ADVERTISEMENT

ಕದನ ವಿರಾಮ: ಗಾಜಾ ಪಟ್ಟಿ ಶಾಂತ

ಹಮಾಸ್‌ನ ರಾಕೆಟ್‌ ದಾಳಿ ಸದ್ಯಕ್ಕೆ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 28 ಜುಲೈ 2014, 19:30 IST
Last Updated 28 ಜುಲೈ 2014, 19:30 IST

ಗಾಜಾ/ಜೆರುಸಲೇಂ (ಪಿಟಿಐ): ಗಾಜಾದಲ್ಲಿ ಸೋಮವಾರ ಶಾಂತಿ ನೆಲೆಸಿತ್ತು. ಕಳೆದ 20 ದಿನಗಳಿಂದ ನಡೆಯುತ್ತಿರುವ ಹಿಂಸಾತ್ಮಕ ಸಂಘರ್ಷ ಕೊನೆಗೊಳಿಸಲು ಕದನ ವಿರಾಮಕ್ಕೆ ವಿಶ್ವ ಸಂಸ್ಥೆ ಮತ್ತು ಅಮೆರಿಕ ಭಾನುವಾರ ಕರೆ ನೀಡಿತ್ತು. ಹೀಗಾಗಿ ಹಮಾಸ್‌ನ ರಾಕೆಟ್‌ ದಾಳಿ ಕೂಡ ಬಹುತೇಕ ನಿಂತಿದೆ. 

ಇಸ್ರೇಲ್‌ ಮತ್ತು ಪ್ಯಾಲೆಸ್ಟೀನ್‌ ನಡುವೆ ಮಾನವೀಯ ನೆಲೆಯಲ್ಲಿ ತಕ್ಷಣ ಮತ್ತು ಬೇಷರತ್‌ ಕದನ ವಿರಾಮ ಪಾಲಿಸುವಂತೆ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಭಾನುವಾರ ರಾತ್ರಿ ಕರೆ ನೀಡಿತ್ತು. ಈದ್‌ ಉಲ್‌ ಫಿತ್ರ್‌ ಹಬ್ಬದ ನಂತರವೂ ಕದನ ವಿರಾಮ ಮುಂದುವರಿಸುವಂತೆ ಮತ್ತು ಗಾಜಾ ಪಟ್ಟಿಗೆ ತುರ್ತಾಗಿ ಅಗತ್ಯ ಇರುವ ನೆರವು ಒದಗಿಸಲು ಅವಕಾಶ ನೀಡುವಂತೆ ವಿಶ್ವ ಸಂಸ್ಥೆ ಕೋರಿತ್ತು.

ಕದನದಿಂದಾಗಿ ಈವರೆಗೆ ಪ್ಯಾಲೆಸ್ಟೀನ್‌ನ 1,030 ಜನರು ಮತ್ತು ಇಸ್ರೇಲ್‌ನ 46 ಜನರು ಮೃತರಾಗಿದ್ದಾರೆ. ಈ ಹಿಂದೆ ಪ್ಯಾಲೆಸ್ಟೀನ್‌ನಲ್ಲಿ ಮೃತರಾದವರ ಸಂಖ್ಯೆ 1,060 ಎಂದು ಹೇಳ ಲಾಗಿತ್ತು. ಆದರೆ ನಾಪತ್ತೆಯಾಗಿದ್ದಾರೆ ಎಂದು ಹೇಳಲಾದ 30 ಜನರು ಹಿಂದಿರುಗುವುದ ರೊಂದಿಗೆ ಮೃತರ ಸಂಖ್ಯೆ 1,030 ಎಂದು ಪ್ಯಾಲೆ ಸ್ಟೀನ್‌ ಆರೋಗ್ಯ ಸಚಿವಾಲಯ ತಿಳಿಸಿದೆ.  ಭಾನುವಾರ ಮತ್ತು ಸೋಮವಾರ ಗಾಜಾದಲ್ಲಿ ಶಾಂತಿ ನೆಲೆಸಿತ್ತು ಎಂದು ಬಿಬಿಸಿ ವರದಿ ಮಾಡಿದೆ.

ಹೀಗಿದ್ದರೂ ದಕ್ಷಿಣ ಇಸ್ರೇಲ್‌ನ ಬಯಲು ಪ್ರದೇಶವೊಂದರ ಮೇಲೆ ರಾಕೆಟ್‌ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್‌ ಹೇಳಿದೆ. ಗಾಜಾದ ಮೇಲೆ ಭಾನುವಾರದಿಂದ ಯಾವುದೇ ದಾಳಿ ನಡೆಸಲಾಗಿಲ್ಲ. ಆದರೆ ಪ್ಯಾಲೆಸ್ಟೀನ್‌ ಕಡೆಯಿಂದ ಭಾನುವಾರ ರಾತ್ರಿ ಮತ್ತು ಸೋಮವಾರ ಬೆಳಿಗ್ಗೆ ಎರಡು ರಾಕೆಟ್‌ ದಾಳಿಗಳು ನಡೆದಿವೆ. ಅದಕ್ಕೆ ಉತ್ತರವಾಗಿ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್‌ ಸೇನಾ ವಕ್ತಾರರು ತಿಳಿಸಿದ್ದಾರೆ.

ಇಸ್ರೇಲ್‌  ಗಾಜಾಪಟ್ಟಿಯ ಮೇಲೆ ನಡೆಸಿದ ಬಾಂಬ್‌ ದಾಳಿಗೆ ನಾಲ್ಕು ವರ್ಷದ ಬಾಲಕನೊಬ್ಬ ಬಲಿಯಾಗಿದ್ದಾನೆ.

ಭಾರತ ಮೂಲದ ಯೋಧನಿಗೆ ಭಾವಪೂರ್ಣ ವಿದಾಯ
ಗಾಜಾ ಪಟ್ಟಿಯ ಗಡಿಯಲ್ಲಿ ಭಾರತ ಮೂಲದ 27 ವರ್ಷದ ಇಸ್ರೇಲ್ ಸೈನಿಕ ಫಿರಂಗಿ ದಾಳಿ ಯಲ್ಲಿ ಮೃತಪಟ್ಟಿದ್ದು ಅವರ ಅಂತ್ಯ ಸಂಸ್ಕಾರ ದಲ್ಲಿ ಸಾವಿರಾರು ಜನರು ಭಾಗವಹಿಸಿ ಅಶ್ರುಪೂರ್ಣ ವಿದಾಯ ಹೇಳಿದರು. 

ಬರಾಕ್‌ ರಫಾಯೆಲ್‌ ಡೆಗೋರ್ಕರ್‌ ಶನಿ ವಾರ ರಾತ್ರಿ ಪ್ಯಾಲೆಸ್ಟೀನ್‌ ಫಿರಂಗಿ ದಾಳಿಗೆ ಬಲಿಯಾದರು. ಭಾನುವಾರ ಅವರ ಹುಟ್ಟೂರು ಗನ್‌ ಯವ್ನೆಯಲ್ಲಿ ಅಂತ್ಯ ಸಂಸ್ಕಾರ ನಡೆಯಿತು.

ಅವರ ಇಬ್ಬರು ಕಿರಿಯ ಸಹೋದರರು ಕೂಡ ಸೈನಿಕರಾಗಿದ್ದು ಗಾಜಾ ಪಟ್ಟಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ಬೆನೆ ಇಸ್ರೇಲ್‌ ಎಂಬ ಈ ಸಮುದಾಯದ ಮೂಲ ಮುಂಬೈ. ಇದು ಇಸ್ರೇಲ್‌ನಲ್ಲಿರುವ ಭಾರತ ಮೂಲದ  ಅತಿ ದೊಡ್ಡ ಯಹೂದಿ ಸಮುದಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT