ADVERTISEMENT

ಉ.ಕೊರಿಯಾದ ಅಣ್ವಸ್ತ್ರ ಪ್ರಸರಣ: ತನಿಖೆಗೆ ಆಗ್ರಹ

ಪಿಟಿಐ
Published 19 ಸೆಪ್ಟೆಂಬರ್ 2017, 19:30 IST
Last Updated 19 ಸೆಪ್ಟೆಂಬರ್ 2017, 19:30 IST

ನ್ಯೂಯಾರ್ಕ್: ಉತ್ತರ ಕೊರಿಯಾದ ಅಣ್ವಸ್ತ್ರ ಪ್ರಸರಣ ಕಾರ್ಯಕ್ರಮದ ಕುರಿತು ತನಿಖೆಯಾಗಬೇಕು ಎಂದು ಭಾರತ ಒತ್ತಾಯಿಸಿದೆ. ಪಾಕಿಸ್ತಾನದ ಹೆಸರು ಹೇಳದೆ ಪರೋಕ್ಷವಾಗಿ ಈ ಒತ್ತಾಯ ಮಾಡಿದೆ.

ಜಪಾನ್ ಮೇಲೆ ಮಧ್ಯಮ ಶ್ರೇಣಿಯ ಖಂಡಾಂತರ ಕ್ಷಿಪಣಿಯನ್ನು ಉತ್ತರ ಕೊರಿಯಾ ಹಾರಿಸಿದ ಬಳಿಕ ಸುಷ್ಮಾ ಸ್ವರಾಜ್ ಅವರು ಈ ವಿಷಯ ಪ್ರಸ್ತಾಪಿಸಿದ್ದಾರೆ.

‘ಉತ್ತರ ಕೊರಿಯಾದ ಇತ್ತೀಚಿನ ಕ್ರಮಗಳಿಗೆ ವಿಷಾದ ವ್ಯಕ್ತಪಡಿಸಿದ ಸುಷ್ಮಾ ಅವರು, ಕೊರಿಯಾದ ಪರಮಾಣು ಪ್ರಸರಣದ ನಂಟು ಬಯಲಾಗಬೇಕು. ಇದರಲ್ಲಿ ಭಾಗಿಯಾದವರನ್ನು ಜವಾಬ್ದಾರರನ್ನಾಗಿ ಮಾಡಬೇಕು ಎಂದು ಆಗ್ರಹಿಸಿದರು’ ಎಂದು ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ರೆಕ್ಸ್ ಟಿಲ್ಲರ್‌ಸನ್ ಹಾಗೂ ಜಪಾನ್‌ ವಿದೇಶಾಂಗ ಸಚಿವ ಟಾರೊ ಕೊನೊ ಅವರ ಜೊತೆ ಸೋಮವಾರ ತ್ರಿಪಕ್ಷೀಯ ಸಚಿವರ ಮಟ್ಟದ ಮಾತುಕತೆ ನಡೆಸಿದ ಬಳಿಕ ಸುಷ್ಮಾ ಈ ಒತ್ತಾಯ ಮಾಡಿದ್ದಾರೆ.

ಸುಷ್ಮಾ ಅವರು ಎಲ್ಲಿಯೂ ಪಾಕಿಸ್ತಾನದ ಮೇಲೆ ನೇರ ಆರೋಪ ಮಾಡಿಲ್ಲ. ಆದರೆ ಎ.ಕ್ಯು. ಖಾನ್ ಅವರು ಪಾಕ್‌ನ ಪರಮಾಣು ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದ ವೇಳೆ ಉತ್ತರ ಕೊರಿಯಾವು ಪಾಕಿಸ್ತಾನದಿಂದ ಪರಮಾಣು ತಂತ್ರಜ್ಞಾನವನ್ನು ರಹಸ್ಯವಾಗಿ ಪಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಿದ್ದಾರೆ.

ಮೂವರು ನಾಯಕರ ಉನ್ನತ ಮಟ್ಟದ ಸಭೆಯಲ್ಲಿ ಅಣ್ವಸ್ತ್ರ ಪ್ರಸರಣದ ಜೊತೆಗೆ ಕಡಲ ಭದ್ರತೆ ಹಾಗೂ ಸಂಪರ್ಕದ ಬಗ್ಗೆ ವಿಸ್ತೃತ ಚರ್ಚೆ ನಡೆಸಿದರು. ತ್ರಿಪಕ್ಷೀಯ ಸಚಿವರ ಸಭೆ 2015ರಲ್ಲಿ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.