ADVERTISEMENT

ಹೆಗಲ ಮೇಲೆ ನಿರೀಕ್ಷೆಯ ಭಾರ

ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಮೊದಲ ವರ್ಷದ ರಾಜಕೀಯ ಜಮಾ ಖರ್ಚು ಮೌಲ್ಯಮಾಪನ

ಪ್ರೊ. ಸಂದೀಪ್ ಶಾಸ್ತ್ರಿ
Published 25 ಮೇ 2015, 19:30 IST
Last Updated 25 ಮೇ 2015, 19:30 IST

ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ವರ್ಷ ಪೂರೈಸುತ್ತಿರುವ ಸಂದರ್ಭವು  ಸರ್ಕಾರದ ರಾಜಕೀಯ ಜಮಾಖರ್ಚು ಪಟ್ಟಿಯನ್ನು ವಿಶ್ಲೇಷಿಸುವುದಕ್ಕೆ ಸಕಾಲ. ಸರ್ಕಾರದ ಪ್ರಮುಖ ಸಾಧನೆ ಹಾಗೂ  ವೈಫಲ್ಯಗಳು ಏನು? ಕಾರ್ಯನಿರ್ವಹಣೆಯಲ್ಲಿ ಕೊರತೆ ಇದೆಯೇ ಅಥವಾ ದೊಡ್ಡ ಮಟ್ಟದಲ್ಲಿ ಸಾಧನೆ ಕಾಣುತ್ತಿದೆಯೇ? ರಾಜಕೀಯ ವೈಫಲ್ಯಗಳನ್ನು ಅತ್ಯಂತ ನಾಜೂಕಿಗಾಗಿ ಮರೆಮಾಚಲಾಗಿದೆಯೇ? ಅಥವಾ ದೀರ್ಘಾವಧಿ ಸಾಮಾಜಿಕ–ಆರ್ಥಿಕ ಹೂಡಿಕೆಗಳು ಬರುವ ವರ್ಷಗಳಲ್ಲಿ ಲಾಭ ತರಲಿವೆಯೇ?

ಈ ಎಲ್ಲ ಪ್ರಶ್ನೆಗಳಿಗೆ ನಾವು ಭಾರತದ ರಾಜಕೀಯದ ವಿದ್ಯಾರ್ಥಿಗಳಾಗಿ ಉತ್ತರ ಕಂಡುಕೊಳ್ಳಬೇಕಾಗುತ್ತದೆ. ವರ್ಷದ ಹಿಂದೆ ಮೋದಿ ಅವರು ದೇಶದ ಅಧಿಕಾರ ಚುಕ್ಕಾಣಿ ಹಿಡಿದ ಸಂದರ್ಭವು ದೇಶದ ರಾಜಕೀಯ ಇತಿಹಾಸದಲ್ಲಿ ವಿಶೇಷ ಕ್ಷಣವಾಗಿತ್ತು. ಕಾಲು ಶತಮಾನದ ಬಳಿಕ ಕೇಂದ್ರದಲ್ಲಿ ಮೊದಲ ಬಾರಿ ಪಕ್ಷವೊಂದು   ಸ್ವಂತ ಬಲದ ಮೇಲೆ ಸರ್ಕಾರ ರಚಿಸುವಂತಾಯಿತು. ಅಲ್ಲದೇ ಚುನಾವಣಾ ಪ್ರಚಾರ ಕೂಡ  ಅಬ್ಬರದಿಂದ ಕೂಡಿತ್ತು.  ಸಾರ್ವಜನಿಕ ವೇದಿಕೆಗಳು ಹಾಗೂ ಮಾಹಿತಿ ಪ್ರಸಾರ ಸಾಧನಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಯಿತು.

ಮೋದಿ ಸರಿಯಾದ ಸಮಯದಲ್ಲಿ ಅಖಾಡಕ್ಕೆ ಇಳಿದಿದ್ದರು. ಸೂಕ್ತ ಸಂದರ್ಭದಲ್ಲಿ ಸರಿಯಾದ ರಾಜಕೀಯ ಹೆಜ್ಜೆ ಇಟ್ಟಿರುವುದಾಗಿ  ಅವರು ಹೇಳಿಕೊಂಡಿದ್ದರು. ಜನಪ್ರಿಯತೆ ಕಳೆದುಕೊಂಡು ದಿಕ್ಕುಗಾಣದ ಸ್ಥಿತಿಯಲ್ಲಿದ್ದ ಯುಪಿಎ ಸರ್ಕಾರವು ಯಾವಾಗ ತನ್ನ ಅವಧಿ ಮುಗಿಯುವುದೋ ಎಂದು ಕೈಚೆಲ್ಲಿ ಕೂತಿದ್ದ ಸಂದರ್ಭವು  ಮೋದಿ ಅವರ ಪಾಲಿಗೆ ವರವೇ ಆಯಿತು.2014ರ ಚುನಾವಣೆಯು ಭರಪೂರ ಆಶ್ವಾಸನೆಗಳಿಗೆ ಸಾಕ್ಷಿಯಾಯಿತು. ನಿರೀಕ್ಷೆಗಳ ಮಹಾಪೂರವೇ ಇತ್ತು. ‘ ಒಳ್ಳೆಯ ದಿನಗಳು ಬರುತ್ತಿವೆ’ ಎನ್ನುವ ಘೋಷವಾಕ್ಯವು ಬಿಜೆಪಿಯ ಸೂಚಕ ರಾಗವಾಯಿತು.

ಮೋದಿ ಅವರು ಬಿಜೆಪಿ ಸಂಸದೀಯ ಪಕ್ಷದ ನಾಯಕನಾಗಿ ಆಯ್ಕೆಯಾದಾಗ ಮಾಡಿದ ಭಾವನಾತ್ಮಕ ಭಾಷಣ,   ಸಾರ್ಕ್‌ ದೇಶಗಳ ಮುಖಂಡರು ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಬರುವಂತೆ ಮಾಡಿದ್ದು,  ಜನರೊಂದಿಗೆ ನೇರವಾಗಿ ಸಂಪರ್ಕಿಸಲು ಲಭ್ಯವಿರುವ ವೇದಿಕೆಗಳನ್ನು ಜಾಣ್ಮೆಯಿಂದ ಬಳಸಿಕೊಂಡಿದ್ದು... ಈ ಎಲ್ಲವೂ ಹಿತವಾಗಿ ಕಂಡವು. ಈ ಹಿಂದಿನ ಯುಪಿಎ ಸರ್ಕಾರದಲ್ಲಿ ಕಾಣದ ಈ ಅಂಶಗಳು ಜನರಿಗೆ ಇಷ್ಟವಾದವು.

hಹೊಸ ಸರ್ಕಾರ ಹಾಗೂ ನಾಯಕತ್ವದಲ್ಲಿ osರಾಜಕೀಯವಾಗಿ ದೃಢವಾದ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಇದೆ ಎಂಬ ಭಾವನೆಯು ರಾಜಕೀಯವಾಗಿ ಅನುಕೂಲವೇ ಆಯಿತು. ಆಡಳಿತದ ಆರಂಭಿಕ ದಿನಗಳಲ್ಲಿ ಪಕ್ಷದ ಸಾಂಸ್ಥಿಕ ಸ್ವರೂಪದಲ್ಲಿ ನಿರ್ಣಾಯಕ ಬದಲಾವಣೆಗಳು ಆದವು. ಆ ಮೂಲಕ ನಾಯಕತ್ವವು ತನ್ನ ಸ್ಥಾನವನ್ನು ಇನ್ನಷ್ಟು ಗಟ್ಟಿಮಾಡಿಕೊಂಡಿತು.

ಮುಗಿದ ‘ಮಧುಚಂದ್ರ’: ಸರ್ಕಾರದ ‘ಮಧುಚಂದ್ರ’ ಅವಧಿ ಮುಗಿದಿದೆ.  ‘ಒಳ್ಳೆಯ ದಿನಗಳನ್ನು’ ಅತ್ಯಂತ ತಾಳ್ಮೆಯಿಂದ ಎದುರು ನೋಡುವ ಮನಸ್ಥಿತಿಯನ್ನು ನಿಧಾನವಾಗಿ ಅಸಹನೆ ಆಕ್ರಮಿಸಿಕೊಳ್ಳುತ್ತಿದೆ.ಆಶ್ವಾಸನೆಗಳು ಜನರನ್ನು ಪುಳಕಿತರನ್ನಾಗಿಸಬಹುದು. ಆದರೆ‌‌ಅವುಗಳನ್ನು  ಕಾರ್ಯರೂಪಕ್ಕೆ ತರಬೇಕಾಗಿರುವುದು ವಾಸ್ತವಿಕ ವಿಚಾರವಾಗಿದೆ.

ಸರ್ಕಾರದ ಸಾಧನೆಯನ್ನು ಅಳೆಯುವುದಕ್ಕೆ 1 ವರ್ಷ ತುಂಬ ಸಣ್ಣ ಅವಧಿಯಾಯಿತು ಎಂದು ಅನೇಕರು ವಾದಿಸಿದ್ದಾರೆ.  ಸ್ವತಃ ಪ್ರಧಾನಿ ಕೂಡ ಇದೇ ಮಾತು ಹೇಳಿದ್ದರು. ‘ನಮ್ಮ ಸರ್ಕಾರದ ಸಾಧನೆಯನ್ನು ಐದು ವರ್ಷಗಳ ಬಳಿಕ ಮೌಲ್ಯಮಾಪನ ಮಾಡಬೇಕು’ ಎಂದು ಅಧಿಕಾರ ಸ್ವೀಕರಿಸುವಾಗ ಅವರು ನುಡಿದಿದ್ದರು.

ವಿದೇಶಾಂಗ ನೀತಿ: ಹೊಸ ನಾಯಕತ್ವಕ್ಕೆ ವಿದೇಶಾಂಗ ನೀತಿಯಲ್ಲಿ ಅನುಭವ ಇಲ್ಲ ಎಂದು ಅನೇಕರು  ಭಾವಿಸಿದ್ದರು. Adreಆದರೆ ಈ ವಿಷಯದಲ್ಲಿ ಸರ್ಕಾರ ಹಾಗೂ ನಾಯಕತ್ವ ಸಕ್ರಿಯವಾಗಿದೆ ಎನ್ನುವುದು  ಎದ್ದು ಕಾಣುತ್ತದೆ.  ನಾಯಕತ್ವದ ರಾಜಕೀಯ ಕಾರ್ಯವೈಖರಿ ಹಾಗೂ ಸಂವಹನ ವೇದಿಕೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಕಲೆ ರಾಜಕೀಯವಾಗಿ ಹೆಚ್ಚು ಪ್ರಯೋಜಕಾರಿಯಾಗಿದೆ.
ಪ್ರಧಾನಿ ಮೋದಿ ಅವರು ದೇಶದಾದ್ಯಂತವೂ ಸಂಚರಿಸುತ್ತಾರೆ. ಅವರು ತಮ್ಮ ಮಾತಿನ ಶೈಲಿಯಿಂದಾಗಿ ಸದಾ ಜನರ ಗಮನ ಸೆಳೆಯುತ್ತಾರೆ. ಸಾಮಾಜಿಕ ಹಾಗೂ ಆರ್ಥಿಕ ವಲಯಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬದಲಾವಣೆಯಾಗುವ ಬಗ್ಗೆ ಅಪಾರ ನಿರೀಕ್ಷೆ ಇತ್ತು. ಆದರೆ ಇದು ಈಡೇರಲಿಲ್ಲ ಎನ್ನುವ ಅಸಹನೆ ಕಾಣುತ್ತಿದೆ.

ಅರುಣ್‌ ಶೌರಿ ಅವರು ಸರ್ಕಾರದ ಒಂದು ವರ್ಷದ ಆಡಳಿತದ ಬಗ್ಗೆ ನೀಡಿರುವ ಪ್ರತಿಕ್ರಿಯೆಯಲ್ಲಿ, ತಕ್ಷಣಕ್ಕೆ ಉದ್ಯಮ ಸ್ನೇಹಿ ನೀತಿಯನ್ನು ಬಯಸುವ ಕಾರ್ಪೊರೇಟ್‌್ ಜಗತ್ತಿನ ‘ಧ್ವನಿ’ಸ್ಪಷ್ಟವಾಗಿ ಕೇಳುತ್ತದೆ.   ಕೇಂದ್ರದ ಬಿಜೆಪಿ ಸರ್ಕಾರವು ಶ್ರೀಮಂತರ ಪರವಾಗಿ ಇದೆ ಎನ್ನುವ ಸಾರ್ವಜನಿಕ ಗ್ರಹಿಕೆಯು ದೆಹಲಿ ವಿಧಾನಸಭೆ ಚುನಾವಣೆಯಲ್ಲಿ  ಎಎಪಿ ಕೈಯಲ್ಲಿ ಬಿಜೆಪಿ ಹೀನಾಯವಾಗಿ ಸೋಲುವುದಕ್ಕೆ ಕಾರಣವಾಯಿತು. ಸರ್ಕಾರವು ತನ್ನ ಆಶ್ವಾಸನೆಗಳನ್ನು ಕಾರ್ಯರೂಪಕ್ಕೆ ತರಬಹುದೆಂದು ಭಾರತದ ‘ಮಹತ್ವಾಕಾಂಕ್ಷಿ’ ಯುವ ಪೀಳಿಗೆ ಕೂಡ ನಿರೀಕ್ಷೆ ಇಟ್ಟುಕೊಂಡಿತ್ತು.

ಕೇಂದ್ರದಲ್ಲಿ ಯಾವುದೇ ಸರ್ಕಾರವಿರಲಿ, ಸಮಾಜದ ಎಲ್ಲ ವರ್ಗಗಳ ಶ್ರೇಯೋಭಿವೃದ್ಧಿಗೆ  ಸಮಗ್ರ ಕಾರ್ಯಸೂಚಿಯನ್ನು ರೂಪಿಸಬೇಕಾಗುತ್ತದೆ. ಕಳೆದ ಒಂದು ವರ್ಷದಲ್ಲಿ ಸರ್ಕಾರವು, ಎಲ್ಲರನ್ನು ಒಳಗೊಂಡ ಅಭಿವೃದ್ಧಿಯನ್ನು ಬಿಂಬಿಸುವ ಎಷ್ಟೋ ಅವಕಾಶಗಳನ್ನು ಕಳೆದುಕೊಂಡಿದೆ. ಮೂಲಭೂತವಾದಿಗಳ ಗುಂಪು ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ವಾಗ್ದಾಳಿ ನಡೆಸಿದ ಸಂದರ್ಭದಲ್ಲಿ ಸಚಿವರು ಹಾಗೂ ಚುನಾಯಿತ ಜನಪ್ರತಿನಿಧಿಗಳು ಉದ್ದೇಶಪೂರ್ವಕವಾಗಿ ಸುಮ್ಮನಿದ್ದರು ಅಥವಾ ತಡವಾಗಿ ಪ್ರತಿಕ್ರಿಯೆ ನೀಡಿದ್ದರು.  ಇದರಿಂದ ಪರಿಸ್ಥಿತಿ ತಿಳಿಯಾಗುವ ಬದಲು ಇನ್ನಷ್ಟು ಹಾಳಾಯಿತು.

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ ನಿಜವಾದ ಸಾಧನೆ ಹಾಗೂ ವೈಫಲ್ಯಗಳು ಏನು ಎನ್ನುವುದು ಎರಡನೇ ವರ್ಷದಲ್ಲಿ ಗೊತ್ತಾಗಲಿದೆ. ಮೊದಲ ವರ್ಷದಲ್ಲಿ ಕಾದು ನೋಡಬೇಕು. ಆದರೆ ಎರಡನೇ ವರ್ಷದಲ್ಲಿ ಈ ವಿನಾಯ್ತಿ ಸಿಗುವುದಿಲ್ಲ.

ಲೇಖಕ ಸಹಕುಲಪತಿ, ಜೈನ್‌ ವಿಶ್ವವಿದ್ಯಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT