ADVERTISEMENT

ಲೋಕಾಯುಕ್ತಕ್ಕೆ ನಾಯಕ ಇಲ್ಲ

​ಪ್ರಜಾವಾಣಿ ವಾರ್ತೆ
Published 3 ಮೇ 2016, 19:30 IST
Last Updated 3 ಮೇ 2016, 19:30 IST
ಲೋಕಾಯುಕ್ತಕ್ಕೆ ನಾಯಕ ಇಲ್ಲ
ಲೋಕಾಯುಕ್ತಕ್ಕೆ ನಾಯಕ ಇಲ್ಲ   

ಬೆಂಗಳೂರು: ನ್ಯಾಯಮೂರ್ತಿ ಎಸ್.ಆರ್. ನಾಯಕ ಅವರನ್ನು ಲೋಕಾಯುಕ್ತ ಹುದ್ದೆಗೆ ನೇಮಿಸಬೇಕು ಎಂದು ಸರ್ಕಾರ ಮಾಡಿದ್ದ ಶಿಫಾರಸು ಒಪ್ಪಲು ರಾಜ್ಯಪಾಲ ವಜುಭಾಯಿ ವಾಲಾ ಅವರು ನಿರಾಕರಿಸಿದ್ದಾರೆ.

ಲೋಕಾಯುಕ್ತರ ಆಯ್ಕೆಗೆ  ಜನವರಿಯಲ್ಲಿ ನಡೆದಿದ್ದ ಸಭೆಯಲ್ಲಿ ವ್ಯಕ್ತವಾದ ಬಹುಮತ ಕಡೆಗಣಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಯಕ ಅವರ ಹೆಸರನ್ನು ಫೆಬ್ರುವರಿಯಲ್ಲಿ ಶಿಫಾರಸು ಮಾಡಿದ್ದರು.

‘ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಸ್.ಕೆ. ಮುಖರ್ಜಿ ಅವರು ನಾಯಕ ಹೆಸರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ನಾಯಕ ಅವರನ್ನೇ ಈ ಸ್ಥಾನಕ್ಕೆ ನೇಮಿಸಬೇಕು ಎಂಬುದಕ್ಕೆ ಸರ್ಕಾರ ನೀಡಿರುವ ಸಮರ್ಥನೆಗಳು ತಮಗೆ ತೃಪ್ತಿ ತಂದಿಲ್ಲ’ ಎಂದು ರಾಜ್ಯಪಾಲರು ಹೇಳಿದ್ದಾರೆ ಎನ್ನಲಾಗಿದೆ.

ಲೋಕಾಯುಕ್ತ, ಉಪ ಲೋಕಾಯುಕ್ತ ನೇಮಕ ಪ್ರಕ್ರಿಯೆಯಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ನಿರ್ದೇಶನಗಳನ್ನು ನಾಯಕ ಅವರ ಹೆಸರು ಶಿಫಾರಸು ಮಾಡುವಾಗ ಪಾಲಿಸಲಾಗಿದೆಯೇ ಎಂಬ ಪ್ರಶ್ನೆಯನ್ನೂ ರಾಜ್ಯಪಾಲರು ಸರ್ಕಾರದ ಮುಂದಿಟ್ಟಿದ್ದಾರೆ ಎಂದು ಗೊತ್ತಾಗಿದೆ.

ಭಾಸ್ಕರ ರಾವ್‌ ರಾಜೀನಾಮೆ ನಂತರ: ತಮ್ಮ ಪುತ್ರ ಅಶ್ವಿನ್ ರಾವ್ ಅವರು ಲೋಕಾಯುಕ್ತ ಕಚೇರಿಗೆ ಅಧಿಕಾರಿಗಳನ್ನು ಕರೆಸಿ ಅವರಿಂದ ಲಂಚಕ್ಕೆ ಬೇಡಿಕೆ ಇಡುತ್ತಿದ್ದ ಪ್ರಕರಣ ಬಹಿರಂಗವಾದ ನಂತರ ನ್ಯಾಯಮೂರ್ತಿ ಭಾಸ್ಕರ ರಾವ್ ಅವರು ಲೋಕಾಯುಕ್ತ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ಸ್ಥಾನಕ್ಕೆ ಯಾರನ್ನು ನೇಮಿಸಬೇಕು ಎಂಬ ಬಗ್ಗೆ ಚರ್ಚಿಸಲು ಲೋಕಾಯುಕ್ತ ಕಾನೂನಿಗೆ ಅನುಸಾರವಾಗಿ ಮುಖ್ಯಮಂತ್ರಿ ನೇತೃತ್ವದಲ್ಲಿ ಜನವರಿಯಲ್ಲಿ ಸಭೆ ನಡೆದಿತ್ತು.

