ADVERTISEMENT

ವಿಟಿಯು ತಿದ್ದುಪಡಿ ಮಸೂದೆಗೆ ಮೇಲ್ಮನೆ ಅಸ್ತು

ಆದಾಯ ತೆರಿಗೆಯ ಜಾಲದಿಂದ ಹೊರಕ್ಕೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2015, 19:34 IST
Last Updated 30 ಜುಲೈ 2015, 19:34 IST

ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ  (ವಿಟಿಯು) ಆದಾಯ ತೆರಿಗೆಯಿಂದ ವಿನಾಯಿತಿ ದೊರೆಯುವಂತೆ ಮಾಡುವ  ವಿಟಿಯು (ತಿದ್ದುಪಡಿ) ಮಸೂದೆ–2015ನ್ನು ವಿಧಾನ ಪರಿಷತ್ತಿನಲ್ಲಿ ಗುರುವಾರ ಅಂಗೀಕರಿಸಲಾಯಿತು.

ಮಸೂದೆ ಮಂಡಿಸಿದ ಉನ್ನತ ಶಿಕ್ಷಣ ಸಚಿವ ಆರ್‌.ವಿ. ದೇಶಪಾಂಡೆ, ‘ಇದು ಲಾಭದಾಯಕ ಸಂಸ್ಥೆ ಎಂದು ಪರಿಗಣಿಸಿ ಆದಾಯ ತೆರಿಗೆ ಇಲಾಖೆ ವಿಟಿಯುಗೆ ಸೇರಿದ ₨441 ಕೋಟಿ ಹಣವನ್ನು ಜಪ್ತಿ ಮಾಡಿದೆ. ಒಂದು ವೇಳೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್‌ 12 (ಎ) ಅಡಿಯಲ್ಲಿ ತೆರಿಗೆಯಿಂದ ವಿನಾಯಿತಿ ಪಡೆಯಬೇಕಾದರೆ ವಿವಿಯು ಲಾಭದ ಉದ್ದೇಶ ಹೊಂದಿರದ ಸಂಸ್ಥೆ ಎಂದು ಘೋಷಿಸಬೇಕಾಗುತ್ತದೆ’ ಎಂದರು. ‘ಇದಕ್ಕಾಗಿ, ವಿಟಿಯು ಕಾಯ್ದೆಯ ಸೆಕ್ಷನ್‌ 5 (8)ಕ್ಕೆ ಸಣ್ಣ ತಿದ್ದುಪಡಿ ತರಲಾಗಿದೆ. ಇದರ ಜೊತೆಗೆ ಸೆಕ್ಷನ್‌ 23ಕ್ಕೆ ತಿದ್ದುಪಡಿ ಮಾಡಲಾಗಿದೆ ಮತ್ತು ಹೊಸದಾಗಿ ಸೆಕ್ಷನ್‌ 48ಎ ಸೇರ್ಪಡೆಗೊಳಿಸಲಾಗಿದೆ. ಆದಾಯ ತೆರಿಗೆ ಇಲಾಖೆಯ ಸಲಹೆ ಮೇರೆಗೆ ಈ ಸರಳ ತಿದ್ದುಪಡಿಗಳನ್ನು ಮಾಡಲಾಗಿದೆ’ ಎಂದು ವಿವರಿಸಿದರು.

ಬಿಜೆಪಿಯ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌ ಮಾತನಾಡಿ, ‘ಇತರ ವಿಶ್ವವಿದ್ಯಾಲಯಗಳಿಗೆ ಬಾರದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಿಟಿಯುಗೆ ಬಂದಿದ್ದಾರೆ ಎಂದರೆ, ಇಲ್ಲಿ ಹಣ ಇದೆ ಎಂದರ್ಥ’ ಎಂದರು.

‘ವಿವಿಗಳು ಹಣ ಸಂಗ್ರಹಣೆ ಕೇಂದ್ರವಾದಾಗ ಈ ರೀತಿ ಆಗುತ್ತದೆ. ವಿದ್ಯಾರ್ಥಿಗಳಿಂದ ದುಬಾರಿ ಶುಲ್ಕ ವಸೂಲು ಮಾಡುವುದನ್ನು ವಿಟಿಯು ನಿಲ್ಲಿಸಲಿ’ ಎಂದು ಒತ್ತಾಯಿಸಿದರು.

