ADVERTISEMENT

ಉಗ್ರರ ಜಾಲ ನಾಶಕ್ಕೆ ಪಣ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2014, 20:00 IST
Last Updated 30 ಸೆಪ್ಟೆಂಬರ್ 2014, 20:00 IST

ವಾಷಿಂಗ್ಟನ್‌ (ಪಿಟಿಐ): ಎಲ್‌ಇಟಿ, ಜೆಇಎಂ, ಡಿ- ಕಂಪನಿ, ಅಲ್‌ ಖೈದಾ ಮತ್ತು ಹಖಾನಿ ಉಗ್ರರ ಜಾಲಗಳ ನಾಶಕ್ಕೆ ‘ಜಂಟಿ ಪ್ರಯತ್ನ’ ನಡೆಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ಅವರು ಇಲ್ಲಿ ನಡೆದ ಮೊದಲ ದ್ವಿಪಕ್ಷೀಯ ಮಾತುಕತೆ ವೇಳೆ ಒಪ್ಪಿಕೊಂಡಿದ್ದಾರೆ.

ಈ ಉಗ್ರ ಸಂಘಟನೆಗಳಿಗೆ ಲಭಿ­ಸುವ ಹಣಕಾಸು ಮತ್ತು ಕಾರ್ಯ­ತಂತ್ರದ ಬೆಂಬಲ ತಡೆಯುವ ಕುರಿತು ಕ್ರಮ ಕೈಗೊಳ್ಳಲೂ ಇಬ್ಬರೂ ನಾಯಕರು ಸಮ್ಮತಿಸಿದ್ದಾರೆ. ಅಮೆರಿಕ ಮತ್ತು ಭಾರತದ ದ್ವಿಪಕ್ಷೀಯ ಬಾಂಧವ್ಯವನ್ನು ‘ಹೊಸ ಹಂತಕ್ಕೆ’ ಕೊಂಡೊಯ್ಯಲು ಕೂಡ ಮೋದಿ– ಒಬಾಮ ಪಣ ತೊಟ್ಟರು.

ನಾಗರಿಕ ಪರಮಾಣು ಒಪ್ಪಂದ ಜಾರಿಯಲ್ಲಿನ ಅಡೆತಡೆ ನಿವಾರಿಸಲು ಮತ್ತು ಭಯೋತ್ಪಾದನೆ ವಿರುದ್ಧ ಹೋರಾಡಲೂ ಉಭಯ ನಾಯಕರು ಸಭೆಯಲ್ಲಿ ಒಪ್ಪಿಕೊಂಡರು. ಶ್ವೇತಭವನದಲ್ಲಿ ಸುಮಾರು ಎರಡು ಗಂಟೆವರೆಗೆ ನಡೆದ ಚರ್ಚೆ­ಯಲ್ಲಿ ಆರ್ಥಿಕ ಸಹಕಾರ, ವ್ಯಾಪಾರ ಮತ್ತು ಬಂಡವಾಳ ಸೇರಿದಂತೆ ಪ್ರಮುಖ ವಿಷಯಗಳ ಬಗ್ಗೆ ಸಮಾ­ಲೋಚಿಸಿದರು.

ಭಾರತದ ಕಂಪೆನಿಗಳಿಗೆ ಮತ್ತು ತಂತ್ರಜ್ಞರಿಗೆ ಅಮೆರಿಕದಲ್ಲಿ ಸುಲಭ­ವಾಗಿ ಅವಕಾಶಗಳು ಲಭಿಸಬೇಕೆಂಬ ಬೇಡಿಕೆಯನ್ನೂ ಮೋದಿ ಈ ಸಂದರ್ಭದಲ್ಲಿ ಪ್ರಸ್ತಾಪಿಸಿದರು. ಭಾರತದ ರಕ್ಷಣಾ ಸಾಮಗ್ರಿ ತಯಾರಿಕಾ ವಲಯದಲ್ಲಿ ಪಾಲ್ಗೊ­ಳ್ಳು­ವಂತೆ ಅಮೆರಿಕದ ಕಂಪೆನಿಗಳಿಗೆ ಮೋದಿ ಆಹ್ವಾನ ನೀಡಿದರು.

