ADVERTISEMENT

ಹೆಚ್ಚುವರಿ ಶಿಕ್ಷಕರ ಮರುನಿಯೋಜನೆ ಅಬಾಧಿತ

​ಪ್ರಜಾವಾಣಿ ವಾರ್ತೆ
Published 20 ಜುಲೈ 2016, 19:30 IST
Last Updated 20 ಜುಲೈ 2016, 19:30 IST
ಹೆಚ್ಚುವರಿ ಶಿಕ್ಷಕರ ಮರುನಿಯೋಜನೆ ಅಬಾಧಿತ
ಹೆಚ್ಚುವರಿ ಶಿಕ್ಷಕರ ಮರುನಿಯೋಜನೆ ಅಬಾಧಿತ   

ಬೆಂಗಳೂರು: ಸರ್ಕಾರಿ ಶಾಲೆಗಳ ಹೆಚ್ಚುವರಿ ಶಿಕ್ಷಕರ ಮರುನಿಯೋಜನೆ ಪ್ರಕ್ರಿಯೆ ಮುಂದುವರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಹೆಚ್ಚುವರಿ ಶಿಕ್ಷಕರ ಮರುನಿಯೋಜನೆ ವಿಷಯ ಕುರಿತು ಚರ್ಚೆ ನಡೆಯಿತು.  ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಶಿಕ್ಷಕರು ಹಾಗೂ ಪೋಷಕರು  ಪ್ರತಿಭಟನೆ ನಡೆಸುತ್ತಿದ್ದಾರೆ. ಶಾಲೆ ಮುಚ್ಚಲು ಸರ್ಕಾರ ಮುಂದಾಗಿದೆ ಎಂಬ ಆಪಾದನೆ ಬರುತ್ತಿದೆ  ಎಂದು ಬಹುತೇಕ ಸಚಿವರು ಮುಖ್ಯಮಂತ್ರಿ ಗಮನ ಸೆಳೆದರು.

ಪ್ರಾಥಮಿಕ ಶಿಕ್ಷಣ ಸಚಿವ ತನ್ವೀರ್‌ ಸೇಠ್‌ ಅವರು ಸಮರ್ಥನೆ ಬಳಿಕ ಮಾತನಾಡಿದ ಸಿದ್ದರಾಮಯ್ಯ ಅವರು, ಶಿಕ್ಷಕರು, ಪೋಷಕರ ವಿರೋಧ ಇರುವುದರಿಂದ ಎಚ್ಚರಿಕೆಯಿಂದ ಹೆಜ್ಜೆ ಇಡುವಂತೆ ಸೂಚಿಸಿದರು ಎಂದು ತಿಳಿದುಬಂದಿದೆ. 

ಇದಕ್ಕೆ ಮುನ್ನ ಸಭೆಗೆ ವಿವರ ನೀಡಿದ ಪ್ರಾಥಮಿಕ ಶಿಕ್ಷಣ ಸಚಿವ ತನ್ವೀರ್‌ ಸೇಠ್‌ ಅವರು, ಶಿಕ್ಷಕರ ನೇಮಕಾತಿ ಪ್ರಕ್ರಿಯೆ ವಿಳಂಬವಾಗಿರುವುದರಿಂದ ಶಾಲೆಗಳಲ್ಲಿ ಶಿಕಕರ ಕೊರತೆ ಇದೆ. ಬಹುತೇಕ ಶಾಲೆಗಳಲ್ಲಿ ಮಕ್ಕಳ ಶಿಕ್ಷಕ ಸರಾಸರಿ ಅನುಪಾತ (30:1) ಕ್ಕಿಂತ ಹೆಚ್ಚಿದೆ. ಹೆಚ್ಚುವರಿ ಎಂದು ಪರಿಗಣಿಸಿದ ಶಿಕ್ಷಕರನ್ನು ಕೌನ್ಸೆಲಿಂಗ್‌ ಮೂಲಕ ಮರುನಿಯೋಜನೆ ಮಾಡಲಾಗುತ್ತಿದೆ ಎಂದು ವಿವರಿಸಿದರು.

ನಗರ ಪ್ರದೇಶದಿಂದ ಗ್ರಾಮೀಣ ಪ್ರದೇಶಕ್ಕೆ ಹೋಗಲು ಇಚ್ಛಿಸದ ಶಿಕ್ಷಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪ್ರಕ್ರಿಯೆ ಮುಂದುವರಿಸಿದರೆ ಶಿಕ್ಷಕರ ಕೊರತೆಗೆ ತಾತ್ಕಾಲಿಕ ಪರಿಹಾರ ಸಿಗಲಿದೆ  ಎಂದು ಸಚಿವ ಸೇಠ್‌ ಹೇಳಿದರು ಎಂದು ಗೊತ್ತಾಗಿದೆ. ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ನಡೆಯುತ್ತಿರುವ ಹೆಚ್ಚುವರಿ ಶಿಕ್ಷಕರ ಮರುನಿಯೋಜನೆ ಪ್ರಕ್ರಿಯೆ ಮುಂದುವರಿಸಲು ಸಭೆ ಒಮ್ಮತದ ತೀರ್ಮಾನ ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ.

ಮಲೆನಾಡು ಭಾಗಕ್ಕೆ ವಿನಾಯಿತಿ

ಶಿರಸಿ: ಸರ್ಕಾರಿ ಶಾಲೆಗಳಲ್ಲಿ ಹೆಚ್ಚುವರಿ ಶಿಕ್ಷಕರ ಮರು ನಿಯೋ ಜನೆ ಪ್ರಕ್ರಿಯೆಯಲ್ಲಿ ಮಲೆನಾಡಿನ ಜಿಲ್ಲೆಗಳಿಗೆ ಅಲ್ಪ ವಿನಾಯಿತಿ ನೀಡಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಹೊಸದಾಗಿ ಸುತ್ತೋಲೆ ಹೊರಡಿಸಿದ್ದಾರೆ.

ಶಿವಮೊಗ್ಗ, ಕೊಡಗು, ಚಿಕ್ಕಮಗ ಳೂರು, ಹಾಸನ ಮತ್ತು ಶಿರಸಿ ಶೈಕ್ಷಣಿಕ ಜಿಲ್ಲೆಗಳಿಗೆ ಈ ವಿನಾಯಿತಿ ಅನ್ವಯವಾಗುತ್ತದೆ. ಇಲ್ಲಿನ ಡಿಡಿಪಿಐ ಕಚೇರಿಗೆ ಬುಧವಾರ ಬಂದಿರುವ ಸುತ್ತೋಲೆಯಲ್ಲಿ, 61ರಿಂದ 120 ಮಕ್ಕಳ ದಾಖಲಾತಿ ಇರುವ ಸಾಮಾನ್ಯ ಶಾಲೆಗಳಲ್ಲಿ ಹೆಚ್ಚುವರಿ ಶಿಕ್ಷಕರನ್ನು ಗುರುತಿಸುವಾಗ ಈಗಾಗಲೇ ನೀಡಿರುವ ಶಿಕ್ಷಕರ ಸಂಖ್ಯೆ ಜೊತೆಗೆ ಇನ್ನೊಬ್ಬರು ಶಿಕ್ಷಕರನ್ನು ಉಳಿಸಿಕೊಳ್ಳಲು ಸೂಚಿಸಲಾಗಿದೆ. ಇದರಿಂದ ಒಬ್ಬರು ಮುಖ್ಯ ಶಿಕ್ಷಕರು, ಮೂವರು ಸಹ ಶಿಕ್ಷಕರ ಜೊತೆಗೆ ಇನ್ನೊಬ್ಬರು ಶಿಕ್ಷಕರನ್ನು ಈ ಶಾಲೆಗಳಲ್ಲಿ ಉಳಿಸಿಕೊಳ್ಳಬಹುದಾಗಿದೆ.

120ಕ್ಕಿಂತ ಹೆಚ್ಚು ದಾಖಲಾತಿ ಇರುವ ಶಾಲೆಗಳಲ್ಲಿ ಈ ಮೊದಲು ತಿಳಿಸಿರುವ ನಿಯಮವನ್ನೇ ಪಾಲಿಸಬೇಕು. ಇತರ ಎಲ್ಲ ಸೂಚನೆಗಳು ಹಿಂದಿನಂತೆಯೇ ಮುಂದುವರಿಯುತ್ತವೆ ಎಂದು ಸುತ್ತೋಲೆಯಲ್ಲಿ ವಿವರಿಸಲಾಗಿದೆ.

ADVERTISEMENT

ಎರಡು ದಿನದಲ್ಲಿ ಮಾರ್ಗಸೂಚಿ

ಶಿಕ್ಷಕರ ವರ್ಗಾವಣೆ ಮಾರ್ಗ ಸೂಚಿಯನ್ನು ಮುಂದಿನ ಎರಡು ದಿನದೊಳಗೆ ಹೊರಡಿಸಿ, ಜುಲೈ ಅಂತ್ಯದೊಳಗೆ ವರ್ಗಾವಣೆ ಪ್ರಕ್ರಿಯೆ ಮುಗಿಸುವಂತೆ ಮುಖ್ಯಮಂತ್ರಿ ಆದೇಶಿಸಿದ್ದಾರೆ.

ಜುಲೈ ಅಂತ್ಯ ಸಮೀಪಿಸಿದರೂ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭವಾಗದೇ ಇರುವುದನ್ನು ಕೆಲವು ಸಚಿವರು ಮುಖ್ಯಮಂತ್ರಿ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ನಿಗದಿತ ಅವಧಿಯಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಲು  ಸೂಚಿಸಿದರು ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.