ADVERTISEMENT

ಶುಕ್ರ ಅಧ್ಯಯನಕ್ಕೆ ಸ್ವತಂತ್ರ ಬಾಹ್ಯಾಕಾಶ ನೌಕೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2017, 21:44 IST
Last Updated 17 ನವೆಂಬರ್ 2017, 21:44 IST
ಕಿರಣ್‌ ಕುಮಾರ್‌
ಕಿರಣ್‌ ಕುಮಾರ್‌   

ಬೆಂಗಳೂರು: ಚಂದ್ರನಲ್ಲಿ ಇನ್ನಷ್ಟು ವೈಜ್ಞಾನಿಕ ಅಧ್ಯಯನಕ್ಕೆ ಜಪಾನ್‌ ಜತೆ ಸೇರಿ ಹೊಸ ಯಾನ ಮತ್ತು ಶುಕ್ರಗ್ರಹದ ಅಧ್ಯಯನಕ್ಕೆ ಸ್ವತಂತ್ರವಾಗಿ ಬಾಹ್ಯಾಕಾಶ ನೌಕೆ ಕಳುಹಿಸುವ ಯೋಜನೆಯನ್ನು ಇಸ್ರೊ ಪ್ರಕಟಿಸಿದೆ.

‘ಚಂದ್ರಯಾನ–2’ ಮತ್ತು ‘ಆದಿತ್ಯ–1’ ಬಾಹ್ಯಾಕಾಶ ನೌಕೆಗಳನ್ನು ಕಳುಹಿಸಿದ ಬಳಿಕ ಇವೆರಡೂ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಇಸ್ರೊ ಅಧ್ಯಕ್ಷ ಎ.ಎಸ್‌.ಕಿರಣ್‌ ಕುಮಾರ್‌ ತಿಳಿಸಿದರು. ಏಷ್ಯಾ–ಫೆಸಿಫಿಕ್‌ ಪ್ರಾದೇಶಿಕ ಬಾಹ್ಯಾಕಾಶ ವೇದಿಕೆಯ (ಎಪಿಆರ್‌ಎಸ್‌ಎಎಫ್‌) 24ನೇ ಸಮಾ
ವೇಶದ ಕುರಿತು ಶುಕ್ರವಾರ ಆಯೋಜಿಸಿದ್ದ ಮಾಧ್ಯಮ ಗೋಷ್ಠಿಯಲ್ಲಿ ಈ ವಿವರ ನೀಡಿದರು.

‘ಶುಕ್ರಗ್ರಹದ ರಚನೆ, ಮೇಲ್ಮೈ ಲಕ್ಷಣದ ಬಗ್ಗೆ ಈವರೆಗೆ ವಿವರವಾದ ಮಾಹಿತಿ ಲಭ್ಯವಿಲ್ಲ. ಹಾಗಾಗಿ ಅದರ ಅಧ್ಯಯನಕ್ಕೆ ಉಪಗ್ರಹ ಉಡಾವಣೆ ಮಾಡುವ ಸಾಧ್ಯತೆ ಇದೆ. ಜತೆಗೆ ಮಂಗಳಯಾನ–2 ಹಾಗೂ ಕ್ಷುದ್ರಗ್ರಹಕ್ಕೆ ಉಪಗ್ರಹ ಕಳುಹಿಸುವ ಬಗ್ಗೆಯೂ ನಮ್ಮ ಸಂಶೋಧನಾ ತಂಡ ವರದಿ ನೀಡಿದೆ. ಸದ್ಯ ಅನುಮೋದನೆಗೊಂಡಿರುವ ಎರಡು ಉಪಗ್ರಹಗಳ ಉಡಾವಣೆ ನಂತರ ಮುಂದಿನ ಯೋಜನೆ ಬಗ್ಗೆ ತೀರ್ಮಾನಿಸುತ್ತೇವೆ’ ಎಂದು ಕಿರಣ್‌ ಕುಮಾರ್ ಹೇಳಿದರು.

ADVERTISEMENT

ಜಪಾನ್‌ ಜತೆ ಸೇರಿ ಅನ್ವೇಷಣೆ: ‘ಜಪಾನ್‌ ದೇಶದ ಬಾಹ್ಯಾಕಾಶ ಸಂಸ್ಥೆ ಜಕ್ಸಾ ಜತೆ ಸೇರಿ ಚಂದ್ರಯಾನ ಕೈಗೊಳ್ಳುತ್ತಿದ್ದೇವೆ. ಇನ್ನೆರಡು ತಿಂಗಳಲ್ಲಿ ಯೋಜನೆ ಅನುಷ್ಠಾನ ಸಿದ್ಧತೆಗೆ ಸಹಿ ಹಾಕುತ್ತೇವೆ. ಹವಾಮಾನ ಬದಲಾವಣೆ ಕುರಿತು ಅಧ್ಯಯನ ಕೈಗೊಳ್ಳುತ್ತೇವೆ’ ಎಂದರು.

‘ಎಪಿಆರ್‌ಎಸ್‌ಎಎಫ್‌ ಮೂಲಕ ನಮ್ಮ ದೇಶದಲ್ಲಿ ನಡೆದಿರುವ ಬಾಹ್ಯಾಕಾಶ ತಂತ್ರಜ್ಞಾನದ ಉಪಯೋಗಗಳ ಕುರಿತು ಬೇರೆ ರಾಷ್ಟ್ರಗಳಿಗೆ ತೋರಿಸಲು ಸಾಧ್ಯವಾಗುತ್ತದೆ. ಇದರಿಂದ ಬಾಹ್ಯಾಕಾಶದಲ್ಲಿ ಹೆಜ್ಜೆ ಇಡುತ್ತಿರುವ ಥಾಯ್ಲೆಂಡ್‌, ವಿಯೆಟ್ನಾಂ ದೇಶಗಳಿಗೆ ಸ್ಫೂರ್ತಿಯಾಗಲಿದೆ’ ಎಂದು
ತಿಳಿಸಿದರು.

ಜಕ್ಸಾ ಅಧ್ಯಕ್ಷ ಡಾ. ನೌಕಿ ಒಕುಮುರ, ‘ವಿವಿಧ ದೇಶಗಳ ಪಾಲುದಾರಿಕೆಯಲ್ಲಿ ಬಾಹ್ಯಾಕಾಶ ಯೋಜನೆಗಳನ್ನು ಕೈಗೊಳ್ಳುವುದು ಉತ್ತಮ ಬೆಳವಣಿಗೆ. ಇದರಿಂದ ಸಣ್ಣ ದೇಶಗಳು ಬಾಹ್ಯಾಕಾಶ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಬಹುದು’ ಎಂದು ಅಭಿಪ್ರಾಯಪಟ್ಟರು.

ಚಂದ್ರಯಾನ–2 ಉಡಾವಣೆ: ‘ಉಪಗ್ರಹದ ಆರ್ಬಿಟರ್‌, ಲ್ಯಾಂಡರ್‌, ರೋವರ್‌... ಹೀಗೆ ಮೂರೂ ವಿಭಾಗಗಳಲ್ಲಿ ಫ್ಲೈಟ್‌ ಮಾಡೆಲ್‌ ಜೋಡಣೆ ಕೆಲಸ ಪ್ರಾರಂಭವಾಗಿದೆ. ಮಾರ್ಚ್‌ನಲ್ಲಿ ಉಡಾವಣೆ ಮಾಡಲು ಯೋಜಿಸಿದ್ದೇವೆ’ ಎಂದು ಕಿರಣ್‌ ಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.