ADVERTISEMENT

ಸಡಗರದ ನಡುವೆ ತುಳು ಮೇಳ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2014, 19:30 IST
Last Updated 13 ಡಿಸೆಂಬರ್ 2014, 19:30 IST
ತುಳು ಸಂಸ್ಕೃತಿಯನ್ನು ಬಿಂಬಿಸುವ ಪ್ರಾತ್ಯಕ್ಷಿಕೆ  	– ಪ್ರಜಾವಾಣಿ ಚಿತ್ರ /ಗೋವಿಂದರಾಜ ಜವಳಿ
ತುಳು ಸಂಸ್ಕೃತಿಯನ್ನು ಬಿಂಬಿಸುವ ಪ್ರಾತ್ಯಕ್ಷಿಕೆ – ಪ್ರಜಾವಾಣಿ ಚಿತ್ರ /ಗೋವಿಂದರಾಜ ಜವಳಿ   

ಮಂಗಳೂರು: ಇಂಟರ್ನೆಟ್ ಯುಗದಲ್ಲಿ ತುಳು ಅಸ್ಮಿತೆಯನ್ನು ಉಳಿಸಿಕೊಳ್ಳುವುದು ಹೇಗೆ? ಅರ್ಹತೆ ಇದ್ದರೂ ಇನ್ನೂ ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಸಾಧ್ಯ ಆಗದಿರು­ವುದು ಏಕೆ? ತುಳುವರ ಸಂಸ್ಕೃತಿಯಲ್ಲಿ ಹಾಸು­ಹೊಕ್ಕಾಗಿ­ರುವ ಕಂಬಳವನ್ನು ಕಾನೂನಿನ ಬಿಕ್ಕಟ್ಟಿನಿಂದ ರಕ್ಷಿಸುವುದು ಹೇಗೆ? ಆಧುನಿಕತೆಯ ಸುಳಿವಿಗೆ ಸಿಲುಕಿ ನಶಿಸುತ್ತಿರುವ ತುಳು ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಮಾರ್ಗೋಪಾಯಗಳಾವುವು?

ಅಖಿಲ ಭಾರತ ತುಳು ಒಕ್ಕೂಟದ 25ನೇ ವರ್ಷಾ­ಚರಣೆ ಅಂಗವಾಗಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಅಡ್ಯಾರಿನ ಸಹ್ಯಾದ್ರಿ ಕಾಲೇಜಿನ ಪ್ರಾಂಗಣದಲ್ಲಿ ನಡೆಯುತ್ತಿರುವ ‘ವಿಶ್ವ ತುಳುವರ ಹಬ್ಬ 2014’ರ ವಿವಿಧ ಗೋಷ್ಠಿಗಳಲ್ಲಿ ಶನಿವಾರ ತುಳುವರ ಕಲೆ ಸಂಸ್ಕೃತಿ, ಬದುಕು– ಬವಣೆಗಳ ಕುರಿತ ವಿಚಾರಗಳ ಬಗ್ಗೆ ಸಂವಾದಗಳು ನಡೆದವು.

ಕಂಬಳ ಹಿಂಸೆ ತ್ಯಜಿಸೋಣ: ಕಂಬಳದಲ್ಲಿ ಹಿಂಸೆ­ಯನ್ನು ಸಂಪೂರ್ಣ ತ್ಯಜಿಸುವ ಮೂಲಕ ಕಾನೂನು ಬಿಕ್ಕಟ್ಟು ಬಗೆಹರಿಸಿ ತುಳುವರ ಜನಪದ ಕ್ರೀಡೆಯನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಬಗ್ಗೆ ಕಂಬಳ ಸಂರಕ್ಷಣೆ, ನಿರ್ವಹಣೆ ಮತ್ತು ತರಬೇತಿ ಅಕಾಡೆ­ಮಿಯ ಸಂಚಾಲಕ ಪ್ರೊ.ಕೆ.ಗುಣಪಾಲ ಕಡಂಬ ಮನವರಿಕೆ ಮಾಡಿದರು. ಕಂಬಳದ ಹೆಸರಲ್ಲಿ ಯಾವುದೇ ರೀತಿಯ ಅಕ್ರಮಗಳಿಗೆ ಕಡಿವಾಣ ಹಾಕುವ ಬಗ್ಗೆಯೂ ನಿರ್ಣಯ ಕೈಗೊಳ್ಳಲಾಯಿತು.  

ರಾಜ್ಯದ ಅಧಿಕೃತ ಭಾಷೆಯಾಗಲಿ: ‘ತುಳು ಭಾಷೆಗೆ ರಾಜ್ಯದಲ್ಲಿ ಅಧಿಕೃತ ಭಾಷೆ ಎಂಬ ಮಾನ್ಯತೆ ಸಿಗಬೇಕು. ಈ ಭಾಷೆಯನ್ನು ಸಂವಿಧಾನದ ೮ನೇ ಪರಿಚ್ಛೇದಕ್ಕೆ ಸೇರಿಸಲು ಒತ್ತಾಯ ಮಾಡಬೇಕು’ ಎಂದು ಹಿರಿಯ ವಿದ್ವಾಂಸ ಡಾ.ಬಿ.ಎ.ವಿವೇಕ ರೈ ಅಭಿಪ್ರಾಯಪಟ್ಟರು. ಶುಕ್ರವಾರ ಉದ್ಘಾಟನಾ ಸಮಾ­ರಂಭದ ಅಧ್ಯಕ್ಷತೆ ವಹಿಸಿದ್ದ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರೂ, ತುಳು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರುವುದು ನಿಶ್ಚಿತ ಎಂದು ಭರವಸೆ ವ್ಯಕ್ತಪಡಿಸಿದ್ದರು.

‘ತಂತ್ರಜ್ಞಾನ ಯುಗದಲ್ಲಿ ತುಳು’ ಕುರಿತು ಮಾತನಾಡಿದ ವೀಕಿಪೀಡಿಯ ಪ್ರತಿನಿಧಿ ಡಾ.ಯು.ಬಿ.ಪವ­­ನಜ, ತುಳುವನ್ನು ಯೂನಿ­ಕೋಡ್‌­ನಲ್ಲಿ ಅಳವಡಿಸುವ ಹಾಗೂ ತುಳು ಭಾಷೆಯಲ್ಲಿ ವೀಕಿಪೀಡಿಯವನ್ನು ಅಭಿವೃದ್ಧಿಪಡಿಸುವ ಮೂಲಕ ತುಳುನಾಡಿನ ಸಂಸ್ಕೃತಿ, ಪರಂಪರೆಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಅಗತ್ಯವನ್ನು ವಿವರಿಸಿದರು. 

ಆರಾಧನಾ ಸಂಸ್ಕೃತಿಗೆ ಧಕ್ಕೆ: ‘ನಿಸರ್ಗಕ್ಕೆ ಹತ್ತಿರವಾಗಿದ್ದ ತುಳುವರ ನಾಗಾರಾಧನೆ ಆಧುನಿಕತೆಯ ಸೋಂಕಿ­ನಲ್ಲಿ ಹೇಗೆ ನಾಗಗಳಿಗೆ ಮಾರಕವಾಗಿ ಮಾರ್ಪಟ್ಟಿದೆ. ಭಕ್ತಿ ಆಚರಣೆ ನೇಪಥ್ಯಕ್ಕೆ ಸರಿದು ಢಾಂಬಿಕತೆ ಮೆರೆಯುತ್ತಿದೆ’ ಎಂಬ ಬಗ್ಗೆ ಆತ್ಮಾವಲೋಕನ ಮಾಡಿ­ಕೊಳ್ಳಬೇಕಾಗಿದೆ’ ಎಂದು ವಿದ್ವಾಂಸ ಡಾ.ವೈ.ಎನ್. ಶೆಟ್ಟಿ ಅಭಿಪ್ರಾಯಪಟ್ಟರು.

‘ಶಿಕ್ಷಣದ ಪ್ರಭಾವದಿಂದ ತುಳುವರ ದೈವಾ­ರಾಧನೆ ಸಂಸ್ಕೃತಿ ಮತ್ತಷ್ಟು ಹೆಚ್ಚಿದೆಯೇ ಹೊರತು ಕಡಿಮೆಯಾಗಿಲ್ಲ. ವ್ಯಕ್ತಿ ಕೇಂದ್ರಿತವಾಗಿದ್ದ ದೈವಾ­ರಾಧನೆ ಸಂಸ್ಕೃತಿ ಇಂದು ಸಮುದಾಯ ಕೇಂದ್ರಿತವಾಗಿ ಬೆಳೆದಿದೆ. ದೈವಾರಾಧನೆ ಕಲೆಯ ನಿಷ್ಣಾತ ಜನಪದ ಕಲಾವಿದರು ಮೂಲೆಗುಂಪಾಗಿರುವುದು ಉತ್ತಮ ಬೆಳವಣಿಗೆ ಅಲ್ಲ’ ಎಂದು ಹಂಪಿ ಕನ್ನಡ ವಿ.ವಿ ಪ್ರಾಧ್ಯಾಪಕ ಡಾ.ಶ್ರೀಧರ ಅಭಿಪ್ರಾಯಪಟ್ಟರು.

ಸಮೃದ್ಧ ಕೃಷಿ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಆಚರಣೆಗಳು ಅರ್ಥಕಳೆದುಕೊಳ್ಳದಂತೆ ಕಾಪಾಡುವ ಮೂಲಕ ತುಳುವರ ಬದುಕು ಅಸ್ತವ್ಯಸ್ತಗೊಳ್ಳದಂತೆ ಕಾಪಾಡಬೇಕು ಎಂದು ವಿದ್ವಾಂಸ ಬನ್ನಂಜೆ ಬಾಬು ಅಮಿನ್‌ ಸಲಹೆ ನೀಡಿದರು. ತುಳು ಜನಪದ ಗೀತೆಗಳ ಪದರಂಗಿತ, ಪಾಡ್ದನ, ತುಳು ಹಾಸ್ಯ ನಾಟಕಗಳನ್ನೊಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳು ಹಬ್ಬದ ವಾತಾವರಣಕ್ಕೆ ಮೆರುಗು ತಂದವು. ಭಾನುವಾರ ವಿಶ್ವ ತುಳುವೆರೆ ಪರ್ಬ ಸಮಾ­ರೋಪಗೊಳ್ಳಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಕಾರ್ಯಕ್ರಮದಲ್ಲಿ ಭಾಗ­ವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.