ಉಭಯ ನಾಯಕರ ಮೊದಲ ಅಧಿಕೃತ ಸಭೆಯಲ್ಲಿ, ದಕ್ಷಿಣ ಏಷ್ಯಾ­ದಲ್ಲಿನ ಭಯೋತ್ಪಾದನೆ ಮತ್ತು ಪಶ್ಚಿಮ ಏಷ್ಯಾದಲ್ಲಿ ಇತ್ತೀಚೆಗೆ ಕೇಳಿ ಬರುತ್ತಿರುವ ಉಗ್ರರ ಬೆದರಿಕೆ ವಿಷಯ ಕುರಿತೂ ಚರ್ಚೆ ನಡೆಯಿತು.
ಆಹಾರ ಭದ್ರತೆ ಕುರಿತು ಭಾರತಕ್ಕೆ ಇರುವ ಆತಂಕವು ವಿಶ್ವ ವ್ಯಾಪಾರ ಸಂಘಟನೆಯಲ್ಲಿ (ಡಬ್ಲ್ಯುಟಿಒ) ನಿವಾ­ರಣೆ ಆಗಲೇಬೇಕು ಎಂದು ಒಬಾಮ ಅವರಿಗೆ ಮೋದಿ  ಒತ್ತಿ ಹೇಳಿದರು.

ನಂತರ ನಡೆದ ಜಂಟಿ ಪತ್ರಿಕಾ­ಗೋಷ್ಠಿ­ಯಲ್ಲಿ ಮಾತನಾಡಿದ ಮೋದಿ ‘ನಾಗರಿಕ ಪರಮಾಣು  ಸಹಭಾಗಿತ್ವ ಒಪ್ಪಂದವನ್ನು ಮುಂದು­ವ­ರಿಸಲು ನಾವು ಕಟ್ಟಿಬದ್ಧರಾಗಿದ್ದೇವೆ. ನಾಗರಿಕ ಪರಮಾಣು ಶಕ್ತಿ  ಸಹಕಾರಕ್ಕೆ ಸಂಬಂಧಿಸಿದ ವಿಷಯ­ಗಳನ್ನು ಶೀಘ್ರ ಪರಿಹರಿಸಲು ನಿರ್ಧರಿ­ಸಿದ್ದೇವೆ. ಇಂಧನ ಭದ್ರತೆ ಅಗತ್ಯ ಪೂರೈಸಲು ಇದು ಭಾರತಕ್ಕೆ ಅವಶ್ಯಕ’ ಎಂದು ಹೇಳಿದರು.

‘ಡಬ್ಲ್ಯುಟಿಒ ಬಗ್ಗೆ ನಡೆದ ಮುಕ್ತ ಚರ್ಚೆಯಲ್ಲಿ, ನಮ್ಮ ಆಹಾರ ಭದ್ರತೆ ಬಗ್ಗೆಯೂ ಕಾಳಜಿ ವಹಿಸಬೇಕು’ ಎಂದು ಹೇಳಿರುವುದಾಗಿ ಪ್ರಧಾನಿ ನುಡಿದರು.ಶ್ರದ್ಧಾಂಜಲಿ: ಶೃಂಗಸಭೆ ಬಳಿಕ ಇಬ್ಬರು ನಾಯಕರೂ ಮಾರ್ಟಿನ್‌ ಲೂಥರ್‌ ಕಿಂಗ್‌ ಸ್ಮಾರಕ ಸ್ಥಳಕ್ಕೆ ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಿದರು.

ಒಬಾಮಗೆ ಆಹ್ವಾನ
ತಮಗೆ ಅನುಕೂಲವಾದ ಸಂದರ್ಭ­ದಲ್ಲಿ ಭಾರತಕ್ಕೆ ಭೇಟಿ ನೀಡುವಂತೆ ಮೋದಿ ಅವರು ಒಬಾಮ ಅವರನ್ನು ಆಹ್ವಾನಿಸಿ­ದರು. ಇದನ್ನು ಶ್ವೇತಭವನ ಒಪ್ಪಿಕೊಂಡಿದೆ.

ರಕ್ಷಣಾ ಒಪ್ಪಂದ ವಿಸ್ತರಣೆ

ರಕ್ಷಣಾ ಒಪ್ಪಂದ ವಿಸ್ತರಿಸಲು ಉಭಯ ರಾಷ್ಟ್ರಗಳು ತಾತ್ವಿಕ ಒಪ್ಪಿಗೆ ನೀಡಿವೆ. ಅಮೆರಿಕದ ರಕ್ಷಣಾ ಕಾರ್ಯ­ದರ್ಶಿ ಚುಕ್‌ ಹೇಗಲ್‌ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.

2005ರಲ್ಲಿ ಆಗಿನ ರಕ್ಷಣಾ ಸಚಿವ ಪ್ರಣವ್ ಮುಖರ್ಜಿ ಮತ್ತು ಅಮೆರಿಕ ರಕ್ಷಣಾ ಕಾರ್ಯದರ್ಶಿ ಡೊನಾಲ್‌್ಡ ರುಮ್‌್ಸಫೆಲ್‌್ಡ ಅವರು ಸಹಿ ಹಾಕಿದ್ದ ರಕ್ಷಣಾ ಒಪ್ಪಂದವು ಮುಂದಿನ ವರ್ಷ ಕೊನೆಗೊಳ್ಳಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.