ADVERTISEMENT

ಕನ್ನಡಿಗ ಮೂರ್ತಿ ಅಮೆರಿಕದ ಪ್ರಧಾನ ಸರ್ಜನ್‌

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2015, 7:22 IST
Last Updated 23 ಏಪ್ರಿಲ್ 2015, 7:22 IST

ವರ್ಜಿನಿಯಾ (ಪಿಟಿಐ): ಅಮೆರಿಕದ ಆರೋಗ್ಯ ಸೇವೆಯ (ಒಬಾಮ ಕೇರ್‌) ಅತ್ಯುನ್ನತ ಹುದ್ದೆಯಾದ ಸರ್ಜನ್‌ ಜನರಲ್‌ ಆಗಿ   ಮಂಡ್ಯ ಜಿಲ್ಲೆಯ ಹಲ್ಲೆಗೆರೆ ಮೂಲದ ಅಮೆರಿಕದ ವೈದ್ಯ ಡಾ.ವಿವೇಕ್‌ ಮೂರ್ತಿ (37) ಅವರು ಗುರುವಾರ ಇಲ್ಲಿ ಅಧಿಕಾರ ಸ್ವೀಕರಿಸಿದರು.

ಅಮೆರಿಕದ ಉಪಾಧ್ಯಕ್ಷ  ಜೋಸ್‌ ಬಿಡೆನ್‌ ಅವರು ಮೂರ್ತಿಗೆ ಪ್ರಮಾಣ ವಚನ ಬೋಧಿಸಿದರು. ಭಗದ್ಗೀತೆ ಹೆಸರಿನಲ್ಲಿ ಮೂರ್ತಿ ಪ್ರಮಾಣ ವಚನ ಸ್ವೀಕರಿಸಿದರು. ಅಧಿಕಾರ ಸ್ವೀಕರಿಸಿದ ನಂತರ ಅವರು, ‘ಸರ್ಜನ್‌ ಜನರಲ್‌ ಹುದ್ದೆಯು ಅತ್ಯಂತ ಶ್ರೇಷ್ಠವಾದ ಗೌರವ ಮತ್ತು ಅಷ್ಟೇ ಗಂಭೀರವಾದ ಜವಾಬ್ದಾರಿ. ಈ ಅವಕಾಶ ನೀಡಿದ ಅಮೆರಿಕದ ಅಧ್ಯಕ್ಷ ಬರಾಕ್‌ ಒಬಾಮ ಅವರಿಗೆ ಕೃತಜ್ಞತೆ’ ಎಂದು  ಹೇಳಿದರು.

ಅಮೆರಿಕದ ಇತಿಹಾಸದಲ್ಲಿಯೇ ಪ್ರಧಾನ ಸರ್ಜನ್‌ ಸ್ಥಾನವನ್ನು ಅಲಂಕರಿಸಿದ ಅತಿ ಚಿಕ್ಕ ವಯಸ್ಸಿನವರು ಎಂಬ ಹೆಗ್ಗಳಿಕೆಗೂ ಮೂರ್ತಿ ಪಾತ್ರರಾಗಿದ್ದಾರೆ. ಇದು ಭಾರತೀಯ ಮೂಲದ ವ್ಯಕ್ತಿಯೊಬ್ಬರಿಗೆ ಅಮೆರಿಕ­ದಲ್ಲಿ ಸಿಗುತ್ತಿರುವ ಉನ್ನತ ಮಟ್ಟದ ಗೌರವವಾಗಿದೆ. ಅಧಿಕಾರ ಸ್ವೀಕರಿಸಿದ ನಂತರ ಒಟ್ಟು ನಾಲ್ಕು ವರ್ಷಗಳವರೆಗೆ ಅವರು ಈ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.