ADVERTISEMENT

ಸ್ಥಿರಾಸ್ತಿ ಮಾರ್ಗಸೂಚಿ ದರ ನಿಗದಿಗೆ ಹೊಸ ವಿಧಾನ

ನೋಂದಣಿ, ಮುದ್ರಾಂಕ ಇಲಾಖೆಗೆ ಐಐಎಂಬಿ ನೆರವು

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2015, 20:03 IST
Last Updated 1 ಮಾರ್ಚ್ 2015, 20:03 IST

ಬೆಂಗಳೂರು: ಸ್ಥಿರಾಸ್ತಿಗಳ ಮಾರ್ಗಸೂಚಿ ದರ ನಿಗದಿಗೆ ಪೂರಕವಾಗಿ ಆಸ್ತಿಗಳ ಪರಿಶೀಲನೆಯನ್ನು ವೈಜ್ಞಾನಿಕವಾಗಿ  ನಡೆಸಲು ಮುಂದಾಗಿರುವ ನೋಂದಣಿ ಮತ್ತು ಮುದ್ರಾಂಕ ಇಲಾಖೆ, ಇದಕ್ಕಾಗಿ ಬೆಂಗಳೂರಿನ ಭಾರತೀಯ ನಿರ್ವಹಣಾ ಸಂಸ್ಥೆ­ಯೊಂದಿಗೆ (ಐಐಎಂಬಿ) ಒಪ್ಪಂದ ಮಾಡಿ­ಕೊಳ್ಳಲು ನಿರ್ಧರಿಸಿದೆ.

ಮುದ್ರಾಂಕ ಮತ್ತು ನೋಂದಣಿ ಇಲಾಖೆಯ ಮೂಲಗಳ ಪ್ರಕಾರ,   ಒಂದೆರಡು ದಿನಗಳಲ್ಲಿ ಐಐಎಂಬಿಯ ‘ಸೆಂಚುರಿ ರಿಯಲ್‌ ಎಸ್ಟೇಟ್‌ ರಿಸರ್ಚ್‌ ಇನಿಷಿಯೇಟಿವ್‌’ ಜೊತೆ ಒಪ್ಪಂದ ನಡೆಯಲಿದೆ. ಸದ್ಯ, ಇಲಾಖೆಯು ಸ್ಥಿರಾಸ್ತಿಗಳಿಗೆ ವಲಯವಾರು ಮಾರ್ಗಸೂಚಿ ದರವನ್ನು ನಿಗದಿಪಡಿಸುತ್ತಿದೆ. ಮುಂದೆ ಪ್ರತಿ ಸ್ಥಿರಾಸ್ತಿಗೂ ಪ್ರತ್ಯೇಕವಾಗಿ ಮಾರ್ಗ­ಸೂಚಿ ದರವನ್ನು ನಿಗದಿಪಡಿಸಲು ನೋಂದಣಿ ಇಲಾಖೆ ಯೋಚಿಸುತ್ತಿದೆ. ಆರಂಭಿಕ ಹಂತದಲ್ಲಿ ಇಲಾಖೆಯು ಬೆಂಗಳೂರಿ­ನ ಅಪಾರ್ಟ್‌ಮೆಂಟ್‌ ಕಟ್ಟಡ­ಗಳ ಮೇಲೆ ಮಾತ್ರ ಗಮನ­ಹರಿಸಲಿದೆ.

ಅಪಾರ್ಟ್‌ಮೆಂಟ್‌ಗಳು ಹೊಂದಿ­ರುವ ಸೌಲಭ್ಯಗಳನ್ನು (ಈಜುಕೊಳ, ಜಿಮ್‌, ಕ್ಲಬ್‌ ಹೌಸ್‌ ಇತ್ಯಾದಿ) ಆಧಾರವಾಗಿಟ್ಟುಕೊಂಡು ಆ ಆಸ್ತಿಗಳ ಮಾರ್ಗಸೂಚಿ ದರವನ್ನು ಇಲಾಖೆ ನಿಗದಿ­ಪಡಿಸಲಿದೆ. 25ಕ್ಕಿಂತ ಹೆಚ್ಚು ಮನೆಗಳನ್ನು ಹೊಂದಿರುವ ಅಪಾರ್ಟ್‌­ಮೆಂಟ್‌ಗಳು ಹೊಸ ಕಾರ್ಯವಿಧಾನದ ವ್ಯಾಪ್ತಿಗೆ ಬರಲಿವೆ ಎಂದು ಮೂಲಗಳು ತಿಳಿಸಿವೆ.