‘ವಿಶ್ವವಿದ್ಯಾಲಯವು ಅನುಸೂಚಿತ ಬ್ಯಾಂಕ್‌ಗಳಲ್ಲಿ  ಹಣ ಹೂಡಿಕೆ ಮಾಡಲು ತಿದ್ದುಪಡಿ ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.  ಇದನ್ನು ಕೈಬಿಟ್ಟು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಮಾತ್ರ ಹಣ ಇಡುವುದಕ್ಕೆ ಅವಕಾಶ ನೀಡಬೇಕು. ಮಸೂದೆಯಲ್ಲಿರುವ ಹೂಡಿಕೆ ಎಂಬ ಪದವನ್ನು ತೆಗೆದು ಠೇವಣಿ ಎಂದು ಬಳಸಬೇಕು’ ಎಂದು ಒತ್ತಾಯಿಸಿದರು.

ಬಿಜೆಪಿಯ ರಾಮಚಂದ್ರ ಗೌಡ,  ಅರುಣ ಶಹಪುರ, ಕಾಂಗ್ರೆಸ್‌ನ ವಿ.ಎಸ್‌. ಉಗ್ರಪ್ಪ ಸೇರಿದಂತೆ ಹಲವು ಸದಸ್ಯರು ಈ ಸಲಹೆಗೆ ಬೆಂಬಲ ಸೂಚಿಸಿದರು.

ಬಿಜೆಪಿ ಮತ್ತೊಬ್ಬ ಸದಸ್ಯ ಗೋ. ಮಧುಸೂದನ ಮಾತನಾಡಿ, ‘ಲಾಭದಾಯಕ ಸಂಸ್ಥೆ ಅಲ್ಲ ಅಂದರೆ, ಆದಾಯ ಮತ್ತು ವೆಚ್ಚ ಒಂದೇ ರೀತಿ ಇರಬೇಕಿತ್ತು. ಲಾಭ ಆಗಿದೆ, ಅಂದರೆ ವಿದ್ಯಾರ್ಥಿಗಳಿಂದ ಹೆಚ್ಚು ಶುಲ್ಕ ವಸೂಲು ಮಾಡಲಾಗುತ್ತಿದೆ ಎಂದರ್ಥ. ಇದು ವಿದ್ಯಾರ್ಥಿಗಳ ಶೋಷಣೆ ಅಲ್ವಾ’ ಎಂದು ಪ್ರಶ್ನಿಸಿದರು.

‘ವಿಟಿಯುನಲ್ಲಿ ಸಾಕಷ್ಟು ಹಣ ಇದೆ. ಅದನ್ನು ಹೇಗೆ ಖರ್ಚು ಮಾಡಬೇಕು ಎಂದು ಗೊತ್ತಾಗುತ್ತಿಲ್ಲ. ಅದಕ್ಕಾಗಿ ಕಟ್ಟಡ ನಿರ್ಮಾಣ ಮಾಡುವಾಗ ಬೇಕಾಬಿಟ್ಟಿ ವೆಚ್ಚ ಮಾಡಲಾಗುತ್ತಿದೆ’ ಎಂದು ಆರೋಪಿಸಿದರು.

‘ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ₨ 900 ಕೋಟಿ ಇದೆ. ಮುಂದೆ ಅದರ ಕಾಯ್ದೆಗೂ  ತಿದ್ದುಪಡಿ ತರಬೇಕಾಗಬಹುದು’ ಎಂದು ಆತಂಕ  ವ್ಯಕ್ತಪಡಿಸಿದರು.

