ADVERTISEMENT

ವಿಜಯನಗರ ಸಾಮ್ರಾಜ್ಯ ಪತನಕ್ಕೆ ಶೈವರೂ ಕಾರಣ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2015, 19:23 IST
Last Updated 28 ನವೆಂಬರ್ 2015, 19:23 IST

ಹುಬ್ಬಳ್ಳಿ: ‘ಹಂಪಿಯ ವಿಜಯನಗರ ಸಾಮ್ರಾಜ್ಯದ ನಾಶಕ್ಕೆ ಬಹಮನಿ ಸುಲ್ತಾನರೊಂದಿಗೆ ಆ ಭಾಗದ ಶೈವರೂ ಕೈ ಜೋಡಿಸಿದ್ದರು ಎಂಬುದನ್ನು ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ ಬೆಳಕಿಗೆ ತಂದಿದ್ದರು’ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ಪ್ರಾಧ್ಯಾಪಕ ಡಾ.ಜೆ.ಎಂ. ನಾಗಯ್ಯ ಶನಿವಾರ ಇಲ್ಲಿ ಹೇಳಿದರು.

ಡಾ. ಕಲಬುರ್ಗಿಯವರ 77ನೇ ಜನ್ಮದಿನ ಕಾರ್ಯಕ್ರಮದಲ್ಲಿ ‘ಸಮಗ್ರ ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ’ ಎಂಬ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.

‘ವಿಜಯನಗರ ಸಾಮ್ರಾಜ್ಯ ಪತನಕ್ಕೆ ಶ್ರೀಕೃಷ್ಣದೇವರಾಯ ಮೂಲ ಕಾರಣ. ಕೃಷ್ಣದೇವರಾಯನಿಗೂ ಮುನ್ನ ಹಂಪಿಯಲ್ಲಿ ಆಳ್ವಿಕೆ ನಡೆಸಿದ್ದ ಸಂಗಮ ಮನೆತನದ ಅರಸರು ಎಲ್ಲ ಆಜ್ಞೆಗಳನ್ನು ವಿರೂಪಾಕ್ಷನ ಹೆಸರಿನಲ್ಲಿ ಹೊರಡಿಸುತ್ತಿದ್ದರು. ಆಗ ಶೈವಪಂಥಕ್ಕೆ ಹೆಚ್ಚಿನ ಮನ್ನಣೆ ಇತ್ತು. ನಂತರ ಕೃಷ್ಣದೇವರಾಯ ಸೇರಿದಂತೆ ತುಳುವ ಮನೆತನದ ಅರಸರ ಆಳ್ವಿಕೆ ಅವಧಿಯಲ್ಲಿ ಶ್ರೀವೈಷ್ಣವ ಪಂಥ ಮುಂಚೂಣಿಗೆ ಬಂತು ಎಂಬುದನ್ನು ಕಲಬುರ್ಗಿ ಅವರು ತಮ್ಮ ಸಂಶೋಧನಾ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ’ ಎಂದು ಹೇಳಿದರು.

‘ಅತ್ತಿಮಬ್ಬೆ ಜೈನಳಲ್ಲ. ಆದರೆ ಜೈನ ಒಕ್ಕಲು ಮಾತ್ರ. ಆಕೆಯ ಗಂಡನ ನೆನಪಿಗೆ ಶಿವಾಲಯ ಕಟ್ಟಿಸಿದ್ದು ಇದಕ್ಕೆ ಸಾಕ್ಷಿ. ಅದೇ ರೀತಿ ಶ್ರವಣಬೆಳಗೊಳದ ಗೊಮ್ಮಟೇಶ್ವರ ಮೂರ್ತಿ ಕೆತ್ತಿಸಿದ ಮಂತ್ರಿ ಚಾವುಂಡರಾಯ, ಗಂಗದಂಡನಾಯಕ, ಹುಳ್ಳಯ್ಯ ಕೂಡ ಜೈನರಲ್ಲ ಆದರೆ ಅವರು ಜೈನ ಒಕ್ಕಲು (ಗುಡ್ಡರು). ಇವರೆಲ್ಲರಿಗೂ ಜೈನ ತೀರ್ಥಂಕರರು ಮಂತ್ರ ದೀಕ್ಷೆ ನೀಡಿದ್ದರು ಹೊರತು ಮತಾಂತರ ದೀಕ್ಷೆ ಅಲ್ಲ ಎಂಬುದನ್ನು ಕಲಬುರ್ಗಿ ಸಂಶೋಧನೆಗಳಿಂದ ಕಂಡುಕೊಂಡಿದ್ದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.