ADVERTISEMENT

ಸಿ.ಎಂ ಬದಲಾವಣೆ ಸಂಬಂಧ ಬುಲಾವ್‌ ಬಂದಿಲ್ಲ: ಪರಮೇಶ್ವರ್‌

​ಪ್ರಜಾವಾಣಿ ವಾರ್ತೆ
Published 3 ಮೇ 2016, 19:30 IST
Last Updated 3 ಮೇ 2016, 19:30 IST

ಬೆಂಗಳೂರು: ‘ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಸಂಬಂಧ ಹೈಕಮಾಂಡ್‌ನಿಂದ ನನಗೆ ಬುಲಾವ್‌ ಬಂದಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಗೃಹ ಸಚಿವ ಡಾ.ಜಿ. ಪರಮೇಶ್ವರ ಹೇಳಿದರು.

‘ರಾಜ್ಯದಲ್ಲಿ ಆಡಳಿತ ಬದಲಾವಣೆ ವಿಷಯವಾಗಿ ದೆಹಲಿಗೆ ತೆರಳುತ್ತಿಲ್ಲ. ಆ ಬಗ್ಗೆ ಮಾಹಿತಿಯೂ ಇಲ್ಲ’ ಎಂದು ಅವರು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

‘ಸಿದ್ದರಾಮಯ್ಯ ಅವರನ್ನೇ ದಲಿತ ಮುಖ್ಯಮಂತ್ರಿ ಎಂದು ಬಿಂಬಿಸುತ್ತೇವೆ’ ಎಂದು ಸಚಿವ ಎಚ್‌. ಆಂಜನೇಯ ನೀಡಿರುವ ಹೇಳಿಕೆ ಬಗ್ಗೆ ಪ್ರಶ್ನಿಸಿದಾಗ, ‘ಯಾರೋ ಏನೋ ಹೇಳುತ್ತಾರೆ ಎಂದು ಎಲ್ಲದಕ್ಕೂ ಪ್ರತಿಕ್ರಿಯಿಸಲು ಸಾಧ್ಯವಿಲ್ಲ’ ಎಂದರು.

‘ನಿಗಮ ಮಂಡಳಿಗಳಲ್ಲಿ ತಾಂತ್ರಿಕ ದೋಷದಿಂದ ಅಗತ್ಯಕ್ಕಿಂತ ಹೆಚ್ಚು ಸದಸ್ಯರ ನೇಮಕ ಆಗಿದೆ. ಇದನ್ನು ಸರಿಪಡಿಸುತ್ತೇವೆ’ ಎಂದೂ ಅವರು ಹೇಳಿದರು.
‘ಬರ ಕುರಿತು ರಾಜ್ಯಪಾಲರಿಗೆ ಬಿಜೆಪಿ ನೀಡಿರುವ ವರದಿ ರಾಜಕೀಯ ಪ್ರೇರಿತ. ಕೇಂದ್ರ ಸರ್ಕಾರದ ಅನುದಾನ ಮತ್ತು ರಾಜ್ಯ ಸರ್ಕಾರದಿಂದಲೂ ಸಾಕಷ್ಟು ಅನುದಾನ ಬಿಡುಗಡೆ ಮಾಡಿ ಬರ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ’ ಎಂದರು.

ತಮ್ಮ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿರುವುದರ ಹಿಂದೆ ರಾಜಕೀಯ ಪಿತೂರಿ ಇದೆ ಎಂಬ ಯಡಿಯೂರಪ್ಪ ಅವರ ಆರೋಪಕ್ಕೆ, ‘ಯಡಿಯೂರಪ್ಪ ಅವರ ವಿರುದ್ಧದ ಪ್ರಕರಣಗಳನ್ನು ಸಿಬಿಐ ತನಿಖೆ ನಡೆಸುತ್ತಿದೆ. ಕೇಂದ್ರ ಸರ್ಕಾರದ ಅಡಿಯಲ್ಲಿಯೇ ಸಿಬಿಐ ಕಾರ್ಯನಿರ್ವಹಿಸುತ್ತಿದೆ. ಇದರಲ್ಲಿ ಕಾಂಗ್ರೆಸ್‌ ಪಾತ್ರ ಏನಿದೆ?’ ಎಂದು ಅವರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.