ADVERTISEMENT

50 ಸಾವಿರ ಹುದ್ದೆ ಭರ್ತಿ: ಮುಖ್ಯಮಂತ್ರಿ

ಹೈ.ಕ ಜಿಲ್ಲೆಗಳಿಗೆ ಲಾಭ: ಕಲಬುರ್ಗಿ ಸಂಪುಟ ಸಭೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2014, 19:30 IST
Last Updated 28 ನವೆಂಬರ್ 2014, 19:30 IST

ಕಲಬುರ್ಗಿ: ಹೈದರಾಬಾದ್‌ ಕರ್ನಾಟಕದ ಆರು ಜಿಲ್ಲೆ­ಗಳಲ್ಲಿ ಖಾಲಿ ಇರುವ ಅಂದಾಜು 50 ಸಾವಿರ ಹುದ್ದೆ­ಗಳನ್ನು ಏಕಕಾಲಕ್ಕೆ ಭರ್ತಿ ಮಾಡುವ ಮಹತ್ವದ ನಿರ್ಧಾ­ರ­ವನ್ನು ಶುಕ್ರವಾರ ಇಲ್ಲಿ ನಡೆದ ಸಚಿವ ಸಂಪುಟ ಸಭೆ ಕೈಗೊಂಡಿದೆ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಲಬುರ್ಗಿಯಲ್ಲಿ ಸಂಪುಟ ಸಭೆ ನಡೆದಿದ್ದು ಇದೇ ಮೊದಲು.
ಈ ಸಭೆ 51 ನಿರ್ಣಯ ಕೈಗೊಂಡು, ಅಂದಾಜು  ₨7,255 ಕೋಟಿ ಮೊತ್ತದ ಯೋಜನೆಗಳಿಗೆ ಅನು­ಮೋದನೆ ನೀಡಿತು. ಅವುಗಳ ಪೈಕಿ ಹೆಚ್ಚಿನವು ಹೈದರಾ­ಬಾದ್‌ ಕರ್ನಾಟಕ ಪ್ರದೇಶದ ಅಭಿವೃದ್ಧಿ ಮತ್ತು ನೀರಾ­ವರಿಗೆ ಸಂಬಂಧಿಸಿವೆ. ಸಂಪುಟದ ನಿರ್ಣಯಗಳ ಬಗ್ಗೆ ಸ್ವತಃ ಮುಖ್ಯ­ಮಂತ್ರಿ ಸಿದ್ದರಾಮಯ್ಯ ಅವರೇ ನಂತರ ಸುದ್ದಿಗಾರ­ರಿಗೆ ಮಾಹಿತಿ ನೀಡಿದರು.

‘ಹೈದರಾಬಾದ್‌ ಕರ್ನಾಟಕ ಪ್ರದೇಶದಲ್ಲಿ ಎಲ್ಲ ಇಲಾಖೆಗಳಲ್ಲಿ ಶೇ 40ರಿಂದ ಶೇ 50ರಷ್ಟು ಹುದ್ದೆಗಳು ಖಾಲಿ ಇವೆ. ಅನುದಾನ

