ADVERTISEMENT

ವಸತಿ ಯೋಜನೆ: ನೀರಾವರಿ ಭೂಮಿಗೆ ಕುತ್ತು

​ಪ್ರಜಾವಾಣಿ ವಾರ್ತೆ
Published 30 ಜನವರಿ 2015, 20:32 IST
Last Updated 30 ಜನವರಿ 2015, 20:32 IST

ಶಿವಮೊಗ್ಗ: ವಸತಿ ಬಡಾವಣೆಗಳಿಗಾಗಿ ನೀರಾವರಿ ಪ್ರದೇಶ ಭೂ ಪರಿವರ್ತನೆಗೆ ಒಳಗಾ­ಗುತ್ತಿದ್ದು, 10 ವರ್ಷಗಳಲ್ಲಿ ಭದ್ರಾ ‘ಕಾಡಾ’ (ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ) ವ್ಯಾಪ್ತಿಯ 70 ಸಾವಿರ ಎಕರೆ ಪ್ರದೇಶ ನಿವೇಶನಗಳಾಗಿ ಬದ­ಲಾಗಿದೆ.

ಮಳೆಯಾಶ್ರಿತ ಬೇಸಾಯಕ್ಕೆ ತಿಲಾಂಜಲಿ ನೀಡುವ ಉದ್ದೇಶದಿಂದ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ಭದ್ರಾ, ತುಂಗಾ ಸೇರಿದಂತೆ ಹಲವು ಅಣೆಕಟ್ಟೆ ನಿರ್ಮಿಸಲಾಗಿದೆ. ಚಿಕ್ಕಮಗಳೂರು, ಶಿವಮೊಗ್ಗ, ದಾವಣ­ಗೆರೆ ಜಿಲ್ಲೆಗಳ 1,05,570 ಹೆಕ್ಟೇರ್‌ ಪ್ರದೇಶಕ್ಕೆ ಭದ್ರಾ ಜಲಾಶಯ ನೀರು­ಣಿಸುತ್ತಿದೆ.

ತುಂಗಾ ಹಾಗೂ ತುಂಗಾ ಮೇಲ್ದಂಡೆ ವ್ಯಾಪ್ತಿ ಯಲ್ಲಿ ಶಿವಮೊಗ್ಗ, ದಾವಣಗೆರೆ, ಹಾವೇರಿ ಜಿಲ್ಲೆ ವ್ಯಾಪ್ತಿಯ 89,195 ಹೆಕ್ಟೇರ್‌ ಪ್ರದೇಶ ನೀರಾವರಿಗೆ ಒಳ ಪಟ್ಟಿದೆ. ಅಲ್ಲದೇ, ಭದ್ರಾ ಕಾಡಾ ವ್ಯಾಪ್ತಿಯ ಗೋಂದಿ, ಅಂಬ್ಲಿಗೊಳ್ಳ, ಅಂಜನಾಪುರ, ಶರಾವತಿ, ಜಂಬದಹಳ್ಳ, ವಾಣಿವಿಲಾಸ, ಮದಗಮಾಸೂರು, ನಾರಾಯಣಪುರ, ಸಾಸಲವಾಡ, ಬಸಾಪುರ ಸೇರಿದಂತೆ ಹಲವು ಸಣ್ಣಪುಟ್ಟ ಅಣೆಕಟ್ಟೆಗಳ ಮೂಲಕ ಹಲವು ಜಿಲ್ಲೆಗಳ 75 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರು ಒದಗಿಸಲಾಗುತ್ತಿದೆ.

ನೀರಾವರಿಗೆ ಒಳಪಟ್ಟ ಪ್ರದೇಶಗಳಲ್ಲಿ ಭತ್ತ, ಅಡಿಕೆ, ಬಾಳೆ, ತರಕಾರಿ ಸೇರಿದಂತೆ ಆಹಾರ ಹಾಗೂ ವಾಣಿಜ್ಯ ಬೆಳೆ ಬೆಳೆಯ­ಲಾಗುತ್ತಿದೆ. ಆ ಮೂಲಕ ರಾಜ್ಯದ ಆಹಾರ ಉತ್ಪಾದನೆ, ಆರ್ಥಿಕ ಭದ್ರತೆಗೆ ನೀರಾವರಿ ಪ್ರದೇಶಗಳು ಮಹತ್ವದ ಕೊಡುಗೆ ನೀಡುತ್ತಿವೆ. ಇಂತಹ ಪ್ರದೇಶ ದಿನದಿಂದ ದಿನಕ್ಕೆ ಭೂ ಪರಿವರ್ತನೆಗೆ ಒಳಗಾಗುತ್ತಿದೆ.

ಶಿವಮೊಗ್ಗ ವ್ಯಾಪ್ತಿಯಲ್ಲೇ  10 ವರ್ಷಗಳಲ್ಲಿ ಒಂದು ಲಕ್ಷ ನಿವೇಶನಗಳು ನಿರ್ಮಾಣವಾಗಿದ್ದು, ಅದಕ್ಕಾಗಿ 10–15 ಸಾವಿರ ಎಕರೆ ಪ್ರದೇಶವನ್ನು ಭೂ ಪರಿವರ್ತನೆ ಮಾಡಲಾಗಿದೆ. ನಗರಾ­ಭಿವೃದ್ಧಿ ಪ್ರಾಧಿಕಾರವೇ 12 ಸಾವಿರ ನಿವೇಶನ ಅಭಿವೃದ್ಧಿಪಡಿಸಿ ಹಂಚಿಕೆ ಮಾಡಿದೆ. 500 ಎಕರೆಗೂ ಹೆಚ್ಚು ಪ್ರದೇಶ ಭೂ ಪರಿವರ್ತನೆ ಮಾಡಿಕೊ­ಡುವಂತೆ ಖಾಸಗಿ ವ್ಯಕ್ತಿಗಳು, ವಿವಿಧ ಖಾಸಗಿ ಗೃಹ ನಿರ್ಮಾಣ ಕಂಪೆನಿಗಳು ಈಗಾಗಲೇ ಅರ್ಜಿ ಸಲ್ಲಿಸಿವೆ.

ದಾವಣಗೆರೆ ಜಿಲ್ಲೆಯ ವ್ಯಾಪ್ತಿ­ಯಲ್ಲೂ ಭದ್ರಾ ನಾಲೆಯ ನೀರು ಬಳಸುವ ನೀರಾವರಿ ಪ್ರದೇಶ ಗಣನೀ­ಯವಾಗಿ ಭೂ ಪರಿವರ್ತನೆ­ಯಾಗು­ತ್ತಿದ್ದು, 10 ವರ್ಷಗಳಲ್ಲಿ  18 ಸಾವಿರ ಎಕರೆ ಭೂಮಿ ಪರಿವರ್ತನೆ­ಯಾಗಿದೆ. ಭದ್ರಾ ಕಾಡಾ ವ್ಯಾಪ್ತಿಯ ವಿವಿಧ ಜಲಾಶ ಯಗಳ ಅಚ್ಚುಕಟ್ಟು ವ್ಯಾಪ್ತಿ­ಯಲ್ಲಿ ಈ ರೀತಿ ಭೂ ಪರಿವರ್ತನೆ­ಯಾದ  ಪ್ರದೇಶ 70 ಸಾವಿರ ಎಕರೆಗೂ ಹೆಚ್ಚು.

ಜಿಲ್ಲಾಧಿಕಾರಿಗಳಿಗೆ ಪತ್ರ
ಅಚ್ಚುಕಟ್ಟು ವ್ಯಾಪ್ತಿಯ ನೀರಾವರಿ ಪ್ರದೇಶ ಭೂ ಪರಿವರ್ತನೆ ಮಾಡುವ ಮುನ್ನ ಕಡ್ಡಾಯವಾಗಿ ನೀರಾವರಿ ಇಲಾಖೆಯ ಅನುಮತಿ ಪಡೆಯಬೇಕು ಎಂದು ಎಲ್ಲ ಜಿಲ್ಲಾಧಿಕಾರಿಗಳಿಗೂ ಪತ್ರ ಬರೆಯಲಾಗಿದೆ. ಇದೇ ವೇಗದಲ್ಲಿ ಅಚ್ಚುಕಟ್ಟು ಪ್ರದೇಶ ಭೂ ಪರಿವರ್ತನೆ­ಯಾದರೆ ರಾಜ್ಯದ ಆಹಾರ ಉತ್ಪಾ­ದನೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಅಲ್ಲದೇ, ಸಾವಿರಾರು ಕೋಟಿ ಖರ್ಚು ಮಾಡಿ ಅಣೆಕಟ್ಟೆ ನಿರ್ಮಾಣ, ನಾಲೆ ಆಧುನೀಕರಣ ಮಾಡಿದ ಶ್ರಮ ವ್ಯರ್ಥವಾಗುತ್ತದೆ. ನೀರೂ ಪೋಲಾಗುತ್ತದೆ.
–ಎ.ಎಸ್.ಪಾಟೀಲ್‌, ಮುಖ್ಯ ಎಂಜಿನಿಯರ್‌ ಹಾಗೂ ಆಡಳಿತಾಧಿಕಾರಿ, ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT