ADVERTISEMENT

ಅಮೆರಿಕದ ಬಹುಪಾಲು ರಕ್ಷಣಾ ತಂತ್ರಜ್ಞಾನ ಭಾರತಕ್ಕೆ ಲಭ್ಯ

​ಪ್ರಜಾವಾಣಿ ವಾರ್ತೆ
Published 26 ಜೂನ್ 2016, 19:30 IST
Last Updated 26 ಜೂನ್ 2016, 19:30 IST

ವಾಷಿಂಗ್ಟನ್‌ (ಪಿಟಿಐ): ಭಾರತವನ್ನು ‘ಪ್ರಮುಖ ರಕ್ಷಣಾ ಪಾಲುದಾರ’ ಎಂದು ಪರಿಗಣಿಸಿರುವ ಅಮೆರಿಕ ತನ್ನಲ್ಲಿರುವ ಬಹುಪಾಲು ರಕ್ಷಣಾ ತಂತ್ರಜ್ಞಾನವನ್ನು ಹಂಚಿಕೊಳ್ಳಲಿದೆ.

‘ಅಮೆರಿಕದ ಶೇಕಡ 99ರಷ್ಟು ರಕ್ಷಣಾ ತಂತ್ರಜ್ಞಾನಗಳು ಭಾರತಕ್ಕೆ ಸಿಗಲಿವೆ. ಅಮೆರಿಕದ ಪರಮಾಪ್ತ ದೇಶಗಳ ಹೊರತಾಗಿ ಇಂತಹ ತಂತ್ರಜ್ಞಾನ ಸಿಗುತ್ತಿರುವುದು ಭಾರತಕ್ಕೆ ಮಾತ್ರ’ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಮಿತ್ರಕೂಟದ ದೇಶಗಳಿಗೆ ಸಿಗುವ ಎಲ್ಲ ರಕ್ಷಣಾ ತಂತ್ರಜ್ಞಾನಗಳು ಇನ್ನು ಮುಂದೆ ಭಾರತಕ್ಕೂ ಸಿಗಲಿವೆ. ಇದು ಅತ್ಯಂತ ವಿಶಿಷ್ಟವಾದ ಸ್ಥಾನಮಾನ’ ಎಂದು ಅವರು ಸುದ್ದಿಸಂಸ್ಥೆಗೆ ವಿವರಿಸಿದರು.

ಈ ತಿಂಗಳ ಆರಂಭದಲ್ಲಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಡುವೆ ವೈಟ್‌ಹೌಸ್‌ನಲ್ಲಿ ಮಾತುಕತೆ ನಡೆದ ನಂತರ, ಭಾರತವನ್ನು ಅಮೆರಿಕದ ‘ಪ್ರಮುಖ ರಕ್ಷಣಾ ಪಾಲುದಾರ’ ಎಂದು ಘೋಷಿಸಲಾಯಿತು.

‘ಅಮೆರಿಕದ ಯಾವುದೇ ಕಾನೂನಿನಲ್ಲಿ ಶಸ್ತ್ರಾಸ್ತ್ರ ವರ್ಗಾವಣೆಗೆ ಸಂಬಂಧಿಸಿ ಈ ಪರಿಭಾಷೆ ಇಲ್ಲ. ಭಾರತದ ಜತೆ ಮಾಡಿಕೊಂಡ ಹೊಸ ಒಪ್ಪಂದದ ಪ್ರಕಾರ ಈ ಪರಿಭಾಷೆ ರೂಪಿಸಲಾಗಿದೆ’ ಎಂದು ಅವರು ಹೇಳಿದರು. ನಾಗರಿಕ ಹಾಗೂ ಸೇನಾ ಬಳಕೆಯ ತಂತ್ರಜ್ಞಾನವನ್ನು ಪರವಾನಗಿ ಇಲ್ಲದೆ ಪಡೆದುಕೊಳ್ಳಲು ಭಾರತಕ್ಕೆ ಇನ್ನು ಮುಂದೆ ಸಾಧ್ಯವಾಗಲಿದೆ. 

‘ಭಾರತದಿಂದ ಬರುವ ಬೇಡಿಕೆಗಳು ತಿರಸ್ಕೃತವಾಗುವ ಪ್ರಮಾಣ ಶೇಕಡ ಒಂದಕ್ಕಿಂತ ಕಡಿಮೆ. ತಿರಸ್ಕಾರ ಮಾಡುತ್ತಿರುವುದು ಆ ಬೇಡಿಕೆ ಬಂದಿದ್ದು ಭಾರತದಿಂದ ಎಂಬ ಕಾರಣಕ್ಕೆ ಅಲ್ಲ. ಕೆಲವು ತಂತ್ರಜ್ಞಾನಗಳನ್ನು ಅಮೆರಿಕ ಯಾವ ದೇಶದ ಜೊತೆಯೂ ಹಂಚಿಕೊಳ್ಳುವುದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.