ADVERTISEMENT

ಆಫ್ಘಾನಿಸ್ತಾನ: 135 ಸೈನಿಕರ ಸಾವು

ಐಎಎನ್ಎಸ್
Published 22 ಏಪ್ರಿಲ್ 2017, 19:30 IST
Last Updated 22 ಏಪ್ರಿಲ್ 2017, 19:30 IST
ದಾಳಿ ಹಿನ್ನೆಲೆಯಲ್ಲಿ ಆಫ್ಘಾನಿಸ್ತಾನದ ಸೇನಾ ಪ್ರಧಾನ ಕಚೇರಿ ಆವರಣದಲ್ಲಿ ಭದ್ರತಾ ಸಿಬ್ಬಂದಿ ಕಟ್ಟೆಚ್ಚರ
ದಾಳಿ ಹಿನ್ನೆಲೆಯಲ್ಲಿ ಆಫ್ಘಾನಿಸ್ತಾನದ ಸೇನಾ ಪ್ರಧಾನ ಕಚೇರಿ ಆವರಣದಲ್ಲಿ ಭದ್ರತಾ ಸಿಬ್ಬಂದಿ ಕಟ್ಟೆಚ್ಚರ   

ಕಾಬೂಲ್‌: ಆಫ್ಘಾನಿಸ್ತಾನ ಸೇನಾ ನೆಲೆ ಮೇಲೆ ತಾಲಿಬಾನ್‌ ಉಗ್ರರು ಶುಕ್ರವಾರ ನಡೆಸಿದ ಭೀಕರ ದಾಳಿಗೆ 135 ಯೋಧರು ಬಲಿಯಾಗಿದ್ದಾರೆ.

ಆಫ್ಘಾನಿಸ್ತಾನದ ಅತಿದೊಡ್ಡ ಸೇನಾ ನೆಲೆಗಳಲ್ಲಿ ಒಂದಾಗಿರುವ ಬಾಲ್ಕ್‌ ಪ್ರಾಂತ್ಯದ ಶಹೀನ್‌ ಕಾರ್ಪ್ಸ್‌ ಕೇಂದ್ರ ಕಾರ್ಯಾಲಯ 209ರ ಮೇಲೆ ಈ ದಾಳಿ ನಡೆದಿದ್ದು, ಸುಮಾರು 60 ಸೈನಿಕರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾವು ನೋವಿನ ಕುರಿತು ಸರ್ಕಾರ ಅಧಿಕೃತ ಮಾಹಿತಿ ನೀಡಿಲ್ಲ. ದಾಳಿಯ ಹೊಣೆಯನ್ನು ತಾಲಿಬಾನ್‌ ಉಗ್ರ ಸಂಘಟನೆ ಹೊತ್ತುಕೊಂಡಿದೆ.

ADVERTISEMENT

ಗಾಯಾಳು ಸೈನಿಕರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿರುವುದರಿಂದ ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೇನಾ ಸಮವಸ್ತ್ರ ಧರಿಸಿದ್ದ ಉಗ್ರರು  ಆವರಣದ ಗೋಡೆಯನ್ನು ಧ್ವಂಸ ಮಾಡಿದರು.  ಸೇನೆಗೆ ಸೇರಿದ ವಾಹನದಲ್ಲಿಯೇ ಒಳಗೆ ನುಗ್ಗಿದ ಉಗ್ರರು  ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆ ಸಲ್ಲಿಸುತ್ತಿದ್ದ ಸೈನಿಕರ ಮೇಲೆ ಮನಬಂದಂತೆ ಗುಂಡಿನ ದಾಳಿ ಆರಂಭಿಸಿದರು. ರಾಕೆಟ್‌ನಿಂದ ಉಡಾಯಿಸುವ ಗ್ರೆನೇಡ್‌ಗಳನ್ನು ಹಾರಿಸಿದರು.

ಪ್ರತಿದಾಳಿ ನಡೆಸಿದ ಸೈನಿಕರ ಗುಂಡಿಗೆ 10 ಉಗ್ರರು ಬಲಿಯಾದರು ಎಂದು ರಕ್ಷಣಾ ಇಲಾಖೆ ವಕ್ತಾರ ದವಲತ್‌ ವಾಜರಿ  ತಿಳಿಸಿದ್ದಾರೆ.
ಆಫ್ಘಾನಿಸ್ತಾನದ ರಕ್ಷಣಾ ಸಚಿವ ಅಬ್ದುಲ್ಲಾ ಹಬಿಬಿ ಅವರು ಬಾಲ್ಕ್‌ ಪ್ರವಾಸದ ವೇಳೆ ಸೇನಾ ನೆಲೆಗೆ ಭೇಟಿ ನೀಡಿದ್ದ ಎರಡು ದಿನಗಳಲ್ಲಿಯೇ ಈ ದಾಳಿ ನಡೆದಿದೆ.

ಆಫ್ಘನ್‌ ಸೇನಾ ನೆಲೆಯ ಮೇಲೆ ಈ ವರ್ಷ ನಡೆದ ಎರಡನೆಯ ಪ್ರಮುಖ ದಾಳಿ ಇದಾಗಿದೆ. ಮಾರ್ಚ್‌ನಲ್ಲಿ ಸರ್ದಾರ್‌ ಮೊಹಮ್ಮದ್‌ ದಾವೂದ್‌ ಸೇನಾ ಆಸ್ಪತ್ರೆ ಮೇಲೆ ದಾಳಿ ನಡೆಸಿದ್ದ ತಾಲಿಬಾನಿಗಳು 30 ಮಂದಿಯನ್ನು ಹತ್ಯೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.