ADVERTISEMENT

ಹೈ ಕ ಭಾಗಕ್ಕಿಲ್ಲ ಮೀಸಲಾತಿ ಲಾಭ!

274 ಹುದ್ದೆಗಳಿಗೆ ಕೆಎಸ್‌ಆರ್‌ಟಿಸಿ ನೇಮಕಾತಿ

ಪಿ.ವಿ.ಪ್ರವೀಣ್‌ ಕುಮಾರ್‌
Published 7 ಫೆಬ್ರುವರಿ 2016, 19:31 IST
Last Updated 7 ಫೆಬ್ರುವರಿ 2016, 19:31 IST
ಹೈ ಕ ಭಾಗಕ್ಕಿಲ್ಲ ಮೀಸಲಾತಿ ಲಾಭ!
ಹೈ ಕ ಭಾಗಕ್ಕಿಲ್ಲ ಮೀಸಲಾತಿ ಲಾಭ!   

ಬೆಂಗಳೂರು: ಸರ್ಕಾರದ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಹೈದರಾಬಾದ್‌– ಕರ್ನಾಟಕ ಪ್ರದೇಶಕ್ಕೆ ಶೇ 8ರಷ್ಟು ಮೀಸಲಾತಿ ನೀಡಬೇಕೆನ್ನುವ ನಿಯಮ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ (ಕೆಎಸ್‌ಆರ್‌ಟಿಸಿ) ಅನ್ವಯ ಆಗುವುದಿಲ್ಲವೇ?

ಈ ವಿಚಾರ ಜಿಜ್ಞಾಸೆಗೆ ಕಾರಣವಾಗಿದೆ. ಈ ಮೀಸಲಾತಿ ನಿಯಮ ತನಗೆ  ಅನ್ವಯವಾಗುವುದಿಲ್ಲ ಎಂದು ಕೆಎಸ್‌ಆರ್‌ಟಿಸಿ ಪ್ರತಿಪಾದಿಸುತ್ತಿದೆ. 
ಸಂವಿಧಾನದ 371 (ಜೆ) ವಿಧಿ ಪ್ರಕಾರ ಸರ್ಕಾರಿ ಉದ್ಯೋಗಗಳಲ್ಲಿ ಹೈದರಾಬಾದ್‌ ಕರ್ನಾಟಕದವರಿಗೆ ವಿಶೇಷ ಮೀಸಲಾತಿ  ಕಲ್ಪಿಸುವ ಬಗ್ಗೆ ರಾಜ್ಯ ಸರ್ಕಾರ 2013ರ ನವೆಂಬರ್‌ 6ರಂದು   ಅಧಿಸೂಚನೆ ಹೊರಡಿಸಿದೆ. ಈ ಪ್ರಕಾರ ರಾಜ್ಯ ಮಟ್ಟದ ಸಂಸ್ಥೆ,  ರಾಜಧಾನಿ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವ  ಸಂಸ್ಥೆ ಅಥವಾ ಕಚೇರಿಗೆ ನೇಮಕಾತಿ ನಡೆಸುವಾಗ ಹೈದರಾಬಾದ್‌ ಕರ್ನಾಟಕದವರಿಗೆ ಶೇ 8ರಷ್ಟು ಮೀಸಲಾತಿ ಕಲ್ಪಿಸಬೇಕು.

ಕೆಎಸ್‌ಆರ್‌ಟಿಸಿಯು 2015ರ ಜನವರಿ 23ರಂದು ದರ್ಜೆ–3 ಮೇಲ್ವಿಚಾರಕ ವೃಂದದ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದಾಗ ಹೈದರಾಬಾದ್‌ ಕರ್ನಾಟಕದವರಿಗೆ ಶೇ 8 ಮೀಸಲಾತಿ ಕಲ್ಪಿಸಿತ್ತು. ಬಳಿಕ (2015ರ ಸೆಪ್ಟೆಂಬರ್‌ 28ರಂದು) ಆ ಅಧಿಸೂಚನೆಯನ್ನೇ ಹಿಂದಕ್ಕೆ ಪಡೆದು,  ಹೊಸತಾಗಿ (2016ರ ಜನವರಿ 6ರಂದು)  ಅಧಿಸೂಚನೆ ಹೊರಡಿಸಿದೆ. ಇದರಲ್ಲಿ ಹೈದರಾಬಾದ್‌ ಕರ್ನಾಟಕದವರಿಗೆ ಮೀಸಲಾತಿ ಕಲ್ಪಿಸಿಲ್ಲ.

‘ಕೆಎಸ್‌ಆರ್‌ಟಿಸಿಯನ್ನು ವಿಭಜಿಸಿ  ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ), ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳನ್ನು ಅಸ್ತಿತ್ವಕ್ಕೆ ತರಲಾಗಿದೆ. ಇವು ಸ್ವತಂತ್ರ ಸಂಸ್ಥೆಗಳು. ಬಿಎಂಟಿಸಿಯು ರಾಜಧಾನಿ ಪ್ರದೇಶ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು  6 ಜಿಲ್ಲೆಗಳ ಹಾಗೂ  ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು 7 ಜಿಲ್ಲೆಗಳ ಕಾರ್ಯವ್ಯಾಪ್ತಿಯನ್ನು ಹೊಂದಿವೆ.

