ADVERTISEMENT

ಸಿ.ಎಂ.ರಿಂದ ಬೆಂಕಿ ಹಚ್ಚುವ ಕೆಲಸ: ಬಿಎಸ್‌ವೈ ಕಿಡಿ

ಮಹಾದಾಯಿ ಯೋಜನೆ, ಐಐಟಿ ವಿಚಾರ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2015, 20:01 IST
Last Updated 4 ಅಕ್ಟೋಬರ್ 2015, 20:01 IST
ಸಿ.ಎಂ.ರಿಂದ ಬೆಂಕಿ ಹಚ್ಚುವ ಕೆಲಸ: ಬಿಎಸ್‌ವೈ ಕಿಡಿ
ಸಿ.ಎಂ.ರಿಂದ ಬೆಂಕಿ ಹಚ್ಚುವ ಕೆಲಸ: ಬಿಎಸ್‌ವೈ ಕಿಡಿ   

ಹುಬ್ಬಳ್ಳಿ:  ‘ಮಹಾದಾಯಿ ಯೋಜನೆ ಹಾಗೂ ಐಐಟಿ ಸ್ಥಾಪನೆ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ’ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭಾನುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

‘ಮಹಾದಾಯಿ ವಿಚಾರದಲ್ಲಿ ರಾಜ್ಯದ ಸರ್ವಪಕ್ಷ ನಿಯೋಗಕ್ಕೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಭರವಸೆಯನ್ನು ಮರೆಮಾಚಿ, ಸಿದ್ದರಾಮಯ್ಯ ಜನತೆಗೆ ತಪ್ಪು ಮಾಹಿತಿ ನೀಡಿದರು. ಅದೇ ರೀತಿ ಧಾರವಾಡದಲ್ಲಿ ಐಐಟಿ ಸ್ಥಾಪನೆಗೆ ತಜ್ಞರ ಸಮಿತಿ ವರದಿ ನೀಡಿದ್ದರೂ ಉದ್ದೇಶಪೂರ್ವಕವಾಗಿ ರಾಯಚೂರಿನಲ್ಲಿ ಸ್ಥಾಪಿಸುವಂತೆ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಈ ಎಲ್ಲಾ ಗೊಂದಲಗಳಿಗೂ ಮುಖ್ಯಮಂತ್ರಿಯೇ ಜವಾಬ್ದಾರರಾಗಿದ್ದು, ಅವರೇ ಪರಿಹಾರ ಹುಡುಕಲಿ’ ಎಂದು ಆಗ್ರಹಿಸಿದರು.

‘ಡಾ.ಡಿ.ಎಂ.ನಂಜುಂಡಪ್ಪ ವರದಿ ಅನ್ವಯ ರಾಯಚೂರಿನಲ್ಲಿ ಐಐಟಿ ಸ್ಥಾಪನೆ ಮಾಡಲು ಜಗದೀಶ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರಕ್ಕೆ ಪತ್ರ ಬರೆಯಲಾಗಿತ್ತು. ಅದಕ್ಕೆ ನಾನೂ ಬೆಂಬಲ ನೀಡಿದ್ದೆ. ಆದರೆ ರಾಯಚೂರಿನ ಜೊತೆಗೆ ಧಾರವಾಡ, ಮೈಸೂರು ನಗರಗಳ ಹೆಸರನ್ನು ಕೇಂದ್ರಕ್ಕೆ ಶಿಫಾರಸು ಮಾಡಿ ರಾಜ್ಯ ಸರ್ಕಾರವೇ ಮೊದಲು ತಪ್ಪು ಹೆಜ್ಜೆ ಇಟ್ಟಿದೆ. ರಾಯಚೂರಿನಲ್ಲಿಯೇ ಐಐಟಿ ಸ್ಥಾಪನೆಯಾಗಬೇಕೆಂಬ ಉದ್ದೇಶವಿದ್ದರೆ ಅದೊಂದೇ ಊರಿನ ಹೆಸರು ಸೂಚಿಸಬಹುದಾಗಿತ್ತು. ತಜ್ಞರ ಸಮಿತಿ ಪರಿಶೀಲಿಸಿ ಧಾರವಾಡದ ಹೆಸರು ಅಂತಿಮಗೊಳಿಸಿದ ಬಳಿಕ ಪತ್ರ ಬರೆದು ಮುಖ್ಯಮಂತ್ರಿ ಗೊಂದಲ ಸೃಷ್ಟಿಸಿದ್ದಾರೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.