ಸಭೆಯಲ್ಲಿ ಪಾಲ್ಗೊಂಡಿದ್ದ ಮುಖ್ಯ ನ್ಯಾಯಮೂರ್ತಿ ಮುಖರ್ಜಿ, ವಿರೋಧ ಪಕ್ಷದ ನಾಯಕರಾದ ಜಗದೀಶ ಶೆಟ್ಟರ್ ಮತ್ತು ಕೆ.ಎಸ್. ಈಶ್ವರಪ್ಪ, ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅವರು ನ್ಯಾಯಮೂರ್ತಿ ನಾಯಕ ಹೆಸರಿಗೆ ವಿರೋಧ ವ್ಯಕ್ತಪಡಿಸಿದ್ದರು. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಅವರನ್ನು ಲೋಕಾಯುಕ್ತರನ್ನಾಗಿ ನೇಮಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಆದರೆ, ವಿಧಾನಸಭೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಹಾಗೂ ಸಿದ್ದರಾಮಯ್ಯ ಅವರು ನ್ಯಾಯಮೂರ್ತಿ ನಾಯಕ ಪರ ಇದ್ದರು. ನಾಯಕ ಅವರು ಸಿದ್ದರಾಮಯ್ಯನವರ ಕಾಲೇಜು ಸಹಪಾಠಿಯೂ ಹೌದು. ಆದರೆ ‘ನಾಯಕ ಕನ್ನಡಿಗರು ಎಂಬ ಕಾರಣಕ್ಕಾಗಿ ಹೆಸರು ಶಿಫಾರಸು ಮಾಡಲಾಗಿದೆ’ ಎಂದು ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದರು.

ನಾಯಕನಿಲ್ಲದ ಲೋಕಾಯುಕ್ತ: ಭಾಸ್ಕರ ರಾವ್ ಅವರು ರಾಜೀನಾಮೆ ನೀಡಿದ್ದು ಡಿ.8ರಂದು. ಅಂದಿನಿಂದ ಲೋಕಾ ಯುಕ್ತ ಸ್ಥಾನ ಖಾಲಿ ಇದೆ. ಎರಡನೆಯ ಉಪ ಲೋಕಾಯುಕ್ತ ನ್ಯಾಯಮೂರ್ತಿ ಸುಭಾಷ ಬಿ. ಅಡಿ ವಿರುದ್ಧ ಪದಚ್ಯುತಿ ಪ್ರಕ್ರಿಯೆ ಚಾಲ್ತಿಯಲ್ಲಿರುವ ಕಾರಣ, ಅವರು ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ. ಈಗ ಒಂದನೆಯ ಉಪ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಆನಂದ ಮಾತ್ರ ದೂರುಗಳ ವಿಚಾರಣೆ ನಡೆಸುತ್ತಿದ್ದಾರೆ.

ಅವರ ಮೇಲಿನ ಆರೋಪಗಳೇನು?
ನ್ಯಾಯಮೂರ್ತಿ ನಾಯಕ ಅವರು ನಿಯಮಗಳನ್ನು ಉಲ್ಲಂಘಿಸಿ ಬೆಂಗಳೂರಿನಲ್ಲಿ ನಿವೇಶನ ಖರೀದಿಸಿದ್ದಾರೆ ಎಂದು ಜನಾಧಿಕಾರ ಸಂಘರ್ಷ ಪರಿಷತ್ ರಾಜ್ಯಪಾಲರಿಗೆ ದೂರು ಸಲ್ಲಿಸಿತ್ತು. ಅಲ್ಲದೆ, ವಿರೋಧ ಪಕ್ಷ ಬಿಜೆಪಿ ಕೂಡ ಅವರ ನೇಮಕವನ್ನು ತೀವ್ರವಾಗಿ ವಿರೋಧಿಸಿತ್ತು.

ನ್ಯಾಯಮೂರ್ತಿ ನಾಯಕ ಅವರು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿದ್ದವರು. ಈ ಹುದ್ದೆಯಲ್ಲಿ ಇದ್ದವರು ನಿವೃತ್ತಿ ನಂತರ ಸರ್ಕಾರಿ ನೇಮಕಕ್ಕೆ ಅರ್ಹರಲ್ಲ ಎಂಬ ಕಾನೂನು ಇದೆ.  ಅವರನ್ನು ಲೋಕಾಯುಕ್ತ ಹುದ್ದೆಗೆ ಪರಿಗಣಿಸುವುದು ಸೂಕ್ತವೇ ಎಂಬ ಪ್ರಶ್ನೆ ಎದುರಾಗಿತ್ತು.

ರಾಜ್ಯಪಾಲರ ಅಧಿಕಾರ ಅಸ್ಪಷ್ಟ
ಬೆಂಗಳೂರು:
ಲೋಕಾಯುಕ್ತ ನೇಮಕ ಪ್ರಕ್ರಿಯೆಯಲ್ಲಿ, ಮುಖ್ಯಮಂತ್ರಿಯವರು ಮಾಡಿದ ಶಿಫಾರಸನ್ನು ರಾಜ್ಯಪಾಲರು ತಿರಸ್ಕರಿಸಬಹುದೇ ಎಂಬ ಬಗ್ಗೆ ಕರ್ನಾಟಕ ಲೋಕಾಯುಕ್ತ ಕಾಯ್ದೆ ಅಥವಾ ನ್ಯಾಯಮೂರ್ತಿ ಚಂದ್ರಶೇಖರಯ್ಯ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿನಲ್ಲಿ ಉಲ್ಲೇಖವಿಲ್ಲ.