‘ರಾಜ್ಯದಲ್ಲಿ 12 ಸಾವಿರಕ್ಕೂ ಹೆಚ್ಚು ಅಪಾರ್ಟ್‌ಮೆಂಟ್‌ಗಳು ಇವೆ. ಐಐಎಂಬಿಯ ಸಂಶೋಧನಾ ಘಟಕದ ಬಳಿ ಬೆಂಗಳೂರಿನಲ್ಲಿರುವ ಅಪಾರ್ಟ್‌­ಮೆಂಟ್‌ಗಳ ಮಾಹಿತಿಗಳ ಸಂಗ್ರಹ ಇದೆ. ಇಲಾಖೆಯ ಬಳಿಯಲ್ಲಿ ಈ ಮಾಹಿತಿ­ಗಳಿಲ್ಲ. ಈ ಅಪಾರ್ಟ್‌ಮೆಂಟ್‌ಗಳಲ್ಲಿನ ಸೌಕರ್ಯಗಳನ್ನು ಪರಿಗಣಿಸಿ  ನಿಗದಿ­ಪಡಿಸುವ ಮಾರ್ಗಸೂಚಿ ದರ ಹೆಚ್ಚು ವೈಜ್ಞಾನಿಕವಾಗಿರಲಿದೆ’ ಎಂದು ಮೂಲಗಳು ಹೇಳಿವೆ.

ನಷ್ಟ ತಪ್ಪಿಸಲು ಸಹಕಾರಿ: ಏಪ್ರಿಲ್‌ ಅಥವಾ ಮೇ ತಿಂಗಳಿನಿಂದ ಅಳವಡಿಸಿಕೊಳ್ಳಲು ಉದ್ದೇಶಿಸ­-ಲಾಗಿರುವ ಈ ಹೊಸ ವಿಧಾನವು ಇಲಾಖೆಯ ವರಮಾನವನ್ನು ಸ್ವಲ್ಪ ಮಟ್ಟಿಗೆ ಹೆಚ್ಚಿಸಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ‘ಸ್ಥಿರಾಸ್ತಿಗಳ ಮಾರುಕಟ್ಟೆ ದರಕ್ಕೆ ಹೋಲಿಸಿದರೆ ಮಾರ್ಗಸೂಚಿ ದರದಲ್ಲಿ ಸಾಕಷ್ಟು ವ್ಯತ್ಯಾಸ ಇರುವ ಬಗ್ಗೆ ಸಾಕಷ್ಟು ದೂರುಗಳಿವೆ. ಎರಡೂ ದರಗಳ ನಡುವೆ ವ್ಯತ್ಯಾಸವಿರುವುದರಿಂದ ನೋಂದಣಿ ಮತ್ತು ಮುದ್ರಾಂಕ ಶುಲ್ಕದ ಮೂಲಕ ಇಲಾಖೆಗೆ ಬರುತ್ತಿರುವ ವರಮಾನದಲ್ಲಿ ನಷ್ಟವಾಗುತ್ತಿದೆ’ ಎಂದು ಅಧಿಕಾರಿಗಳು ಹೇಳಿದರು.

ನೋಂದಣಿ ಮತ್ತು ಮುದ್ರಾಂಕ ಶುಲ್ಕದ ಸಂಗ್ರಹಣೆಯ ಶೇಕಡ 75ರಷ್ಟು ವರಮಾನ ಬೆಂಗಳೂರು ನಗರದಿಂದಲೇ ಬರುತ್ತದೆ. ಹಾಗಾಗಿ, ಮಾರ್ಗಸೂಚಿ ದರವನ್ನು ಮೌಲ್ಯ­-ಮಾಪನ ಮಾಡುವ ಹೊಸ ವಿಧಾನವನ್ನು ರಾಜ್ಯ ರಾಜಧಾನಿಯಲ್ಲಿ ಮೊದಲಿಗೆ ಜಾರಿಗೊಳಿಸಲು ಅದು ನಿರ್ಧರಿಸಿದೆ. ಮುಂದಿನ ದಿನಗಳಲ್ಲಿ ಇದನ್ನು ರಾಜ್ಯದಾದ್ಯಂತ ವಿಸ್ತರಿಸಲಿದೆ.

