ADVERTISEMENT

₹2 ಕೋಟಿ ಮೌಲ್ಯದ ಚಿನ್ನ, ₹3 ಲಕ್ಷ ನಗದು ದರೋಡೆ

ಕಲಬುರ್ಗಿಯಲ್ಲಿ ಹಾಡಹಗಲೇ ಕೃತ್ಯ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2016, 19:37 IST
Last Updated 2 ಮಾರ್ಚ್ 2016, 19:37 IST
ದರೋಡೆ ನಡೆದಿರುವ ಕಲಬುರ್ಗಿಯ ಮುತ್ತೂಟ್‌ ಫಿನ್‌ಕಾರ್ಪ್‌ ಜಯನಗರ ಶಾಖೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಮಿತ್‌ಸಿಂಗ್‌ ಪರಿಶೀಲಿಸಿದರು
ದರೋಡೆ ನಡೆದಿರುವ ಕಲಬುರ್ಗಿಯ ಮುತ್ತೂಟ್‌ ಫಿನ್‌ಕಾರ್ಪ್‌ ಜಯನಗರ ಶಾಖೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಮಿತ್‌ಸಿಂಗ್‌ ಪರಿಶೀಲಿಸಿದರು   

ಕಲಬುರ್ಗಿ: ಇಲ್ಲಿನ ಸೇಡಂ ರಸ್ತೆಯ ಮುತ್ತೂಟ್ ಫಿನ್‌ಕಾರ್ಪ್‌ ಶಾಖೆಗೆ ಬುಧವಾರ ಹಾಡಹಗಲೇ ನುಗ್ಗಿದ ದರೋಡೆಕೋರರು ಸಿಬ್ಬಂದಿಯನ್ನು ಕೂಡಿಹಾಕಿ ₹2 ಕೋಟಿ ಮೌಲ್ಯದ ಚಿನ್ನಾಭರಣ ಮತ್ತು ₹3 ಲಕ್ಷ ನಗದು ದೋಚಿದ್ದಾರೆ.

ಬೈಕ್‌ ಮೇಲೆ ಬಂದ ನಾಲ್ಕು ಮಂದಿ ಯುವಕರು ಮೊದಲ ಮಹಡಿಯಲ್ಲಿರುವ ಫಿನ್‌ಕಾರ್ಪ್‌ಗೆ ಬೆಳಿಗ್ಗೆ 11 ಗಂಟೆಗೆ ಗ್ರಾಹಕರ ವೇಷದಲ್ಲಿ ಒಳ ಹೋಗಿದ್ದಾರೆ. ಒಳಗೆ ಹೋಗುವ ಮುನ್ನವೇ ಹೊರಗಿನಿಂದ ಸಿಸಿಟಿವಿಯ ವೈರ್‌ಗಳನ್ನು ಕಿತ್ತು ಹಾಕಿದ್ದಾರೆ. ಒಳಗಿದ್ದ ಸಿಬ್ಬಂದಿಯನ್ನು ಮಾರಕಾಸ್ತ್ರಗಳಿಂದ ಬೆದರಿಸಿ ಕೊಠಡಿಯಲ್ಲಿ ಕೂಡಿಹಾಕಿ ₹2 ಕೋಟಿ ಮೌಲ್ಯದ 12 ಕೆ.ಜಿ.ಚಿನ್ನಾಭರಣ ಮತ್ತು ₹3 ಲಕ್ಷ ನಗದು ದೋಚಿ ಪರಾರಿಯಾಗಿದ್ದಾರೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಮಿತ್‌ಸಿಂಗ್‌ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ಈಗಾಗಲೇ ತನಿಖೆ ಆರಂಭಿಸಲಾಗಿದ್ದು, ನಗರ ಸೇರಿದಂತೆ ನೆರೆಯ ರಾಜ್ಯದ ಜಿಲ್ಲೆಗಳಲ್ಲೂ ನಾಕಾಬಂದಿ ಮಾಡುವಂತೆ ವ್ಯವಸ್ಥೆ ಮಾಡಲಾಗಿದೆ. ದರೋಡೆಕೋರರ ಪತ್ತೆಗಾಗಿ ಪೊಲೀಸರ ನಾಲ್ಕು ತಂಡಗಳನ್ನು ರಚಿಸಲಾಗಿದೆ’ ಎಂದು ತಿಳಿಸಿದರು.

ಎರಡು ವರ್ಷಗಳ ಹಿಂದೆ  ಮುತ್ತೂಟ್ ಫಿನ್‌ಕಾರ್ಪ್‌ನ ಕಲಬುರ್ಗಿಯ ಹುಮನಾಬಾದ್‌ ಬೇಸ್ ಶಾಖೆಯಲ್ಲೂ ದರೋಡೆ ನಡೆದಿತ್ತು. ಅಪರಾಧಿಗಳು ಈವರೆಗೂ ಪತ್ತೆಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.