2.16 ಲಕ್ಷ ಎಕರೆಗೆ
ಸೂಕ್ಷ್ಮ ನೀರಾವರಿ
ಕೊಪ್ಪಳ, ಬಳ್ಳಾರಿ ಮತ್ತು ಗದಗ ಜಿಲ್ಲೆಗಳ 2.65 ಲಕ್ಷ ಎಕರೆಗೆ ನೀರಾವರಿ ಸೌಲಭ್ಯ ಕಲ್ಪಿಸುವ ಸಿಂಗಟಾಲೂರ ಏತ ನೀರಾವರಿಯ ₨5.768 ಕೋಟಿ ಮೊತ್ತದ ಪರಿಷ್ಕೃತ ಯೋಜನೆಗೆ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿತು.
‘ಈ ಯೋಜನೆಗೆ ಮೊದಲು 6.2 ಟಿಎಂಸಿ ಅಡಿ ನೀರು ಹಂಚಿಕೆಯಾಗಿತ್ತು. ಈಗ 16 ಟಿಎಂಸಿ ಅಡಿ ನೀರು ಹಂಚಿಕೆ ಮಾಡಲಾಗಿದೆ. ಒಟ್ಟು 2.65 ಲಕ್ಷ ಎಕರೆ ಪೈಕಿ 2.16ಲಕ್ಷ ಎಕರೆ ಪ್ರದೇಶಕ್ಕೆ ಸೂಕ್ಷ್ಮ ನೀರಾ­ವರಿ (ತುಂತುರು ನೀರಾವರಿ) ಸೌಲಭ್ಯ ಕಲ್ಪಿಸ­ಲಾ­ಗುವುದು’ ಎಂದು ಸಂಪುಟ ಸಭೆಯ ನಂತರ ಮುಖ್ಯ­ಮಂತ್ರಿ ಸಿದ್ದರಾಮಯ್ಯ ಮತ್ತು ಜಲ­ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಹೇಳಿದರು.
ಬೆಣ್ಣೆತೊರಾ ಯೋಜನೆಯ ನಾಲೆಗಳ ನವೀ­ಕರಣಕ್ಕೆ ₨150 ಕೋಟಿ, ಕಾರಂಜಾ ಯೋಜನೆಗೆ ₨75 ಕೋಟಿ ಹೆಚ್ಚುವರಿ ಅನುದಾನ. ₨87 ಕೋಟಿ ಮೊತ್ತದ ಕೊಪ್ಪಳ ಜಿಲ್ಲೆಯ ಅಳವಂಡಿ–ಬೆಟಗೇರಿ  ಏತ ನೀರಾವರಿ ಯೋಜನೆಗೂ ಅನುಮೋದನೆ.

ಬಳಕೆಯಾಗದೆ ಈ ಭಾಗದ ಅಭಿವೃದ್ಧಿ ಕುಂಠಿತಗೊಳ್ಳಲು ಸಿಬ್ಬಂದಿ ಕೊರತೆಯೂ ಪ್ರಮುಖ ಕಾರಣ. ಇದನ್ನು ಮನಗಂಡು ಈ ಭಾಗದಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಲು  ತೀರ್ಮಾನಿಸಲಾಯಿತು’ ಎಂದರು.

ಮಹತ್ವದ ತೀರ್ಮಾನಗಳು: ಇಲ್ಲಿಗೆ ವರ್ಗವಾಗುವ ಬಹು­ತೇಕ ಅಧಿಕಾರಿಗಳು ಸೇವೆಗೆ ಹಾಜರಾಗುವುದಿಲ್ಲ. ಒಂದು ವೇಳೆ  ಹಾಜರಾದರೂ ಕೆಲವೇ ದಿನಗಳಲ್ಲಿ ಬೇರೆಡೆ ವರ್ಗಾವಣೆ ಮಾಡಿಸಿಕೊಂಡು ಹೋಗುತ್ತಾರೆ. ಇದನ್ನು ತಡೆಯಲು ಇಲ್ಲಿಗೆ ವರ್ಗಾವಣೆಯಾಗುವ ಅಧಿ­ಕಾರಿ­ಗಳ ವರ್ಗಾವಣೆ ಆದೇಶವನ್ನು ಯಾವುದೇ ಕಾರ­ಣಕ್ಕೂ ಬದಲಾಯಿಸದಿರುವ ನಿರ್ಧಾರವನ್ನೂ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಯಿತು. ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಬಜೆಟ್‌ನಲ್ಲಿ ಇಡಲಾದ ₨600 ಕೋಟಿ ಅನುದಾನವನ್ನು ₨1 ಸಾವಿರ  ಕೋಟಿಗೆ ಹೆಚ್ಚಿಸಲು ತೀರ್ಮಾನಿಸಲಾಯಿತು.

ಸಂಪುಟ ಸಭೆಯ ಪ್ರಮುಖ ನಿರ್ಧಾರಗಳು
*ಹೈದರಾಬಾದ್‌ ಕರ್ನಾಟಕ ಅಭಿವೃದ್ಧಿ ಮಂಡಳಿಯ ₨50 ಕೋಟಿ ಅನುದಾನದಲ್ಲಿ ಈ ಭಾಗದ ಆಯ್ದ 250 ಗ್ರಾಮ ಪಂಚಾಯಿತಿಗಳಲ್ಲಿ ಗ್ರಂಥಾಲಯ ಕಟ್ಟಡ ನಿರ್ಮಿಸಿ ‘ಜ್ಞಾನ ಕೇಂದ್ರ’ ಆರಂಭಿಸುವುದು.

*ಹಟ್ಟಿ ಚಿನ್ನದ ಗಣಿ ಕಂಪೆನಿಗೆ ಚಿನ್ನದ ಗಣಿಗಾರಿಕೆಗಾಗಿ ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕು ಊಟಿ ಗ್ರಾಮದಲ್ಲಿ 15.31 ಎಕರೆ ಜಮೀನು ಮಂಜೂರು.

ADVERTISEMENT

*ಮೈಸೂರಿನ ಅಬ್ದುಲ್‌ ನಜೀರ್‌ಸಾಬ್‌ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಪ್ರಾದೇಶಿಕ ತರಬೇತಿ ಕೇಂದ್ರ ಕಲಬುರ್ಗಿಯಲ್ಲಿ ಸ್ಥಾಪನೆ. ಅದರ ಕಟ್ಟಡಕ್ಕೆ ₨7.05 ಕೋಟಿ ಅನುದಾನ.
*ಬೀದರ್‌ ಜಿಲ್ಲೆಯ ಹುಮನಾಬಾದ್‌ ತಾಲ್ಲೂಕು ಬೋರಂಪಳ್ಳಿ ಗ್ರಾಮದಲ್ಲಿ  ತಾಂಡಾ ಅಭಿವೃದ್ಧಿ ನಿಗಮದಿಂದ ನಿರ್ಮಿಸುತ್ತಿರುವ ‘ಟ್ರೈಬಲ್‌ ಪಾರ್ಕ್‌’ಗೆ 34 ಎಕರೆ 6 ಗುಂಟೆ ಜಮೀನು.
*₨29.37 ಕೋಟಿ ವೆಚ್ಚದಲ್ಲಿ ಹಾಸನ ಮತ್ತು  ₨8.60 ಕೋಟಿ ವೆಚ್ಚದಲ್ಲಿ ಹೊಸಪೇಟೆಯಲ್ಲಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಸ್ಥಾಪನೆ. ಕೊಪ್ಪಳ, ಯಾದಗಿರಿ ಜಿಲ್ಲೆಗಳಲ್ಲಿಯೂ ಈ ಕೇಂದ್ರ ಸ್ಥಾಪನೆಗೆ ಕ್ರಮ.
*ಮೈಸೂರು ಮತ್ತು ಕಲಬುರ್ಗಿಯಲ್ಲಿ ಅಪಘಾತ ಚಿಕಿತ್ಸಾ ಕೇಂದ್ರಗಳ (ಟ್ರಾಮಾ ಕೇರ್‌ ಸೆಂಟರ್‌) ಕಟ್ಟಡಕ್ಕೆ   ಕ್ರಮವಾಗಿ ₨25 ಕೋಟಿ ಮತ್ತು ₨21.67 ಕೋಟಿ ಅನುದಾನ.
*ಕರ್ನಾಟಕ ರಾಜ್ಯ ಉಗ್ರಾಣ ನಿಗಮ ಗೋದಾಮು ನಿರ್ಮಾಣಕ್ಕೆ ನಬಾರ್ಡ್‌ನಿಂದ ಪಡೆಯಲಿರುವ ₨93.57 ಕೋಟಿ ಸಾಲಕ್ಕೆ ಸರ್ಕಾರದ ಖಾತರಿ.
*ಪ್ರಥಮ ದರ್ಜೆ ಸರ್ಕಾರಿ ಕಾಲೇಜುಗಳಲ್ಲಿ ಟೆಲಿ ಶಿಕ್ಷಣ ಕಾರ್ಯಕ್ರಮಕ್ಕೆ ₨29.07 ಕೋಟಿ.
*ಪಿಎಸ್‌ಐ ದಿ.ಮಲ್ಲಿಕಾರ್ಜುನ ಬಂಡೆ ಅವರ ಪತ್ನಿಗೆ ಕಲಬುರ್ಗಿಯಲ್ಲಿ ಉಚಿತ ನಿವೇಶನ.
*ಕಲಬುರ್ಗಿ ವಿಶ್ವವಿದ್ಯಾಲಯದಲ್ಲಿ ಸಂತ ಸೇವಾಲಾಲ್‌ ಮತ್ತು ಮಹರ್ಷಿ ವಾಲ್ಮೀಕಿ ಅಧ್ಯಯನ ಪೀಠ ಸ್ಥಾಪನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.