ಸದ್ಯ, ನಗರದಲ್ಲಿರುವ ಅಪಾರ್ಟ್‌­ಮೆಂಟ್‌ಗಳ ಕುರಿತಾಗಿ ಐಐಎಂಬಿಯು ಇಲಾಖೆಗೆ ಮಾಹಿತಿ ನೀಡಲಿದೆ. ಇದರ ಹೊರತಾಗಿಯೂ, ರಾಜ್ಯದ­ಲ್ಲಿರುವ ಪ್ರತಿ ಆಸ್ತಿಯ ಮಾಹಿತಿಯನ್ನು ‘ಗ್ಲೋಬಲ್‌ ಪೊಸಿಷನಿಂಗ್‌ ಸಿಸ್ಟಂ’ (ಜಿಪಿಎಸ್‌) ಮತ್ತು ಗಣಕೀಕೃತ ದತ್ತಾಂಶಗಳ ಮೂಲಕ ಸಂಗ್ರಹಿಸಲು ಇಲಾಖೆ ಯೋಚಿಸುತ್ತಿದೆ.

ನಿರೀಕ್ಷೆಯಂತೆ ತಲುಪದ ಶುಲ್ಕ ಸಂಗ್ರಹಣೆ ಗುರಿ
ಬೆಂಗಳೂರಿನಲ್ಲಿ ಅಪಾರ್ಟ್‌­ಮೆಂಟ್‌ಗಳ ನಿರ್ಮಾಣ ಭಾರಿ ಪ್ರಮಾಣದಲ್ಲಿ ಹೆಚ್ಚಿದ್ದರೂ, ಪ್ರಸಕ್ತ ಹಣಕಾಸು ವರ್ಷದಲ್ಲಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸಂಗ್ರಹಣೆ ನಿರೀಕ್ಷೆಯಂತೆ ನಡೆದಿಲ್ಲ. ನೋಂದಣಿ ಮತ್ತು ಮುದ್ರಾಂಕ ಶುಲ್ಕದಿಂದ ₹ 7,450 ಕೋಟಿ ಸಂಗ್ರಹಿಸುವ ಗುರಿ ಹೊಂದಲಾಗಿತ್ತು. ಆದರೆ, ಇದುವರೆಗೆ ₹ 6,196 ಕೋಟಿ ಮಾತ್ರ ಸಂಗ್ರಹವಾಗಿದೆ. ಮಾರ್ಚ್‌ ತಿಂಗಳ ಒಳಗಾಗಿ ₹ 700ರಿಂದ 730 ಕೋಟಿ ಸಂಗ್ರಹವಾಗುವ ನಿರೀಕ್ಷೆ ಇದೆ.

‘ನಿಗದಿ ಪಡಿಸಿದ್ದ ಗುರಿ ಅವಾಸ್ತವಿಕ.  ಈ ಆರ್ಥಿಕ ವರ್ಷದಲ್ಲಿ ರಿಯಲ್‌ ಎಸ್ಟೇಟ್‌ ವಲಯವು ಶೇ 19ರಷ್ಟು ಅಭಿವೃದ್ಧಿಯಾಗಲಿದೆ (ಕಳೆದ ವರ್ಷಕ್ಕಿಂದ ಶೇ 4ರಷ್ಟು ಹೆಚ್ಚು) ಎಂದು  ನಿರೀಕ್ಷಿಸಲಾಗಿತ್ತು. ಆದರೆ, ಕಟ್ಟಡ ನಿರ್ಮಾಣ ಕ್ಷೇತ್ರವು ಮರಳಿನ ಕೊರತೆ, ಸಿಮೆಂಟ್‌ ಮತ್ತು ಉಕ್ಕಿನ ಬೆಲೆ ಏರಿಕೆಗಳ ಸಮಸ್ಯೆ ಎದುರಿಸುತ್ತಿರುವ ಕಾರಣದಿಂದ ಅಷ್ಟು ಪ್ರಮಾಣದ ಅಭಿವೃದ್ಧಿ ಸಾಧ್ಯವಿಲ್ಲ’ ಎಂದು ಅಧಿಕಾರಿಗಳು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT