ADVERTISEMENT

ಅಶ್ರಫ್‌ ಘನಿ: ಆಫ್ಘನ್‌ ಹೊಸ ಅಧ್ಯಕ್ಷ

ರಾಷ್ಟ್ರೀಯ ಒಕ್ಕೂಟ ಸರ್ಕಾರ ರಚನೆ, ಸಿಇಒ ಹುದ್ದೆ ಸೃಷ್ಟಿಗೆ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2014, 19:30 IST
Last Updated 21 ಸೆಪ್ಟೆಂಬರ್ 2014, 19:30 IST

ಕಾಬೂಲ್‌ (ಎಎಫ್‌ಪಿ,ಐಎಎನ್‌­ಎಸ್‌): ಆಫ್ಘಾನಿಸ್ತಾನದ ಮುಂದಿನ ಅಧ್ಯಕ್ಷರಾಗಿ ಆರ್ಥಿಕ ತಜ್ಞ ಅಶ್ರಫ್‌ ಘನಿ ಅಹಮ­ದ್ಜಾಯಿ ಅವರು ಆಯ್ಕೆ ಆಗಿರುವುದಾಗಿ ಚುನಾವಣಾ ಆಯೋಗ ಭಾನುವಾರ ಪ್ರಕಟಿಸಿದೆ.
ಸಂಜೆ ಫಲಿತಾಂಶ ಘೋಷಿಸಿದ ಚುನಾ­ವಣಾ ಆಯೋಗದ ಮುಖ್ಯಸ್ಥ ಅಹ­ಮದ್‌ ಯೂಸಫ್‌ ನೂರಿಸ್ತಾನಿ ಅವರು, ಗೆಲು­ವಿನ ಅಂತರ ಅಥವಾ ಮತ­ದಾನದ ಪ್ರಮಾಣವನ್ನು ತಿಳಿಸಲಿಲ್ಲ.

ಕಳೆದ ಜೂನ್‌ 14ರಂದು ನಡೆದ ಅಂತಿಮ ಹಂತದ ಅಧ್ಯ­ಕ್ಷೀಯ ಚುನಾ­ವಣೆ­ಯಲ್ಲಿ ಘನಿ ಅವರು ಪ್ರತಿ­ಸ್ಪರ್ಥಿ­ಯಾಗಿದ್ದ ಮಾಜಿ ವಿದೇಶಾಂಗ ಸಚಿವ ಡಾ. ಅಬ್ದುಲ್ಲಾ ಅಬ್ದುಲ್ಲಾ ಅವರಿಗಿಂತ ಮುಂದಿದ್ದರು. ಈ ಚುನಾವಣೆಯಲ್ಲಿ ಸಾಕಷ್ಟು ಅಕ್ರಮ ನಡೆದಿದೆ ಎಂಬ ಆರೋ­ಪ­ಗಳ ಕಾರಣ ಫಲಿ­ತಾಂಶ ಪ್ರಕ­ಟಿಸದೆ, ತಡೆಹಿಡಿಯ­ಲಾಗಿತ್ತು.

ಡಾ. ಅಬ್ದುಲ್ಲಾ ಒಪ್ಪಿಗೆ: ಈ ರಾಜ­ಕೀಯ ಬಿಕ್ಕಟ್ಟು ಕೊನೆ­ಗೊಳಿ­ಸಲು ಇಬ್ಬರೂ ಸ್ಪರ್ಧಿ­ಗಳ ಮಧ್ಯೆ ಸತತ ಸಂಧಾನ ನಡೆಸ­ಲಾಯಿತು. ಇದರ ಫಲ­ವಾಗಿ ಭಾನು­ವಾರ  ಬೆಳಿಗ್ಗೆ ರಾಷ್ಟ್ರೀಯ ಒಕ್ಕೂಟ ಸರ್ಕಾರ ರಚನೆಯ ಒಪ್ಪಂ­ದಕ್ಕೆ ಬಂದು, ಅಬ್ದುಲ್ಲಾ ಮತ್ತು ಅಶ್ರಫ್‌ ಘನಿ ಅವರು ಅಧಿಕಾರ ಹಂಚಿ­ಕೆಗೆ ಸಹಿ ಹಾಕಿದರು.

