ADVERTISEMENT

ಕಾವೇರಿ ನಾಡು ಸಹಜ ಸ್ಥಿತಿಯತ್ತ, ಹೊಸ ಬದುಕಿನೆಡೆಗೆ ಜನರ ಚಿತ್ತ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2018, 13:50 IST
Last Updated 23 ಆಗಸ್ಟ್ 2018, 13:50 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ಮಡಿಕೇರಿ: ಮಹಾಮಳೆಗೆ ತತ್ತರಿಸಿದ್ದ ಕಾವೇರಿ ನಾಡು ಸಹಜ ಸ್ಥಿತಿಯತ್ತ ಮರಳುತ್ತಿದ್ದು, ಹೊಸ ಬದುಕಿನತ್ತ ಹುಡುಕಾಟ ಆರಂಭವಾಗಿದೆ. ಗುರುವಾರ ತುಂತುರು ಮಳೆ ಮುಂದುವರೆದಿದ್ದು, ಜನರು ಭಯಬಿಟ್ಟು ಮನೆಯಿಂದ ಹೊರಬಂದು ಅಗತ್ಯ ವಸ್ತುಗಳನ್ನು ಖರೀದಿಸಿದರು.

ಹೋಟೆಲ್‌, ಅಂಗಡಿಗಳು ಬಾಗಿಲು ತೆರೆದಿದ್ದವು. ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳೂ ರಸ್ತೆಗೆ ಇಳಿದಿದ್ದವು. ಸಂತ್ರಸ್ತರೂ ಊರಿನತ್ತ ಹೆಜ್ಜೆಹಾಕಿ ಮನೆಯ ಪರಿಸ್ಥಿತಿ ಕಂಡು ಪರಿಹಾರ ಕೇಂದ್ರಕ್ಕೆ ವಾಪಸಾದರು. ಪ್ರವಾಹ ತಗ್ಗಿದ ಕಡೆಗಳಲ್ಲಿ ಸಂತ್ರಸ್ತರು ಗೂಡು ಸೇರುತ್ತಿದ್ದಾರೆ.

ಮುಕ್ಕೋಡ್ಲು, ಮಾದಾಪುರ, ಹಮ್ಮಿಯಾಲ, ಹೆಮ್ಮೆತ್ತಾಳ, ಮಕ್ಕಂದೂರು, 1ನೇ ಮೊಣ್ಣಂಗೇರಿ, ತಂತಿಪಾಲ, ಜೋಡುಪಾಲದಲ್ಲಿ ಕಣ್ಮರೆಯಾದವರಿಗೆ ರಕ್ಷಣಾ ಸಿಬ್ಬಂದಿ ಶೋಧ ಮುಂದುವರೆಸಿದ್ದಾರೆ. ಹೆಬ್ಬಟ್ಟಗೇರಿಯಲ್ಲಿ ಉಮ್ಮವ್ವ (90) ಮೃತದೇಹ ಪತ್ತೆಯಾಗಿದ್ದು ಸಾವಿನ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಕಣ್ಮರೆಯಾಗಿದ್ದ ಸ್ವಾಮಿ, ಶಾಂತಾ ದಂಪತಿಯನ್ನು ಕಾಂಡನಕೊಲ್ಲಿಯಲ್ಲಿ ರಕ್ಷಿಸಿ ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಕಣ್ಮರೆಯಾಗಿರುವ 8 ಮಂದಿಗೆ ಶೋಧ ಕಾರ್ಯ ನಡೆಯುತ್ತಿದೆ. 50 ಜೆಸಿಬಿ ಬಳಸಿ ಗ್ರಾಮೀಣ ರಸ್ತೆಗಳಲ್ಲಿ ಬಿದ್ದಿದ್ದ ಮಣ್ಣು ತೆರವು ಕಾರ್ಯ ನಡೆಸಲಾಗುತ್ತಿದೆ.

ADVERTISEMENT

ಪುನರ್ವಸತಿ: ಪುನರ್ವಸತಿ ಕಲ್ಪಿಸಲು ಜಿಲ್ಲೆಯ ಕೆ.ನಿಡುಗಣಿ, ಕರ್ಣಂಗೇರಿ, 1ನೇ ಮೊಣ್ಣಂಗೇರಿ, ಕಾಟಕೇರಿ ಸೇರಿದಂತೆ ಏಳು ಗ್ರಾಮಗಳಲ್ಲಿ 42 ಎಕರೆ ಗುರುತಿಸಲಾಗಿದೆ. ಕುಶಾಲನಗರದಲ್ಲೂ ಸ್ಥಳವಿದ್ದು 830 ಮನೆ ನಿರ್ಮಿಸಲು ಅವಕಾಶವಿದೆ. ಆಧುನಿಕ ತಂತ್ರಜ್ಞಾನ ಬಳಸಿ ಮನೆ ನಿರ್ಮಿಸಲಾಗುವುದು ಎಂದು ವಸತಿ ಸಚಿವ ಡಾ.ಯು.ಟಿ.ಖಾದರ್‌ ತಿಳಿಸಿದರು.

‘ಇನ್ನು ಮುಂದೆ ಅಪಾಯಕಾರಿ ಸ್ಥಳ, ಬೆಟ್ಟಗಳಲ್ಲಿ ಮನೆ ನಿರ್ಮಾಣಕ್ಕೆ ಅನುಮತಿ ನೀಡುವುದಿಲ್ಲ. ಹೊಸ ಕಟ್ಟಡ ನೀತಿ ರೂಪಿಸಲು ತೀರ್ಮಾನಿಸಲಾಗಿದೆ. ಪ್ರಕೃತಿ ವಿಕೋಪದಿಂದ ಅಪಾರ ಹಾನಿ ಸಂಭವಿಸಿದ್ದು, ಮತ್ತೆ ಕೊಡಗು ಜಿಲ್ಲೆಯನ್ನು ಮರು ನಿರ್ಮಾಣ ಮಾಡುತ್ತೇವೆ’ ಎಂದು ಭರವಸೆ ನೀಡಿದರು.

ಗ್ರಾಮೀಣ ರಸ್ತೆಗಳಿಗೆ ಹಾನಿ: ‘ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಇಲಾಖೆಗೆ ಸೇರಿದ 4 ಸಾವಿರ ಕಿ.ಮೀ. ರಸ್ತೆ ಜಿಲ್ಲೆಯಲ್ಲಿದೆ. ಮಳೆಯಿಂದ 2,500 ಕಿ.ಮೀ. ರಸ್ತೆಗೆ ಹಾನಿಯಾಗಿದೆ. ಸದ್ಯಕ್ಕೆ 250 ಕಿ.ಮೀ. ರಸ್ತೆ ದುರಸ್ತಿ ಸಾಧ್ಯವಿಲ್ಲ. ಅಲ್ಲಿ ಪರ್ಯಾಯ ರಸ್ತೆಯನ್ನೇ ಮಾಡಬೇಕು’ ಎಂದು ಸಚಿವ ಕೃಷ್ಣಬೈರೇಗೌಡ ಹೇಳಿದರು.

‘ಮುಕ್ಕೊಡ್ಲು, ದೇವಸ್ತೂರಿನಲ್ಲಿ ಭೂಕುಸಿತದಿಂದ ರಸ್ತೆಗಳೇ ಮಾಯವಾಗಿವೆ. ತಾಂತ್ರಿಕ ಪರಿಣತರು ವರದಿ ನೀಡಿದ ಬಳಿಕವಷ್ಟೇ ರಸ್ತೆ ಕಾಮಗಾರಿ ಸಾಧ್ಯವಾಗಲಿದೆ. ಭೂಕುಸಿತ ಉಂಟಾಗಿರುವ ಗ್ರಾಮಗಳಿಗೆ ತಾತ್ಕಾಲಿಕವಾಗಿ ಸಂಪರ್ಕ ಕಲ್ಪಿಸಲು ರಸ್ತೆ ನಿರ್ಮಿಸಲಾಗುತ್ತಿದೆ. ರಸ್ತೆಗಳ ಸುಧಾರಣೆಗೆ ತಕ್ಷಣವೇ ₹11.50 ಕೋಟಿ ಬಿಡುಗಡೆ ಮಾಡಲಾಗುವುದು. ರಾಜ್ಯ ವಿಪತ್ತು ಪರಿಹಾರ ನಿಧಿಯಿಂದಲೂ ₹ 12 ಕೋಟಿ ಅನುದಾನ ಬಳಸಿಕೊಳ್ಳಲಾಗುವುದು’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.