ADVERTISEMENT

ಅರ್ಧ ಹೆಲ್ಮೆಟ್: ಫೆ.1ರಿಂದ ಕ್ರಮ

ಗುಣಮಟ್ಟದ ಹೆಲ್ಮೆಟ್ ಖರೀದಿಗೆ ಜ.31ರವರೆಗೆ ಗಡುವು

​ಪ್ರಜಾವಾಣಿ ವಾರ್ತೆ
Published 3 ಜನವರಿ 2018, 20:15 IST
Last Updated 3 ಜನವರಿ 2018, 20:15 IST
ಅರ್ಧ ಹೆಲ್ಮೆಟ್: ಫೆ.1ರಿಂದ ಕ್ರಮ
ಅರ್ಧ ಹೆಲ್ಮೆಟ್: ಫೆ.1ರಿಂದ ಕ್ರಮ   

ಬೆಂಗಳೂರು: ಐಎಸ್‌ಐ ಮುದ್ರೆ ಹೊಂದಿರದ ಹಾಗೂ ಅರ್ಧ ಹೆಲ್ಮೆಟ್ ಧರಿಸುವ ಬೈಕ್ ಸವಾರರ ವಿರುದ್ಧ ಪೊಲೀಸರು ಫೆ.1ರಿಂದ ಕ್ರಮ ಜರುಗಿಸಲಿದ್ದಾರೆ.

ಕಳಪೆ ಹೆಲ್ಮೆಟ್ ಧರಿಸುವ ಸವಾರರ ವಿರುದ್ಧ ‘ಆಪರೇಷನ್ ಸೇಫ್‌ ರೈಡ್‌’ ಹೆಸರಿನಲ್ಲಿ ಮಂಗಳವಾರ ವಿಶೇಷ ಕಾರ್ಯಾಚರಣೆ ನಡೆಸಿದ್ದ ಮೈಸೂರು ಪೊಲೀಸರು, 15,501 ಹೆಲ್ಮೆಟ್‌ಗಳನ್ನು ಜಪ್ತಿ ಮಾಡಿದ್ದರು. ಈ ಕಾರ್ಯಾಚರಣೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

ಇದರ ಬೆನ್ನಲ್ಲೇ ಬುಧವಾರ ಬೆಳಿಗ್ಗೆ ಡಿಜಿ–ಐಜಿಪಿ ನೀಲಮಣಿ ಎನ್‌.ರಾಜು ಹಾಗೂ ಬೆಂಗಳೂರು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಆರ್‌.ಹಿತೇಂದ್ರ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಗೃಹಸಚಿವ ರಾಮಲಿಂಗಾರೆಡ್ಡಿ, ‘ಮೈಸೂರು ಪೊಲೀಸರ ಮಾದರಿಯಲ್ಲೇ ರಾಜ್ಯದಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಬೇಕು. ಆ ಮೂಲಕ ಕಳಪೆ ಹೆಲ್ಮೆಟ್ ಧಾರಣೆಗೆ ಕಡಿವಾಣ ಹಾಕಬೇಕು’ ಎಂದು ಸೂಚಿಸಿದ್ದಾರೆ.

ADVERTISEMENT

ಗುಣಮಟ್ಟದ ಹೆಲ್ಮೆಟ್ ಖರೀದಿಗೆ ನಾಗರಿಕರಿಗೆ ಜ.31ರವರೆಗೆ ಗಡುವು ನೀಡಿರುವ ಪೊಲೀಸರು, ಐಎಸ್‌ಐ ಹಾಗೂ ಬಿಐಎಸ್ ಮುದ್ರೆಯಿರುವ ಹೆಲ್ಮೆಟ್‌ಗಳನ್ನು ಮಾತ್ರ ಧರಿಸುವಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ಸಹಹಮ್ಮಿಕೊಂಡಿದ್ದಾರೆ.

ಸಚಿವರ ಸೂಚನೆ ಬಳಿಕ ಎಲ್ಲ ವಲಯಗಳ ಐಜಿಪಿಗಳು ಹಾಗೂ ಕಮಿಷನರ್‌ಗಳಿಗೆ ಸುತ್ತೋಲೆ ಕಳುಹಿಸಿರುವ ಡಿಜಿ–ಐಜಿಪಿ, ‘ಕಳಪೆ ಗುಣಮಟ್ಟದ ಹೆಲ್ಮೆಟ್ ಮಾರುವವರ ಹಾಗೂ ಅವುಗಳನ್ನು ಧರಿಸುವ ಸವಾರರ ವಿರುದ್ಧ ಕಾರ್ಯಾಚರಣೆ ಪ್ರಾರಂಭಿಸಿ. ಹಾಗೆಯೇ ಎಷ್ಟು ಪ್ರಕರಣ ದಾಖಲಿಸಿದ್ದೀರಿ ಹಾಗೂ ಎಷ್ಟು ದಂಡ ಸಂಗ್ರಹಿಸಿದ್ದೀರಿ ಎಂಬ ಬಗ್ಗೆ ತಿಂಗಳಿಗೊಮ್ಮೆ ವರದಿ ಕಳುಹಿಸಿ’ ಎಂದು ಆದೇಶಿಸಿದ್ದಾರೆ.‌

90 ಲಕ್ಷ ಹೆಲ್ಮೆಟ್ ಬೇಕು

‘ನಗರದಲ್ಲಿ 45 ಲಕ್ಷ ದ್ವಿಚಕ್ರ ವಾಹನಗಳಿವೆ. ಒಂದು ಬೈಕ್‌ಗೆ ಎರಡು ಹೆಲ್ಮೆಟ್‌ಗಳು ಎಂದು ಪರಿಗಣಿಸಿದರೂ 90 ಲಕ್ಷ ಹೆಲ್ಮೆಟ್‌ಗಳು ಬೇಕಾಗುತ್ತವೆ. ಹೀಗಾಗಿ, ಕಳಪೆ ಹೆಲ್ಮೆಟ್‌ ಧರಿಸುವಂತಿಲ್ಲ ಎಂದು ಒಮ್ಮೆಲೆ ತಾಕೀತು ಮಾಡಿದರೆ, ಸವಾರರಿಂದ ವಿರೋಧ ವ್ಯಕ್ತವಾಗಬಹುದು. ಹೀಗಾಗಿ, ಹೆಲ್ಮೆಟ್ ಖರೀದಿಗೆ ತಿಂಗಳ ಗಡುವು ನೀಡಿದ್ದೇವೆ. ಫೆ.1ರಿಂದ ಕ್ರಮ ಜರುಗಿಸುತ್ತೇವೆ’ ಎಂದು ಬೆಂಗಳೂರು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಆರ್.ಹಿತೇಂದ್ರ ತಿಳಿಸಿದ್ದಾರೆ.

* ಸವಾರರು ಗುಣಮಟ್ಟದ ಹೆಲ್ಮೆಟ್‌ಗಳನ್ನೇ ಧರಿಸಬೇಕು ಎಂದು ಸರ್ವೋಚ್ಛ ನ್ಯಾಯಾಲಯ ಆದೇಶದಲ್ಲಿ ಸ್ಪಷ್ಟವಾಗಿ ಹೇಳಿದೆ. ಅದರಂತೆ ನಾವು ಕ್ರಮ ತೆಗೆದುಕೊಳ್ಳುತ್ತಿದ್ದೇವೆ

–ನೀಲಮಣಿ ರಾಜು ಡಿಜಿ–ಐಜಿ‍ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.