ADVERTISEMENT

ಹುಬ್ಬಳ್ಳಿ: ಮೈಮೇಲೆ ಮಲಸುರಿದುಕೊಂಡು ಪೌರಕಾರ್ಮಿಕರ ಪ್ರತಿಭಟನೆ

ಗುತ್ತಿಗೆ ಪದ್ಧತಿ ಕೈಬಿಟ್ಟು, ನೇರ ನೇಮಕಾತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಜುಲೈ 2018, 13:21 IST
Last Updated 26 ಜುಲೈ 2018, 13:21 IST
ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಎದುರು ಗುರುವಾರ ಪ್ರತಿಭಟನಾ ನಿರತ ಪೌರಕಾರ್ಮಿಕರು ಮೈಮೇಲೆ ಮಲಸುರಿದುಕೊಂಡು ಆಕ್ರೋಶ ವ್ಯಕ್ತಪಡಿಸಿದರು– ಪ್ರಜಾವಾಣಿ ಚಿತ್ರ ತಾಜುದ್ದೀನ್‌ ಆಜಾದ್‌
ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಎದುರು ಗುರುವಾರ ಪ್ರತಿಭಟನಾ ನಿರತ ಪೌರಕಾರ್ಮಿಕರು ಮೈಮೇಲೆ ಮಲಸುರಿದುಕೊಂಡು ಆಕ್ರೋಶ ವ್ಯಕ್ತಪಡಿಸಿದರು– ಪ್ರಜಾವಾಣಿ ಚಿತ್ರ ತಾಜುದ್ದೀನ್‌ ಆಜಾದ್‌   

ಹುಬ್ಬಳ್ಳಿ: ಗುತ್ತಿಗೆ ಪದ್ಧತಿ ಕೈಬಿಟ್ಟು ನೇರ ನೇಮಕ ಮಾಡಿಕೊಳ್ಳಬೇಕು, ನಾಲ್ಕು ತಿಂಗಳ ಬಾಕಿ ವೇತನ ನೀಡಬೇಕು, ಕೆಲಸದಿಂದ ತೆಗೆದಿರುವವರನ್ನು ಮರಳಿ ನೇಮಕ ಮಾಡಿಕೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವ ಪೌರಕಾರ್ಮಿಕರು ಗುರುವಾರ ಮೈಮೇಲೆ ಮಲಸುರಿದುಕೊಂಡು ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿನ ಮಹಾನಗರ ಪಾಲಿಕೆ ಆವರಣದಲ್ಲಿ ಎರಡು ದಿನಗಳಿಂದ ಧರಣಿ ನಡೆಸುತ್ತಿರುವ ಪೌರಕಾರ್ಮಿಕರಲ್ಲಿ ಬಸವರಾಜ ದೊಡ್ಡಮನಿ, ಪ್ರಶಾಂತ ಮನಮುಟಗಿ ಮತ್ತು ರೇಷ್ಮಾ ಮುದ್ದಿ ಅವರು ಮೈಮೇಲೆ ಮಲವನ್ನು ಸುರಿದುಕೊಂಡರು.

ಪ್ರತಿಭಟನೆಗೂ ಮುನ್ನಾ ನಾಲ್ಕು ಕೊಡಗಳಲ್ಲಿ ಮಲವನ್ನು ತುಂಬಿಕೊಂಡು ಆಟೊ ರಿಕ್ಷಾವೊಂದರಲ್ಲಿ ಪ್ರತಿಭಟನಾ ಸ್ಥಳಕ್ಕೆ ತಂದಿದ್ದರು.

ADVERTISEMENT

‘ನಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಲವು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಪಾಲಿಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ’ ಎಂದು ಆರೋಪಿಸಿದರು.

ಗಡೀಪಾರಿಗೆ ಆಗ್ರಹ

ಇದಕ್ಕೂ ಮುನ್ನಾ ಮಹಾನಗರ ಪಾಲಿಕೆ ಮೇಯರ್‌, ಉಪಮೇಯರ್‌ ಹಾಗೂ ಆಯುಕ್ತರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಪಾಲಿಕೆಯ ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರು, ಪೌರಕಾರ್ಮಿಕರ ಪ್ರತಿಭಟನೆಗೆ ಕುಮ್ಮಕ್ಕು ನೀಡುತ್ತಿರುವ ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಪೌರಕಾರ್ಮಿಕರ ಮತ್ತು ನೌಕರರ ಸಂಘದ ಅಧ್ಯಕ್ಷ ವಿಜಯ ಗುಂಟ್ರಾಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಅಮಾಯಕ ಪೌರಕಾರ್ಮಿಕರನ್ನು ಪಾಲಿಕೆ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಎತ್ತಿಕಟ್ಟಿ, ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿರುವ ಮತ್ತು ಸುಳ್ಳು ಜಾತಿ ನಿಂದನೆ ಪ್ರಕರಣವನ್ನು ದಾಖಲಿಸುತ್ತಿರುವ ವಿಜಯ ಗುಂಟ್ರಾಳ ಅವರನ್ನು ಬಂಧಿಸಿ, ಗಡೀಪಾರು ಮಾಡಬೇಕು ಎಂದು ಪೊಲೀಸ್‌ ಕಮಿಷನರ್‌ ಎಂ.ಎನ್‌.ನಾಗರಾಜ ಅವರಿಗೆ ದೂರು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.