ADVERTISEMENT

ಸಿಗರೇಟು ಚಿಲ್ಲರೆ ಮಾರಾಟ ನಿಷೇಧ ಸದ್ಯಕ್ಕಿಲ್ಲ

​ಪ್ರಜಾವಾಣಿ ವಾರ್ತೆ
Published 3 ಜೂನ್ 2015, 19:30 IST
Last Updated 3 ಜೂನ್ 2015, 19:30 IST

ಬೆಂಗಳೂರು: ಸಿಗರೇಟು ಮತ್ತು ಬೀಡಿಯನ್ನು ಬಿಡಿಯಾಗಿ ಮಾರಾಟ ಮಾಡಲು ರಾಜ್ಯದಲ್ಲಿ ಸದ್ಯಕ್ಕೆ ನಿಷೇಧ ಇಲ್ಲ. ತಂಬಾಕು ಉತ್ಪನ್ನಗಳಾದ ಬೀಡಿ, ಸಿಗರೇಟುಗಳ ಬಿಡಿ ಮಾರಾಟ ನಿಷೇಧ ಕುರಿತು ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆ ಈ ವಿಷಯದ ಬಗ್ಗೆ ಇನ್ನಷ್ಟು ಹೆಚ್ಚಿನ ಚರ್ಚೆ ಆಗಬೇಕು ಎಂಬ ನಿಲುವಿಗೆ ಬಂದಿದೆ.

‘ಯುವಕರು, ಕಾಲೇಜು ವಿದ್ಯಾರ್ಥಿಗಳು ಸಿಗರೇಟನ್ನು ಬಿಡಿ ಬಿಡಿಯಾಗಿ ಖರೀದಿಸುತ್ತಿದ್ದಾರೆ. ಹೀಗೆ ಮಾರಾಟವಾಗುವ ಸಿಗರೇಟುಗಳ ಮೇಲೆ ಸಚಿತ್ರ ಎಚ್ಚರಿಕೆ ಸಂದೇಶ, ಸಿಗರೇಟು ಆರೋಗ್ಯಕ್ಕೆ ಹಾನಿಕರ ಎಂಬ ಮಾಹಿತಿ ಇರುವುದಿಲ್ಲ. ಆದರೆ, ಮುಂದಿನ ಬಾರಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳುವವರೆಗೆ ರಾಜ್ಯದಲ್ಲಿ ಬಿಡಿ ಸಿಗರೇಟು ಮಾರಾಟ ನಿಷೇಧ ಇಲ್ಲ’ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಸಭೆಯ ನಂತರ ಹೇಳಿದರು.

ಸಿಗರೇಟು ಸೇರಿದಂತೆ ತಂಬಾಕು ಉತ್ಪನ್ನಗಳನ್ನು ನಿಷೇಧಿಸುವ ಮುನ್ನ ತಂಬಾಕು ಬೆಳೆಯುವ ರೈತರಿಗೆ ಪರ್ಯಾಯ ಜೀವನೋಪಾಯ ಕಲ್ಪಿಸುವ ಬಗ್ಗೆ ಚರ್ಚಿಸಬೇಕು. ಬಿಡಿ ಸಿಗರೇಟು ಮಾರಾಟ ನಿಷೇಧವನ್ನು ಹೇಗೆ ಅನುಷ್ಠಾನಕ್ಕೆ ತರಬೇಕು ಎಂಬ ಬಗ್ಗೆ ಪೊಲೀಸರ ಜೊತೆ ಮಾತುಕತೆ ನಡೆಸಬೇಕಿದೆ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.