ADVERTISEMENT

ಸಿದ್ದರಾಮಯ್ಯ ಒಬ್ಬ ಅಯೋಗ್ಯ: ಯಡಿಯೂರಪ್ಪ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2017, 19:30 IST
Last Updated 16 ಡಿಸೆಂಬರ್ 2017, 19:30 IST
ಸಿದ್ದರಾಮಯ್ಯ ಒಬ್ಬ ಅಯೋಗ್ಯ: ಯಡಿಯೂರಪ್ಪ ವಾಗ್ದಾಳಿ
ಸಿದ್ದರಾಮಯ್ಯ ಒಬ್ಬ ಅಯೋಗ್ಯ: ಯಡಿಯೂರಪ್ಪ ವಾಗ್ದಾಳಿ   

ಗಂಗಾವತಿ (ಕೊಪ್ಪಳ ಜಿಲ್ಲೆ): ‘ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬ ಅಯೋಗ್ಯ. ಮುಖ್ಯಮಂತ್ರಿ ಸ್ಥಾನದಲ್ಲಿರುವ ವ್ಯಕ್ತಿ ಹೇಗೆ ವರ್ತಿಸಬೇಕು ಎಂಬ ಕನಿಷ್ಠ ಪ್ರಜ್ಞೆ ಇಲ್ಲದ ನಾಲಾಯಕ್ ಸಿ.ಎಂ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಜರಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಲಂಚ ಪ್ರಕರಣದಲ್ಲಿ ನಾನು ಜೈಲಿಗೆ ಹೋಗಿದ್ದಾಗಿ ನನ್ನ ವಿರುದ್ಧ ಪದೇಪದೇ ಸುಳ್ಳು ಆರೋಪ ಮಾಡುತ್ತಿದ್ದಾರೆ. ಅವರಿಗೆ ತಾಕತ್ತಿದ್ದರೆ ಒಂದೇ ಒಂದು ದಾಖಲೆ ನೀಡಲಿ’ ಎಂದು ಸವಾಲು ಹಾಕಿದರು.

‘ನ್ಯಾಯಾಲಯವೇ ನನ್ನನ್ನು ಖುಲಾಸೆ ಮಾಡಿದೆ. ಇಂಥದ್ದರಲ್ಲಿ ಸಿದ್ದರಾಮಯ್ಯ ವಿನಾಕಾರಣ ಟೀಕೆ ಮಾಡುತ್ತಿದ್ದಾನೆ. ಅವನ ಮಾತು ಯಾರು ಕೇಳುತ್ತಾರೆ’ ಎಂದು ಏಕವಚನದಲ್ಲಿ ಮುಖ್ಯಮಂತ್ರಿಯನ್ನು ಟೀಕಿಸಿದರು.

ADVERTISEMENT

‘ನನ್ನ ಮೇಲೆ 40ಕ್ಕೂ ಹೆಚ್ಚು ಪ್ರಕರಣಗಳು ಇವೆ ಎಂದು ಸುಳ್ಳು ಹೇಳುತ್ತಿರುವ ಮುಖ್ಯಮಂತ್ರಿ, ಕನಿಷ್ಠ 10 ಪ್ರಕರಣಗಳ ಬಗ್ಗೆಯಾದರೂ ದಾಖಲೆ ನೀಡಲಿ. ಸ್ವತಃ ಸಿದ್ದರಾಮಯ್ಯನ ವಿರುದ್ಧ ಎಸಿಬಿಯಲ್ಲಿ 54 ಪ್ರಕರಣ ದಾಖಲಾಗಿವೆ. ಈ ಬಗ್ಗೆ ಬೇಕಿದ್ದರೆ ನಾನೇ ಒಂದೆರಡು ದಿನದಲ್ಲಿ ದಾಖಲೆ ಬಿಡುಗಡೆ ಮಾಡು
ತ್ತೇನೆ. ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಚುನಾವಣೋತ್ತರ ಸಮೀಕ್ಷೆಗಳ ಮಾಹಿತಿಯಿಂದ ಕಂಗೆಟ್ಟಿರುವ ಸಿದ್ದರಾಮಯ್ಯ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ’ ಎಂದರು.

‘ಸುಳ್ಳುಗಾರ ಸಿದ್ದರಾಮಯ್ಯನ ಜತೆಗೆ ಸ್ವತಃ ಕೆಪಿಸಿಸಿ ಅಧ್ಯಕ್ಷರೇ ಇಲ್ಲ. ಸಿ.ಎಂ ಮಹಾನ್ ವಂಚಕ. ಹೀಗಾಗಿ ಆತನ ಜತೆಗೆ ಹೋಗಲು ಯಾರೂ ಮನಸ್ಸು ಮಾಡುತ್ತಿಲ್ಲ. ಕೆಲವೇ ದಿನಗಳಲ್ಲಿ ಎಲ್ಲರೂ ಸಿದ್ದರಾಮಯ್ಯನನ್ನು ಕೈ ಬಿಡಲಿದ್ದಾರೆ’ ಎಂದು ಹೇಳಿದರು.

‘ಸುಳ್ಳು ಟೀಕೆ ಮಾಡುತ್ತ ಮಾನಹಾನಿಕಾರಕ ಹೇಳಿಕೆ ನೀಡುತ್ತಿರುವ ಮುಖ್ಯಮಂತ್ರಿ ವಿರುದ್ಧ ಪ್ರಕರಣ ದಾಖಲಿಸುತ್ತೀರಾ’ ಎಂಬ ಪ್ರಶ್ನೆಗೆ ಉತ್ತರಿಸಿದ ಯಡಿಯೂರಪ್ಪ, ‘ಕೇವಲ ಮೂರು ತಿಂಗಳಲ್ಲಿ ಅವನು ಮನೆಗೆ ಹೋಗ್ತಾನೆ. ಅವನ ವಿರುದ್ಧ ಪ್ರಕರಣ ದಾಖಲಿಸಿ ಮತ್ತೆ ಆತನನ್ನು ಚಾಲ್ತಿಯಲ್ಲಿಡಲು ಬಯಸಲಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.