ADVERTISEMENT

ಹಕ್ಕಿಜ್ವರ: ರಾಜ್ಯಕ್ಕೆ ಇಂದು ಕೇಂದ್ರ ತಂಡ

​ಪ್ರಜಾವಾಣಿ ವಾರ್ತೆ
Published 3 ಜನವರಿ 2018, 19:30 IST
Last Updated 3 ಜನವರಿ 2018, 19:30 IST

ಬೆಂಗಳೂರು: ಹಕ್ಕಿಜ್ವರ ಕಾಣಿಸಿಕೊಂಡ ಕಾರಣ ಪರಿವೀಕ್ಷಣೆಗೆ ಕೇಂದ್ರ ತಂಡ ಗುರುವಾರ ನಗರಕ್ಕೆ ಬರಲಿದೆ ಎಂದು ಪಶು ಸಂಗೋಪನಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜ್‌ಕುಮಾರ್‌ ಖತ್ರಿ ತಿಳಿಸಿದರು.

ಉತ್ತರ ತಾಲ್ಲೂಕಿನ ಥಣಿಸಂದ್ರ ಬಳಿಯ ದಾಸರಹಳ್ಳಿಯ ಕೆ.ಜಿ.ಎನ್‌. ಕೋಳಿ ಮಾಂಸದ ಅಂಗಡಿಯಲ್ಲಿ ಹಕ್ಕಿಜ್ವರ (ಎಚ್‌5ಎನ್‌1) ಕಾಣಿಸಿಕೊಂಡ ಕಾರಣ ಬುಧವಾರ ಅಧಿಕಾರಿಗಳ ಸಭೆ ನಡೆಸಿದರು.

ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಹಕ್ಕಿಜ್ವರ ಹರಡದಂತೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ತಂಡ ನೀಡುವ ಸಲಹೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದರು.

ADVERTISEMENT

ಕೋಳಿ ಫಾರಂನಿಂದ ಹಕ್ಕಿಜ್ವರ ಹರಡಿರುವ ಸಾಧ್ಯತೆ ಇಲ್ಲ. ಕೋಳಿ ಮಾಂಸದ ಅಂಗಡಿಯಿಂದ ಹರಡಿರುವ ಶಂಕೆ ಇದೆ. ಹೀಗಾಗಿ, ಶಂಕಿತ ಎರಡು ಅಂಗಡಿಗಳನ್ನು ಮುಚ್ಚಲಾಗಿದೆ. ಹಕ್ಕಿಜ್ವರ ಎಲ್ಲಿಂದ ಬಂದಿದೆ ಎಂದು ತಿಳಿದುಕೊಳ್ಳಲು ಪ್ರಯತ್ನಿಸಲಾಗುವುದು ಎಂದರು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಜನರು ಭಯಭೀತರಾಗುವ ಅವಶ್ಯಕತೆ ಇಲ್ಲ. ಆದರೆ, ಕೋಳಿ ಮಾಂಸ ತಿನ್ನುವ ಮೊದಲು ಎಚ್ಚರಿಕೆ ವಹಿಸಬೇಕು ಎಂದು ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಜಯ್‌ ಸೇಠ್‌ ತಿಳಿಸಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ. ಪ್ರತಿ 10 ಕಿ.ಮೀ. ವ್ಯಾಪ್ತಿಯಲ್ಲಿ 100 ಸಿಬ್ಬಂದಿಯನ್ನು ಸರ್ವೇಕ್ಷಣೆಗೆ ನೇಮಿಸಲಾಗಿದೆ. ಡಿ. 15ರ ನಂತರ ಕೋಳಿಗಳು ಸತ್ತರೆ ಗಮನಕ್ಕೆ ತರುವಂತೆ ತಿಳಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.