ಭ್ರಷ್ಟಾಚಾರ: ವಿಟಿಯು ಕುಲಪತಿ ವಿರುದ್ಧ ಹರಿಹಾಯ್ದ ಬಿಜೆಪಿಯ ವೈ.ಎ. ನಾರಾಯಣ ಸ್ವಾಮಿ, ‘ಯಾರೋ ಮಾಡಿದ ತಪ್ಪಿಗೆ ಸಚಿವರು ಇಲ್ಲಿ ತಲೆ ತಗ್ಗಿಸಬೇಕಾಗಿದೆ. ಸೂಕ್ತ ಹಣಕಾಸು ನಿರ್ವಹಣೆಗಾಗಿ ಸರ್ಕಾರ ಕಳುಹಿಸಿದ್ದ ಹಣಕಾಸು ಅಧಿಕಾರಿಯನ್ನು ವಿವಿಯ ಒಳಗೆ ಪ್ರವೇಶಿಸಲು ಅವಕಾಶ ನೀಡಲಿಲ್ಲ. ಅಲ್ಲಿನ ಭ್ರಷ್ಟಾಚಾರದಿಂದಾಗಿ  ಇಂದು ಈ ಪರಿಸ್ಥಿತಿ ಬಂದಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಸೂದೆಯಲ್ಲಿರುವ ‘ಅನುಸೂಚಿತ ಬ್ಯಾಂಕ್‌ಗಳಲ್ಲಿ ಹಣ ಹೂಡುವ’ ಪ್ರಸ್ತಾವನೆಗೆ ಸದಸ್ಯರು ಎತ್ತಿದ ಆಕ್ಷೇಪಕ್ಕೆ ಸ್ಪಷ್ಟನೆ ನೀಡಿದ ಸಚಿವರು, ‘ರಾಷ್ಟ್ರೀಕೃತ ಬ್ಯಾಂಕ್‌ಗಳೂ ಅನುಸೂಚಿತ ಬ್ಯಾಂಕ್‌ಗಳೇ ಆಗಿವೆ. ಹಣವನ್ನು ಠೇವಣಿ ಇಡಲಾಗುತ್ತದೆಯೇ ಹೊರತು ಹೂಡಿಕೆ ಮಾಡುವುದಿಲ್ಲ. ಈ ಬಗ್ಗೆ ಕೂಲಂಕಷ ಪರಿಶೀಲನೆ ನಡೆಸಿ ಅಗತ್ಯ ಬಿದ್ದರೆ ಮತ್ತೆ ತಿದ್ದುಪಡಿ ತರಲಾಗುವುದು’ ಎಂದು ಭರವಸೆ ನೀಡಿದರು.
*
ಇತರ ವಿವಿಗಳಿಗೂ ಭೀತಿ!
ಸದಸ್ಯರ ಅಭಿಪ್ರಾಯ ಮತ್ತು ಸಲಹೆಗಳಿಗೆ ಪ್ರತಿಕ್ರಿಯಿಸಿದ  ದೇಶಪಾಂಡೆ, ‘ಮುಂದಿನ ದಿನಗಳಲ್ಲಿ ಬೇರೆ ವಿಶ್ವವಿದ್ಯಾಲಯಗಳ ಮೇಲೂ ಆದಾಯ ತೆರಿಗೆ ಇಲಾಖೆಯ ಕಣ್ಣು ಬೀಳಬಹುದು’ ಎಂದು ಕಳವಳ ವ್ಯಕ್ತಪಡಿಸಿದರು.

‘ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಲ್ಲಿ ₨900 ಕೋಟಿ ಇದೆ. ಆದಾಯ ತೆರಿಗೆ ಅಧಿಕಾರಿಗಳು ಅಲ್ಲಿಗೂ ಬರಬಹುದು. ಹಾಗಾಗಿ ಎಚ್ಚರಿಕೆಯಿಂದ ಇರುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲರಿಗೆ  ಸಲಹೆ ನೀಡಿದ್ದೇನೆ’ ಎಂದರು.

‘ರಾಜ್ಯದ ಇತರ ವಿವಿಗಳಿಗೂ ಇದೇ ಸ್ಥಿತಿ ಎದುರಾಗುವ ಸಾಧ್ಯತೆ ಇದೆ. ಹಾಗಾಗಿ ವಿವಿಗಳಿಗೆ ಸಂಬಂಧಿಸಿದ ಕಾಯ್ದೆಗಳನ್ನು ಪರಿಶೀಲನೆ ಮಾಡಲು ನಿರ್ಧರಿಸಲಾಗಿದೆ. ಅಗತ್ಯ ಬಿದ್ದರೆ, ತಿದ್ದುಪಡಿ ತರಬೇಕಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT