ADVERTISEMENT

ಉಗ್ರರ ವಿರುದ್ಧ ಮಾತ್ರ ಎಫ್‌–16

ಅಮೆರಿಕ ಸಂಸದರ ಆತಂಕಕ್ಕೆ ಪಾಕಿಸ್ತಾನ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2016, 11:13 IST
Last Updated 30 ಏಪ್ರಿಲ್ 2016, 11:13 IST
ಉಗ್ರರ ವಿರುದ್ಧ ಮಾತ್ರ ಎಫ್‌–16
ಉಗ್ರರ ವಿರುದ್ಧ ಮಾತ್ರ ಎಫ್‌–16   

ವಾಷಿಂಗ್ಟನ್‌ (ಪಿಟಿಐ):  ಅಮೆರಿಕದಿಂದ ಖರೀದಿಸುವ ಎಫ್‌–16 ಯುದ್ಧ ವಿಮಾನಗಳನ್ನು ಉಗ್ರರ ವಿರುದ್ಧದ ಕಾರ್ಯಾಚರಣೆಗೆ ಮಾತ್ರ ಬಳಸಲಾಗುವುದು ಎಂದು ಪಾಕಿಸ್ತಾನ ಸ್ಪಷ್ಟಪಡಿಸಿದೆ.

ಎಂಟು ಎಫ್‌–16 ಯುದ್ಧ ವಿಮಾನಗಳನ್ನು ಪಾಕಿಸ್ತಾನಕ್ಕೆ ಮಾರಾಟ ಮಾಡುತ್ತಿರುವುದಕ್ಕೆ ಅಮೆರಿಕದ ಸಂಸತ್‌ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ಪಾಕಿಸ್ತಾನದ ರಾಯಭಾರಿ ಕಚೇರಿ ಈ ಸ್ಪಷ್ಟನೆ ನೀಡಿದೆ.

ಪಾಕಿಸ್ತಾನವು ಈ ಯುದ್ಧ ವಿಮಾನಗಳನ್ನು ಭಯೋತ್ಪಾದಕರ ವಿರುದ್ಧ ಬಳಸುವ ಬದಲಾಗಿ ಭಾರತದ ವಿರುದ್ಧವೇ ಪ್ರಯೋಗಿಸುವ ಸಾಧ್ಯತೆಗಳು ಹೆಚ್ಚು ಎಂದು ಸಂಸದರು ಆತಂಕ ವ್ಯಕ್ತಪಡಿಸಿದ್ದರು.

ಉಗ್ರಗಾಮಿ ಚಟುವಟಿಕೆಗಳನ್ನು ನಿಗ್ರಹಿಸಲು ಉಭಯ ದೇಶಗಳ ಪರಸ್ಪರ ಸಹಕಾರ ಅಗತ್ಯ. ಹೀಗಾಗಿ ಅಮೆರಿಕ ಎಫ್‌–16 ಯುದ್ಧ ವಿಮಾನಗಳನ್ನು ಮಾರಾಟ ಮಾಡುತ್ತಿದೆ ಎಂದು ತಿಳಿಸಿದೆ.

ಉಗ್ರರನ್ನು ಸದೆಬಡಿಯಲು ನಿರಂತರವಾಗಿ ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದು ಅಗತ್ಯವಾಗಿದೆ. ಇದಕ್ಕಾಗಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರಲ್ಲಿ ಎಫ್‌–16 ಖರೀದಿಯೂ ಒಂದಾಗಿದೆ ಎಂದು ತಿಳಿಸಿದೆ.

ಭಾರತದ ನಿಲುವಿಗೆ ಆಕ್ಷೇಪ
ನ್ಯೂಯಾರ್ಕ್‌ (ಪಿಟಿಐ): ಭಾರತದ ಜತೆ ಸಂಬಂಧವೃದ್ಧಿಸಿ ಕೊಳ್ಳಲು ಪಾಕಿಸ್ತಾನ ಬಯಸುತ್ತದೆ. ಆದರೆ, ಭಾರತ ಕೇವಲ ಭಯೋತ್ಪಾದನೆ ವಿಷಯವೊಂದನ್ನೇ ಕೇಂದ್ರೀಕರಿಸಿಕೊಂಡು ಮಾತುಕತೆಗೆ ಮುಂದಾಗುತ್ತಿದೆ. ಇದರಿಂದ ಯಾವುದೇ ಪ್ರಗತಿ ಸಾಧ್ಯವಾಗುತ್ತಿಲ್ಲ ಎಂದು ವಿಶ್ವಸಂಸ್ಥೆಯಲ್ಲಿನ ಪಾಕಿಸ್ತಾನದ ರಾಯಭಾರಿ ಮಲೀಹಾ ಲೋಧಿ ತಿಳಿಸಿದ್ದಾರೆ.

‘ಪ್ರಾದೇಶಿಕ ಸ್ಥಿರತೆಯಲ್ಲಿ ಪಾಕಿಸ್ತಾನದ ಪಾತ್ರ’ ಕುರಿತು ಮಾತನಾಡಿದ ಅವರು, ಸಮಗ್ರವಾದ ಶಾಂತಿ ಪ್ರಕ್ರಿಯೆ ಕುರಿತು ಮಾತುಕತೆ ನಡೆಸಲು ಪಾಕಿಸ್ತಾನ ಬಯಸುತ್ತದೆ. ಆದರೆ, ಭಾರತ ಇನ್ನೂ ಒಪ್ಪಿಕೊಂಡಿಲ್ಲ. ಕೇವಲ ಭಯೋತ್ಪಾದನೆ ಕುರಿತ ಮಾತುಕತೆಗೆ ಆಸಕ್ತಿವಹಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.