ ಹಣ ವರ್ಗಾವಣೆಯಾಗಿ ಬಂದಿತ್ತು. ಅವರ ಇ ಮೇಲ್‌ನಿಂದ 2014, ಜನವರಿ 15ರಂದು ಹಣ ವರ್ಗಾವಣೆಗೆ ಮನವಿ ಬಂತು. ಅದರಂತೆ 1.15 ಲಕ್ಷ ಡಾಲರ್‌ ದುಬೈ ನ್ಯಾಷನಲ್‌ ಬ್ಯಾಂಕ್‌ಗೆ ವರ್ಗಾಯಿಸಲಾಯಿತು. 2014 ಅಕ್ಟೋಬರ್ 27ರಂದು ಇ ಮೇಲ್‌ ಮೂಲಕ ಬಂದ ಮನವಿಯಂತೆ ಅಬುದಾಬಿಯ ಇಸ್ಲಾಮಿಕ್‌ ಬ್ಯಾಂಕ್‌ ಖಾತೆ ಸಂಖ್ಯೆಗೆ 70 ಸಾವಿರ ಡಾಲರ್‌ ವರ್ಗಾವಣೆ ಮಾಡಲಾಗಿದೆ’ ಎಂದು ಮಣಿಪಾಲದಲ್ಲಿರುವ ಸಿಂಡಿ­ಕೇಟ್‌ ಬ್ಯಾಂಕ್‌ನ ಮುಖ್ಯ ಕಚೇರಿಯ ಸಹಾಯಕ ಮಹಾ ಪ್ರಬಂಧಕ ರಮೇಶ್‌ ನಾಯಕ್‌ ಮಣಿಪಾಲ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

‘ಕಾರ್ಪೋರೇಷನ್‌ ಬ್ಯಾಂಕ್‌ನ ಉಡುಪಿಯ ಕುರ್ಕಾಲು ಶಾಖೆಯಿಂದ ನವೆಂಬರ್‌ 14ರಂದು 61 ಸಾವಿರ ಡಾಲರ್‌ ಮತ್ತು 91 ಸಾವಿರ ಕೆನಡಾ ಡಾಲರ್‌ ಲೂವಿಸ್‌ ಅವರ ಖಾತೆಗೆ ವರ್ಗಾ­ವಣೆ­ಯಾಗಿ ಬಂದಿದೆ. ಈ ಹಣವನ್ನು ಸಹ ಹಾಂಕಾಂಗ್‌ನ ಬ್ಯಾಂಕ್‌ ಆಫ್‌ ಚೀನಾಗೆ ವರ್ಗಾವಣೆ ಮಾಡುವಂತೆ ಇ ಮೇಲ್‌ ಮೂಲಕ ಸೂಚನೆ ಬಂದಾಗ ಅನುಮಾನ ಬಂತು. ಲೂವಿಸ್‌ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಕೇಳಿದಾಗ ಇ ಮೇಲ್‌ ಕಳುಹಿಸಿಲ್ಲ ಎಂದರು. ವಂಚನೆ ಆಗಿರುವುದು ಗೊತ್ತಾಯಿತು’ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ವಂಚಕರು ಲೂವಿಸ್‌ ಅವರ ಇ ಮೇಲ್‌ ಖಾತೆಗೆ ಕನ್ನ ಹಾಕಿ ಅವರ ಸಹಿಯನ್ನೂ ಫೋರ್ಜರಿ ಮಾಡಿ­ದ್ದಾರೆ. ಸಹಿಯನ್ನು ಪರಿಶೀಲನೆ ಮಾಡಿದಾಗ ಮೇಲ್ನೋಟಕ್ಕೆ ಅದು ಅಸಲಿಯಂತೆ ಕಾಣಿಸುತ್ತದೆ. ಈ ಬಗ್ಗೆ ತಜ್ಞರಿಂದ ವರದಿ ಪಡೆಯಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಯಾವುದೇ ವ್ಯಕ್ತಿಯ ಖಾತೆಯಿಂದ ಹಣ ವರ್ಗಾವಣೆಯಾದರೆ ಆತನ ಮೊಬೈಲ್‌ಗೆ ಅಥವಾ ಇ ಮೇಲ್‌ಗೆ ಬ್ಯಾಂಕ್‌ನಿಂದ ಸಂದೇಶ ರವಾನೆ­ಯಾಗು­ತ್ತದೆ. ಜನವರಿ ತಿಂಗಳಲ್ಲಿ ಮೊದಲ ಬಾರಿ ಅಕ್ರಮವಾಗಿ ಹಣ ವರ್ಗಾವಣೆ ಆಗಿದೆ. ಆದರೂ ಖಾತೆದಾರರು ದೂರು ನೀಡಿಲ್ಲ. ಅವರಿಗೆ ಮೊಬೈಲ್‌ ಸಂದೇಶ ಹೋಗಿತ್ತೋ, ಇಲ್ಲವೋ ಎಂಬುದನ್ನು ಖಚಿತಪಡಿ­ಸಿಕೊಳ್ಳಬೇಕಿದೆ. ಇಂತಹ ಹಲವು ಪ್ರಶ್ನೆಗಳಿಗೆ ಲೂವಿಸ್‌ ಅವರಿಂದ ಉತ್ತರ ಪಡೆದುಕೊಳ್ಳಬೇಕಿದೆ. ಕೆನಡಾದಿಂದ ಇಲ್ಲಿಗೆ ಬಂದ ನಂತರ ವಿಚಾರಣೆಗೆ ಒಳಪಡಿಸಿ ಅಗತ್ಯ ಮಾಹಿತಿ ಪಡೆಯಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.