ಮುಖ್ಯಮಂತ್ರಿಯವರು ಕಳುಹಿಸಿದ ಶಿಫಾರಸನ್ನು ರಾಜ್ಯಪಾಲರು ತಿರಸ್ಕರಿಸುವಂತಿಲ್ಲ, ವಿಳಂಬ ತಂತ್ರವಾಗಿ ಪದೇಪದೇ ಸ್ಪಷ್ಟನೆ ಕೇಳಬಹುದು ಎಂಬ ಅಭಿಪ್ರಾಯ ಕಾನೂನು ತಜ್ಞರಲ್ಲಿದೆ. ಹಾಗೆಯೇ, ‘ನೇಮಕ ಮಾಡುವ ಅಧಿಕಾರ ಇರುವ ರಾಜ್ಯಪಾಲರಿಗೆ, ಹೆಸರು ತಿರಸ್ಕರಿಸುವ ಅಧಿಕಾರವೂ ಇರುತ್ತದೆ’ ಎಂಬ ಅಭಿಪ್ರಾಯವೂ ತಜ್ಞರ ಇನ್ನೊಂದು ವರ್ಗದಲ್ಲಿದೆ.

ADVERTISEMENT

ನ್ಯಾಯಮೂರ್ತಿ ಎಸ್.ಆರ್. ಬನ್ನೂರಮಠ ಅವರ ಹೆಸರನ್ನು ಲೋಕಾಯುಕ್ತ ಸ್ಥಾನಕ್ಕೆ ಬಿಜೆಪಿ ಸರ್ಕಾರ ಸೂಚಿಸಿದಾಗ ಅಂದಿನ ರಾಜ್ಯಪಾಲ ಎಚ್.ಆರ್. ಭಾರದ್ವಾಜ್‌ ಅದಕ್ಕೆ ಸಮ್ಮತಿ ನೀಡಿರಲಿಲ್ಲ. ಆದರೆ, ತಿರಸ್ಕರಿಸಿಯೂ ಇರಲಿಲ್ಲ.

ಕೊನೆಯಲ್ಲಿ, ನ್ಯಾಯಮೂರ್ತಿ ಬನ್ನೂರಮಠ ಅವರೇ ‘ನಾನು ಈ ಹುದ್ದೆಯ ಆಕಾಂಕ್ಷಿ ಅಲ್ಲ’ ಎಂದು ಹೇಳಿದರು. ಇದಾದ ನಂತರ, ನ್ಯಾಯಮೂರ್ತಿ ಭಾಸ್ಕರ ರಾವ್ ಅವರ ಹೆಸರನ್ನು ಬಿಜೆಪಿ ಸರ್ಕಾರ ಲೋಕಾಯುಕ್ತ ಹುದ್ದೆಗೆ ಶಿಫಾರಸು ಮಾಡಿತ್ತು.

* ನಾಯಕ ನೇಮಕ ಶಿಫಾರಸಿನ ಕಡತವನ್ನು ರಾಜ್ಯಪಾಲರು ತಿರಸ್ಕರಿಸುವ ಕುರಿತು ಸರಿಯಾದ ಮಾಹಿತಿ ಇಲ್ಲ. ಹಾಗಾಗಿ ಈಗ ಪ್ರತಿಕ್ರಿಯಿಸಲಾರೆ
-ಮುಖ್ಯಮಂತ್ರಿ ಸಿದ್ದರಾಮಯ್ಯ

ಲೋಕಾಯುಕ್ತ ಹುದ್ದೆಗೆ ನ್ಯಾಯಮೂರ್ತಿ ನಾಯಕ ಹೆಸರನ್ನು ರಾಜ್ಯಪಾಲರು ತಿರಸ್ಕರಿಸಿರುವ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚಿಸಿ, ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು.
-ಡಾ.ಜಿ. ಪರಮೇಶ್ವರ್, 
ಗೃಹ ಸಚಿವ

* ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಅವರನ್ನೇ ನೇಮಿಸಬೇಕು ಎಂದು ಈಗಲೂ ಆಗ್ರಹಿಸುತ್ತೇವೆ. ಸಮಿತಿಯು ಒಕ್ಕೊರಲ ನಿರ್ಣಯ ಕೈಗೊಂಡರೆ ಸೇನ್‌ ನೇಮಕ ಕಷ್ಟವಲ್ಲ.
-ಜಗದೀಶ ಶೆಟ್ಟರ್,
ವಿರೋಧ ಪಕ್ಷದ ನಾಯಕ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.