ADVERTISEMENT

ಹಿನ್ನೋಟ 2016

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2016, 20:07 IST
Last Updated 22 ಡಿಸೆಂಬರ್ 2016, 20:07 IST
ಹಿನ್ನೋಟ 2016
ಹಿನ್ನೋಟ 2016   

ಫೆಬ್ರವರಿ  20-21

ತೈಲ ಬೆಲೆ ಏರಿಕೆ ನೀತಿ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ವಿವಿಧ ಕಾರ್ಮಿಕ ಸಂಘಟನೆಗಳು ದೇಶದಾದ್ಯಂತ ಕರೆ ನೀಡಿದ್ದ ಎರಡು ದಿನಗಳ ಬಂದ್‌ಗೆ ನಗರದ ಆಟೊ ಚಾಲಕರು, ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ನೌಕರರು ಬೆಂಬಲ ವ್ಯಕ್ತಪಡಿಸಿದ್ದರು. ಅದರಿಂದ ನಗರದಲ್ಲಿ ಆಟೊ ಹಾಗೂ ಬಸ್‌ ಸಂಚಾರ ಬಂದ್‌ ಆಗಿ, ಎರಡು ದಿನ ಇಡೀ ನಗರವೇ ಸ್ತಬ್ಧವಾಗಿತ್ತು.

ಏಪ್ರಿಲ್  18-19
ಗಾರ್ಮೆಂಟ್ಸ್‌ ನೌಕರರ ಪ್ರತಿಭಟನೆ
ನೂತನ ಭವಿಷ್ಯ ನಿಧಿ (ಪಿಎಫ್) ನೀತಿ ಖಂಡಿಸಿ ಸಿದ್ಧ ಉಡುಪು ಕಾರ್ಖಾನೆ ನೌಕರರು ನಡೆಸಿದ್ದ ಹೋರಾಟ ಹಿಂಸಾರೂಪಕ್ಕೆ ತಿರುಗಿತ್ತು. ಪ್ರತಿಭಟನಾಕಾರರು, ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆಸಿದ್ದರು.

ಪೀಣ್ಯ ಬಳಿ ನಾಲ್ಕು ಬಸ್‌ಗಳಿಗೆ ಬೆಂಕಿ ಹಚ್ಚಿ, ಪೊಲೀಸ್‌ ಜೀಪು ಜಖಂಗೊಳಿಸಿದ್ದರು. ಗಲಾಟೆಯಲ್ಲಿ11 ಪೊಲೀಸರು ಹಾಗೂ 15 ಕಾರ್ಮಿಕರು ಗಾಯಗೊಂಡಿದ್ದರು.

ADVERTISEMENT

ಮೇ
ಟ್ರ್ಯಾಕ್ಟರ್ ಚಲೋ
ಶಾಶ್ವತ ನೀರಾವರಿ ಯೋಜನೆ ಜಾರಿಗೆ ಆಗ್ರಹಿಸಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಹಾಗೂ ತುಮಕೂರು ಭಾಗಗಳ ಸಾವಿರಾರು ರೈತರು, ಟ್ರ್ಯಾಕ್ಟರ್‌ ಚಲೋ ಮೂಲಕ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದರು.

ವಿಂಡ್ಸರ್‌ ಮ್ಯಾನರ್ ಸೇತುವೆ ಬಳಿ ತಮ್ಮನ್ನು ತಡೆದ ಪೊಲೀಸರ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದರು. ಆಗ ಲಾಠಿ ಪ್ರಹಾರ ನಡೆದು, 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
 

ಜೂನ್‌ 4
ಚರ್ಚೆಯಾದ ಪೊಲೀಸ್ ಪ್ರತಿಭಟನೆ
ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪೊಲೀಸರು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದರು.

ಈ ಹೋರಾಟ ಹತ್ತಿಕ್ಕಲು ಆಯಾ ವಿಭಾಗಗಳಲ್ಲಿ ಸಭೆ ನಡೆಸಿದ್ದ ಹಿರಿಯ ಅಧಿಕಾರಿಗಳು, ಪ್ರತಿಭಟನೆ ಮಾಡದಂತೆ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದರು.  ಆ ದಿನ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಬೇಕು ಎಂದು  ಡಿಜಿಪಿ ಸುತ್ತೋಲೆ ಹೊರಡಿಸಿದ್ದರಿಂದ ಯಾರೊಬ್ಬರೂ ಪ್ರತಿಭಟನೆಗೆ ಹೋಗಿರಲಿಲ್ಲ. ಜತೆಗೆ ಪ್ರತಿಭಟನೆ ನಡೆಸಲು ಪೊಲೀಸರಿಗೆ ಪ್ರಚೋದನೆ ನೀಡಿದ್ದ ಆರೋಪದಡಿ ಅಖಿಲ ಕರ್ನಾಟಕ ಪೊಲೀಸ್‌ ಮಹಾಸಂಘದ ಅಧ್ಯಕ್ಷ ವಿ.ಶಶಿಧರ್‌ ಅವರನ್ನು ರಾಜದ್ರೋಹ ಪ್ರಕರಣದಡಿ ಬಂಧಿಸಲಾಗಿತ್ತು.

ಜುಲೈ 25
ಸಾರಿಗೆ ನೌಕರರ ಮುಷ್ಕರ
ವೇತನ ಪರಿಷ್ಕರಣೆಗೆ ಆಗ್ರಹಿಸಿ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ನಿಗಮದ  ನೌಕರರು ಬಸ್‌ಗಳ ಸೇವೆ ಸ್ತಬ್ಧಗೊಳಿಸಿ ಮೂರು ದಿನ ಮುಷ್ಕರ ನಡೆಸಿದ್ದರು. ಕೊನೆಗೆ ಸರ್ಕಾರ ಶೇ 12.5ರಷ್ಟು ವೇತನ ಹೆಚ್ಚಳ ಮಾಡಿದ್ದರಿಂದ ನೌಕರರು ಮುಷ್ಕರ ಹಿಂಪಡೆದಿದ್ದರು.

ಆಗಸ್ಟ್ 16
ಆಮ್ನೆಸ್ಟಿ ವಿರುದ್ಧ ಪ್ರತಿಭಟನೆ
ಮಿಲ್ಲರ್‌ ರಸ್ತೆಯ ಥಿಯೋಲಾಜಿಕಲ್‌ ಕಾಲೇಜಿನಲ್ಲಿ ಆಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾ ಸಂಸ್ಥೆ ಆಯೋಜಿಸಿದ್ದ  ‘ಬ್ರೋಕನ್‌್ ಫ್ಯಾಮಿಲೀಸ್‌’ ಕಾರ್ಯಕ್ರಮದಲ್ಲಿ  ಭಾರತೀಯ ಸೇನೆ ವಿರುದ್ಧ ಅವಹೇಳನಕಾರಿ ಘೋಷಣೆ ಕೂಗಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.

ಆಮ್ನೆಸ್ಟಿ ಸಂಸ್ಥೆ ನಿಷೇಧಕ್ಕೆ ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ತೀವ್ರ ಸ್ವರೂಪದ ಪ್ರತಿಭಟನೆ ನಡೆಸಿದ್ದರು. ಕಮಿಷನರ್‌ ಕಚೇರಿಗೆ ನುಗ್ಗಲು ಯತ್ನಿಸಿದ್ದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿ,  20ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದರು.

ಸೆಪ್ಟೆಂಬರ್‌ 12
ಕಾವೇರಿ ವಿವಾದ

ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುವಂತೆ ಸುಪ್ರೀಂಕೋರ್ಟ್‌್ ನೀಡಿದ್ದ ಆದೇಶ ಖಂಡಿಸಿ ಹಲವು ಸಂಘಟನೆಗಳ ಸದಸ್ಯರು ಬೀದಿಗಿಳಿದು ಹೋರಾಟ ನಡೆಸಿದ್ದರು.  ಕೆಪಿಎನ್‌ ಟ್ರಾವೆಲ್ಸ್‌ನ 42 ಬಸ್‌ಗಳು, ಪೊಲೀಸ್‌ ಜೀಪು, ತಮಿಳುನಾಡಿನ ಲಾರಿಗಳು ಸೇರಿದಂತೆ ಸುಮಾರು 90 ವಾಹನಗಳು ಬೆಂಕಿಗೆ ಆಹುತಿಯಾಗಿದ್ದವು.

ಗಲಾಟೆ ನಿಯಂತ್ರಣಕ್ಕಾಗಿಯೇ ನಗರದ 10 ಠಾಣೆಗಳ ವ್ಯಾಪ್ತಿಯಲ್ಲಿ ಕರ್ಫ್ಯೂ ಹಾಗೂ ನಗರದಾದ್ಯಂತ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು.
ಗಲಾಟೆ ವೇಳೆ ಪೊಲೀಸರ ಗುಂಡಿಗೆ ಸಿಂಗೋನಹಳ್ಳಿಯ ಉಮೇಶ್‌ ಗೌಡ  ಬಲಿಯಾದರೆ, ಲಾಠಿ ಏಟಿನಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಕಟ್ಟಡದಿಂದ ಬಿದ್ದು ಬ್ಯಾಡರಹಳ್ಳಿಯ ಕುಮಾರ್‌ ಎಂಬುವರು ಮೃತಪಟ್ಟಿದ್ದರು.  ಈ ಗಲಾಟೆ ಸಂಬಂಧ ಪೊಲೀಸರು 1,800 ಮಂದಿಯನ್ನು ಬಂಧಿಸಿದ್ದರು. ಅದರಲ್ಲಿ ಕೆಲವರು ಈಗಲೂ ಜೈಲಿನಲ್ಲೇ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.