17 ಜಿಲ್ಲೆಗಳಲ್ಲಿ ಮಾತ್ರ ಕಾರ್ಯವ್ಯಾಪ್ತಿಯನ್ನು ಹೊಂದಿರುವ ನಮ್ಮ ನಿಗಮ ರಾಜ್ಯ ಮಟ್ಟದ ಸಂಸ್ಥೆ ಅಲ್ಲ. ನಮ್ಮ ವ್ಯಾಪ್ತಿಯ 17 ಜಿಲ್ಲೆಗಳು ರಾಜಧಾನಿಯಿಂದ ಹೊರಗೆ ಇವೆ. ಹಾಗಾಗಿ ಹೈದರಾಬಾದ್‌– ಕರ್ನಾಟಕ ಮೀಸಲಾತಿ ನಿಯಮ ನಮಗೆ ಅನ್ವಯಿಸದು’ ಎಂಬುದು ಕೆಎಸ್‌ಆರ್‌ಟಿಸಿಯ ವಾದ. ಈ ವಾದವನ್ನು ಹೈದರಾಬಾದ್‌– ಕರ್ನಾಟಕ ಭಾಗದ ಹೋರಾಟಗಾರರು ಒಪ್ಪುವುದಿಲ್ಲ.

ಮೀಸಲಾತಿ ಕೊಡಲೇಬೇಕು:  ‘ಸರ್ಕಾರವು 2013ರಲ್ಲಿ ಹೊರಡಿಸಿದ ಅಧಿಸೂಚನೆಯ ಪ್ರಕಾರ , ರಾಜ್ಯದ ರಾಜಧಾನಿ ಪ್ರದೇಶದಲ್ಲಿ ಇರುವ ಕಚೇರಿ ಅಥವಾ ಸಂಸ್ಥೆಯೂ ಹೈದರಾಬಾದ್ ಕರ್ನಾಟಕ ಪ್ರದೇಶದವರಿಗೆ  ಶೇ 8ರಷ್ಟು ಮೀಸಲಾತಿ  ಕಲ್ಪಿಸಬೇಕಾಗುತ್ತದೆ. ಕೆಎಸ್‌ಆರ್‌ಟಿಸಿ ಪ್ರಧಾನ ಕಚೇರಿ ಬೆಂಗಳೂರಿನಲ್ಲಿದೆ. ರಾಜಧಾನಿ ಪ್ರದೇಶದಲ್ಲೂ ಈ ನಿಗಮವು ಸೇವೆ ಒದಗಿಸುತ್ತಿದೆ. ಯಾವ ಆಯಾಮದಲ್ಲಿ ನೋಡಿದರೂ,    ಹೈ ಕ ಪ್ರದೇಶದವರಿಗೆ ಮೀಸಲಾತಿ ಒದಗಿಸಲೇ ಬೇಕಾಗುತ್ತದೆ’ ಎನ್ನುತ್ತಾರೆ ಹೈದರಾಬಾದ್‌–ಕರ್ನಾಟಕ ಹೋರಾಟ ಸಮಿತಿಯ ಉಪಾಧ್ಯಕ್ಷ ಡಾ.ರಜಾಕ್‌ ಉಸ್ತಾದ್‌.

‘ಹೈದರಾಬಾದ್‌– ಕರ್ನಾಟಕ ಪ್ರದೇಶದ ಜನರಿಗೆ ಆಗಿರುವ ಅನ್ಯಾಯ ಸರಿಪಡಿಸಲು ಸರ್ಕಾರ ವಿಶೇಷ ಸವಲತ್ತು ಕಲ್ಪಿಸಿದೆ. ಕೆಲವು ಹಿರಿಯ ಅಧಿಕಾರಿಗಳು ಉದ್ದೇಶ ಪೂರ್ವಕವಾಗಿ ನಮ್ಮ ಜನರನ್ನು ಸೌಲಭ್ಯದಿಂದ ವಂಚಿತರನ್ನಾಗಿ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು. ‘ಕೆಎಸ್‌ಆರ್‌ಟಿಸಿ ಮಾತ್ರವಲ್ಲ, ಇತರ ಅನೇಕ ಸರ್ಕಾರಿ ಸಂಸ್ಥೆಗಳೂ  ನೇಮಕಾತಿಯಲ್ಲಿ  ಹೈದರಾಬಾದ್‌–ಕರ್ನಾಟಕದವರಿಗೆ ಮೀಸಲಾತಿ ನೀಡಿಲ್ಲ. ಮುಖ್ಯಮಂತ್ರಿಗೆ ದೂರು ಕೊಟ್ಟಿದ್ದೇವೆ. ಆದರೆ, ಪ್ರಯೋಜನ ಏನೂ ಆಗಿಲ್ಲ’ ಎಂದು ಅವರು ಆಕ್ಷೇಪಿಸಿದರು.

ADVERTISEMENT

ವಿವಿಧ ಹಂತಗಳ ನೇಮಕ ಪ್ರಕ್ರಿಯೆ

71 ಸಹಾಯಕ ಲೆಕ್ಕಿಗರು

128 ಸಹಾಯಕ ಸಂಚಾರ ನಿರೀಕ್ಷಕರು

34 ಸಹಾಯಕ ಉಗ್ರಾಣ ರಕ್ಷಕರು

41 ಅಂಕಿ–ಅಂಶ ಸಹಾಯಕರು

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.