ಈ ಮೂಲಕ ಇಬ್ಬರೂ ನಾಯಕರು ದೇಶದಲ್ಲಿ ಸುಮಾರು ಕೆಲವು ತಿಂಗಳ ಕಾಲ ಇದ್ದಂತಹ ರಾಜ­ಕೀಯ ಅನಿಶ್ಚತೆತೆ ಯನ್ನು ಕೊನೆಗೊಳಿಸಲು ರಾಷ್ಟ್ರೀಯ ಒಕ್ಕೂಟ ಸರ್ಕಾರ ರಚಿಸುವ ಪ್ರಸ್ತಾವಕ್ಕೆ ಒಪ್ಪಿಗೆ ಸೂಚಿಸಿದರು.

ಅಧ್ಯಕ್ಷರ ಅರಮನೆಯಲ್ಲಿ ನಿರ್ಗಮಿತ ಅಧ್ಯಕ್ಷ ಹಮೀದ್‌ ಕರ್ಜೈ ಅವರ ಸಮ್ಮು­ಖದಲ್ಲಿ ಮಾಜಿ ಮುಜಾ­ಹಿ­ದೀನ್‌ ನಾಯ­­ಕರು ಮತ್ತು ಉನ್ನತ ಅಧಿಕಾರಿ­ಗಳ ಮಧ್ಯಸ್ಥಿಕೆಯಲ್ಲಿ ನಡೆದ ಮಹ­ತ್ವದ ಸಭೆಯಲ್ಲಿ ಉಭಯ ನಾಯ­ಕರ ಮಧ್ಯೆ ಸುದೀರ್ಘ ಚರ್ಚೆ ಬಳಿಕ ಈ ಒಪ್ಪಂದಕ್ಕೆ ಬರಲಾಯಿತು ಎಂದು ಕ್ಸಿನ್‌ಹುವಾ ಸುದ್ದಿ­ಸಂಸ್ಥೆ ವರದಿ ಮಾಡಿದೆ.

ಒಪ್ಪಂದ ಪ್ರಕಾರ, ಹೊಸ ರಾಷ್ಟ್ರೀಯ ಸರ್ಕಾರದಲ್ಲಿ ಇಬ್ಬರು ಅಭ್ಯರ್ಥಿ­ಗಳ  ಪೈಕಿ ಒಬ್ಬರು ಅಧ್ಯಕ್ಷರಾಗಬೇಕು ಮತ್ತು ಇನ್ನೊಬ್ಬರು ಅಥವಾ ಅವರು  ಸೂಚಿ­ಸಿದ ಬೆಂಬಲಿಗರೊಬ್ಬರು ಪ್ರಧಾನಿ ಹುದ್ದೆಗೆ ಸಮಾನಾದಂತಹ ಹೊಸದಾಗಿ ಸೃಷ್ಟಿಸುವ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ (ಸಿಒಇ) ಸ್ಥಾನಕ್ಕೇರಬೇಕು. ಈಗ ಘನಿ ಅವರನ್ನು ಅಧ್ಯ­ಕ್ಷ­ರಾಗಿ ಪ್ರಕ­ಟಿ­ಸಿ­ರುವುದರಿಂದ ಅಬ್ದುಲ್ಲಾ ಅಥವಾ ಅವರ ಬೆಂಬಲಿಗ­ರು ಸಿಇಒ ಆಗಲಿದ್ದಾರೆ.

ಆಫ್ಘನ್‌ನಲ್ಲಿ ತಾಲಿಬಾನ್‌ ಆಡ­­ಳಿತ ಕೊನೆಗೊಂಡ ನಂತರ ಕಳೆದ ಏಪ್ರಿಲ್‌ 5ರಂದು ನಡೆದ ಮೂರನೇ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರಮುಖ ಎಂಟು ಅಭ್ಯರ್ಥಿ­­ಗಳಲ್ಲಿ ಯಾರೊಬ್ಬರೂ ಅಗ­ತ್ಯದ ಶೇ 50ಕ್ಕಿಂತ ಹೆಚ್ಚಿನ ಮತಗಳನ್ನು ಪಡೆಯಲು ಸಫಲರಾಗಿರಲಿಲ್ಲ. ಹಾಗಾಗಿ ಇಬ್ಬರು ಮುಂಚೂಣಿ ಅಭ್ಯ­ರ್ಥಿ­ಗಳಾದ ಮಾಜಿ ವಿದೇಶಾಂಗ ಸಚಿವ ಡಾ. ಅಬ್ದುಲ್ಲಾ ಮತ್ತು ಆರ್ಥಿಕ ತಜ್ಞ ಅಶ್ರಫ್‌ ಘನಿ ಅವರ ನಡುವೆ ಜೂನ್‌ 14ರಂದು ಮತ್ತೆ ನೇರ ಚುನಾವಣೆ ನಡೆದಿತ್ತು.

ಈ ಚುನಾವಣೆ­ಯಲ್ಲಿ ಸಾಕಷ್ಟು ಅಕ್ರ­­­ಮದ ಆರೋಪ ಕೇಳಿಬಂದಿತ್ತು. ಇಬ್ಬರೂ ತೀವ್ರ ಪೈಪೋಟಿ ಎದುರಿಸಿ, ತಾವೇ ಗೆಲುವು ಸಾಧಿಸಿ­ರು­ವುದಾಗಿ ಹೇಳಿ­ಕೊಂಡಿ­ದ್ದ­ರಿಂದ ಕೊನೆಗೆ ಒಮ್ಮತದ ಒಕ್ಕೂಟ ಸರ್ಕಾರ ರಚನೆಗೆ ಮುಂದಾ­ಗ­­ಲಾ­ಗಿದೆ.

ಮತೀಯವಾದಿ ತಾಲಿಬಾನ್‌ ಆಡಳಿ­ತದ ವಿರುದ್ಧ ಅಮೆರಿಕ ನೇತೃತ್ವದ ವಿದೇಶಿ ಸಮ್ಮಿಶ್ರ ನ್ಯಾಟೊ ಪಡೆಗಳು 13 ವರ್ಷ­ಗಳ ಕಾಲ  ಹೋರಾಡಿ, ಆಫ್ಘ­ನ್‌­ನಿಂದ ಕಾಲ್ತೆಗೆಯಲು ನಿರ್ಧರಿಸಿ­ರುವ ಕಾರಣ ಹೊಸ ಒಕ್ಕೂಟ ಸರ್ಕಾರದ ಮೇಲೆ ಹೆಚ್ಚಿನ ಹೊಣೆಗಾರಿಕೆ ಬಿದ್ದಿದೆ. ಅಧ್ಯಕ್ಷ ಕರ್ಜೈ ಕೂಡ ದೇಶದಲ್ಲಿ ವಿದೇಶಿ ಸೇನೆ ಮುಂದುವರಿಸುವುದಕ್ಕೆ ಒಪ್ಪಿಲ್ಲ.

1990ರ ಅಂತಃಕಲಹ ಮರುಕಳಿಸಿ, ಜನಾಂಗೀಯ ವಿಭಜನೆ ಆಗುವುದನ್ನು ತಡೆಯಲು ವಿಶ್ವಸಂಸ್ಥೆಯು ರಾಷ್ಟ್ರೀಯ ಒಕ್ಕೂಟ ಸರ್ಕಾರ ರಚನೆಯ ಪ್ರಸ್ತಾವ ಮುಂದಿಟ್ಟಿತು. ಇದನ್ನು ಅಮೆರಿಕ ಸಹ ಬೆಂಬಲಿಸಿತು.
ಪ್ರಸಕ್ತ ಸಂವಿಧಾನದ ಪ್ರಕಾರ, ಅಧ್ಯ­ಕ್ಷರೇ ಬಹುತೇಕ ಅಧಿಕಾರ ಹೊಂದಿದ್ದು, ಹೊಸ ಸರ್ಕಾರದ ಅಧಿಕಾರ ವ್ಯಾಪ್ತಿ ಅಗ್ನಿ ಪರೀಕ್ಷೆಗೆ ಒಳಪಡಲಿದೆ. ದೇಶದ ಭದ್ರತೆ ಮತ್ತು ಆರ್ಥಿಕ ಪರಿಸ್ಥಿತಿಯ ಸುಧಾರಣೆ ಇದಕ್ಕೆ ಸವಾಲಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.